ಖ್ಯಾತ ಸುಗಮ ಸಂಗೀತ ಗಾಯಕಿ ಅನುರಾಧಾ ಧಾರೇಶ್ವರ ನಿಧನ

KannadaprabhaNewsNetwork |  
Published : Oct 10, 2025, 01:00 AM IST
9ಡಿಡಬ್ಲೂಡಿ7ಅನುರಾಧಾ ಧಾರೇಶ್ವರ | Kannada Prabha

ಸಾರಾಂಶ

ಧಾರವಾಡ ಆಕಾಶವಾಣಿಯ ಲತಾ ಮಂಗೇಶ್ವರ ಎಂದೇ ಖ್ಯಾತಿ ಪಡೆದಿದ್ದ, ಪ್ರಸಿದ್ಧ ಸುಗಮ ಸಂಗೀತ ಗಾಯಕಿ ಅನುರಾಧಾ ಧಾರೇಶ್ವರ (88) ಗುರುವಾರ ಹೃದಯಾಘಾತದಿಂದ ನಿಧನರಾದರು.

ಧಾರವಾಡ: ಧಾರವಾಡ ಆಕಾಶವಾಣಿಯ ಲತಾ ಮಂಗೇಶ್ವರ ಎಂದೇ ಖ್ಯಾತಿ ಪಡೆದಿದ್ದ, ಪ್ರಸಿದ್ಧ ಸುಗಮ ಸಂಗೀತ ಗಾಯಕಿ ಅನುರಾಧಾ ಧಾರೇಶ್ವರ (88) ಗುರುವಾರ ಹೃದಯಾಘಾತದಿಂದ ನಿಧನರಾದರು.

ಇಲ್ಲಿಯ ಮಾಳಮಡ್ಡಿಯಲ್ಲಿ ನೆಲೆಸಿದ್ದ ಅನುರಾಧಾ ಧಾರೇಶ್ವರ ಅವರಿಗೆ ಓರ್ವ ಪುತ್ರ, ಸೊಸೆ ಇದ್ದಾರೆ. ಅವರ ಅಂತ್ಯಕ್ರಿಯೆಯನ್ನು ಗುರುವಾರ ಸಂಜೆ ಹೊಸಯಲ್ಲಾಪುರದ ರುದ್ರಭೂಮಿಯಲ್ಲಿ ನೆರವೇರಿಸಲಾಯಿತು. ಮೃತರಿಗೆ ವಿನಾಯಕ ರಂಗಾಪುರ, ಕೃಷ್ಣ ಕಟ್ಟಿ, ಪಾಮಡಿ ಆಚಾರ್ಯ, ಲತಾ ಶಿವಾನಂದ, ಪ್ರಭಾ ಶಿರೂರ ಶ್ರದ್ಧಾಂಜಲಿ ಸಲ್ಲಿಸಿದರು.

ಅನುರಾಧಾ ಸಾಧನೆ: 1938ರ ನವೆಂಬರ್ 26ರಂದು ಹುಬ್ಬಳ್ಳಿಯಲ್ಲಿ ಜನಿಸಿದ ಅನುರಾಧಾ, ಕಷ್ಟಗಳ ನಡುವೆ ಹೋರಾಟದ ಜೀವನ ನಡೆಸಿ ಅತ್ಯುತ್ತಮ ಗಾಯಕಿಯಾಗಿ ಹೊರಹೊಮ್ಮಿದರು. ಖ್ಯಾತಗಾಯಕ, ಆಕಾಶವಾಣಿ ಕಲಾವಿದ ರಾಮಚಂದ್ರ ಜಂತ್ರಿ ಅವರಿಂದ ಗಾಯನ ಕಲಿತರು. ಕರ್ನಾಟಕ ವಿವಿಯಲ್ಲಿ ಸಂಗೀತ ಪದವಿ ಪಡೆದರು. ಅನುರಾಧಾ 1966ರಲ್ಲಿ ಧಾರವಾಡ ಆಕಾಶವಾಣಿಯಲ್ಲಿ ಕಾರ್ಯಕ್ರಮ ನಿರೂಪಕಿಯಾಗಿ ಕೆಲಸಕ್ಕೆ ಸೇರಿದರು. ತಿಂಗಳಗೀತೆ, ರಾಮೋತ್ಸವ ಗೀತೆಗಳು, ರೂಪಕ, ನವರಾತ್ರಿಯ ಗೀತೆಗಳು ಹೀಗೆ ಸಂಗೀತದ ವಿವಿಧ ಪ್ರಕಾರಗಳಲ್ಲಿ ತಮ್ಮ ಧ್ವನಿಯನ್ನು ಆಳಡಿಸಿಕೊಳ್ಳುವ ಶೈಲಿಯನ್ನು ರೂಢಿಸಿಕೊಂಡರು.

ಇವರು ಹಾಡಿದ ’ಓ ನನ್ನ ದೇಶಬಾಂಧವರೇ'''''''' ಎಂಬ ನಾಡಿನ ಗೀತೆಯಂತೂ ಧಾರವಾಡದ ಮನೆ ಮನೆಗಳಲ್ಲೂ ಜನ ಜನಿತವಾಗಿತ್ತು. ಖ್ಯಾತ ಗಾಯಕ ಮಲ್ಲಿಕಾರ್ಜುನ ಮನ್ಸೂರ್ ಅವರ ಸಂಗೀತ ನಿರ್ದೇಶನದ ಹಲವಾರು ಗೀತೆಗಳಿಗೂ ಇವರು ದನಿಯಾಗಿದ್ದರು.

ತಮ್ಮ ಗಾಯನವನ್ನು ಆಕಾಶವಾಣಿಗಷ್ಟೇ ಮೀಸಲಾಗಿಡದೆ ಹೊರಗಿನ ಸಮಾರಂಭಗಳಲ್ಲಿ ಹೆಚ್ಚಾಗಿ ಹಾಡುತ್ತಾ ಧಾರವಾಡದ ಕೋಗಿಲೆಯಾಗಿ ಸುಪ್ರಸಿದ್ಧರಾದರು. ಅವರು ಹಾಡುತ್ತಿದ್ದ ವರಕವಿ ಬೇಂದ್ರೆ ಅವರ ‘ಬೆಳುದಿಂಗಳ ನೋಡ ಬೆಳುದಿಂಗಳ ನೋಡ'''''''' ಗೀತೆಯಂತೂ ದಕ್ಷಿಣ ಕರ್ನಾಟಕದ ಶ್ರೋತೃಗಳಿಗೆ ಅಚ್ಚುಮೆಚ್ಚು. ಅವರೇ ಸಂಯೋಜಸಿ ಹಾಡಿದ ’ತಿಂಗಳ ಲೋಕದ ಅಂಗಳದಲ್ಲಿ’ ರೂಪಕ ಆಕಾಶವಾಣಿಯಲ್ಲಿ ಜನಪ್ರಿಯವಾಗಿತ್ತು. ಕನ್ನಡವಲ್ಲದೆ ಕೊಂಕಣಿ, ಮರಾಠಿ, ಹಿಂದಿ, ಬಂಗಾಳಿ, ತೆಲುಗು ಮುಂತಾದ ಭಾಷೆಯ ಗೀತೆಗಳನ್ನೂ ಸುಲಲಿತವಾಗಿ ಹಾಡುತ್ತಿದ್ದುದರಿಂದ ಇವರಿಗೆ ಬಹು ಭಾಷಾ ಗಾಯಕಿ ಎಂಬ ಬಿರುದಾಂಕಿತವಾಯಿತು.

ಗಾಯನದ ಸಾಧನೆಗಾಗಿ ಅನುರಾಧಾ ಅವರಿಗೆ ಅನೇಕ ಪ್ರಶಸ್ತಿಗಳು ಸಂದಿವೆ. ’ಕರ್ನಾಟಕ ಕಲಾತಿಲಕ’ ಪ್ರಶಸ್ತಿ, 1995ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಮತ್ತು ಸುಗಮ ಸಂಗೀತ ಕ್ಷೇತ್ರದ ಪರಮೋಚ್ಚ ‘ಸಂತ ಶಿಶುನಾಳ ಶರೀಫ ಪ್ರಶಸ್ತಿ’ಗಳು ಸಂದಿವೆ. ಕೊಂಕಣಿ ಭಾಷೆಯಲ್ಲಿನ ಅವರ ಸಂಗೀತ ಸಾಧನೆಗಾಗಿ ''''''''ಕಲಾಕಾರ್'''''''' ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಅವರಿಗೆ ಗಂಗೂಬಾಯಿ ಹಾನಗಲ್ ರಾಷ್ಟ್ರೀಯ ಪುರಸ್ಕಾರ ಸಹಾ ಸಂದಿದೆ.

PREV

Recommended Stories

ಸಂಪುಟ ಪುನರ್‌ ರಚನೆ ಸುಳಿವು : ದಲಿತ ಸಚಿವರ ಸಭೆ!
ಶೂದ್ರ ಶ್ರೀನಿವಾಸ್‌ ಸೇರಿ ಐವರಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ