ಶಿರಸಿ: ಪ್ರಸಿದ್ಧ ಯಕ್ಷಗಾನ ಕಲಾವಿದ ಶ್ರೀಪಾದ ಭಟ್ ಥಂಡಿಮನೆ ಗುರುವಾರ ಮುಂಜಾನೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ತಮ್ಮ 62ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ.
ಯಕ್ಷಗಾನ ರಂಗದಲ್ಲಿ ಇವರು ಇಂದ್ರನಾಗಿ, ರಾಮ ಹಾಗೂ ವಿವಿಧ ರಾಜ ಗಾಂಭೀರ್ಯದ ಪಾತ್ರಗಳ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದರು. ಕರಾವಳಿಯ ಪ್ರಮುಖ ಯಕ್ಷಗಾನ ಮೇಳಗಳಲ್ಲಿ ಸುದೀರ್ಘ ಕಾಲ ಸೇವೆ ಸಲ್ಲಿಸಿದ್ದರು.
ಕೆಲಕಾಲದಿಂದ ತೀವ್ರವಾದ ಕಾಲು ನೋವು ಮತ್ತು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದರು. ಈ ಸಂಬಂಧ ಅವರು ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಇನ್ನೇನು ಶ್ರೀಪಾದ್ ಭಟ್ ಅವರು ಚೇತರಿಕೊಂಡು ಮತ್ತೆ ಯಕ್ಷಗಾನ ರಂಗಕ್ಕೆ ಮರಳುತ್ತಿದ್ದಾರೆ ಎನ್ನುವಷ್ಟರಲ್ಲಿ ಹೃದಯಾಘಾತದಿಂದ ಇಹಲೋಕ ತ್ಯಜಿಸಿದ್ದಾರೆ. ಅವರು ಯಕ್ಷಗಾನ ಭಾಷೆಯಲ್ಲಿ ಸಮರ್ಥ ಎರಡನೇ ವೇಷಧಾರಿಯಾಗಿದ್ದರು.ಈ ಅಗಲುವಿಕೆ ಯಕ್ಷಗಾನ ರಂಗಕ್ಕೆ ದೊಡ್ಡ ನಷ್ಟ ಉಂಟಾಗಿದೆ. ಪೌರಾಣಿಕ ಪ್ರಸಂಗದ ಯಾವುದೇ ಪಾತ್ರ ನಿರ್ವಹಿಸುವ ಶಕ್ತಿ ಅವರಲ್ಲಿತ್ತು. ಆಳಂಗ, ಕಂಚಿನ ಕಂಠ, ಹಿತಮಿತವಾದ ಕುಣಿತ, ಪಾತ್ರಕ್ಕೆ ಬೇಕಾದ ಪರಿಪೂರ್ಣ ಅರ್ಥಗಾರಿಕೆ ಅವರನ್ನು ಆವರಿಸಿಕೊಂಡಿತ್ತು. ಅಲ್ಲದೆ ಭೀಷ್ಮ, ಸಾಲ್ವ, ಹನುಮಂತ, ರಾವಣ, ರಾಮ, ದಕ್ಷ, ಈಶ್ವರ, ವೀರಮಣಿ, ದುಷ್ಟಬುದ್ಧಿ, ಮಾಗಧ ಸೇರಿ ಅನೇಕ ನೂತನ ಪ್ರಸಂಗಗಳ ಪಾತ್ರಗಳಿಗೆ ಜೀವ ಅವರು ತುಂಬಿದ್ದರು.