ಕುಷ್ಟಗಿಯಲ್ಲಿ ವಸೂಲಾಗ್ತಿಲ್ಲ ವಾಣಿಜ್ಯ ಮಳಿಗೆಗಳ ಬಾಡಿಗೆ

KannadaprabhaNewsNetwork |  
Published : Sep 14, 2024, 01:47 AM IST
ಪೋಟೊ12ಕೆಎಸಟಿ1: ಕುಷ್ಟಗಿ ತಾಲೂಕು ಪಂಚಾಯತಿಯ ವಾಣಿಜ್ಯ ಮಳಿಗೆಗಳು. | Kannada Prabha

ಸಾರಾಂಶ

ಕುಷ್ಟಗಿ ತಾಲೂಕು ಪಂಚಾಯಿತಿ ವ್ಯಾಪ್ತಿಗೆ ಒಳಪಡುವಂತಹ ವಾಣಿಜ್ಯ ಮಳಿಗೆಗಳ ₹29.39 ಲಕ್ಷ ಬಾಡಿಗೆ ಬಾಕಿ ಇದ್ದು, ಸರಿಯಾಗಿ ವಸೂಲಿಯಾಗದ ಪರಿಣಾಮ ತಾಪಂ ಆದಾಯಕ್ಕೆ ಕೊಕ್ಕೆ ಬಿದ್ದಿದೆ.

ಪರಶಿವಮೂರ್ತಿ ದೋಟಿಹಾಳ

ಕುಷ್ಟಗಿ: ತಾಲೂಕು ಪಂಚಾಯಿತಿ ವ್ಯಾಪ್ತಿಗೆ ಒಳಪಡುವಂತಹ ವಾಣಿಜ್ಯ ಮಳಿಗೆಗಳ ₹29.39 ಲಕ್ಷ ಬಾಡಿಗೆ ಬಾಕಿ ಇದ್ದು, ಸರಿಯಾಗಿ ವಸೂಲಿಯಾಗದ ಪರಿಣಾಮ ತಾಪಂ ಆದಾಯಕ್ಕೆ ಕೊಕ್ಕೆ ಬಿದ್ದಿದೆ.

ಪಟ್ಟಣದ ಹೃದಯ ಭಾಗದಲ್ಲಿ ತಾಲೂಕು ಪಂಚಾಯಿತಿ ವತಿಯಿಂದ ಸುಮಾರು 55 ವಾಣಿಜ್ಯ ಮಳಿಗೆಗಳನ್ನು ನಿರ್ಮಾಣ ಮಾಡಿದ್ದು, ವ್ಯಾಪಾರ ವಹಿವಾಟುಗಳನ್ನು ನಡೆಸಲು ಬಾಡಿಗೆ ನೀಡಲಾಗಿದೆ. ಈ ಮಳಿಗೆಗಳಲ್ಲಿ ಲಾಭದಾಯಕ ವ್ಯಾಪಾರ ನಡೆಯುತ್ತಿದ್ದರೂ ಸಹಿತ ಕೆಲವರು ತಿಂಗಳ ಬಾಡಿಗೆ ಕಟ್ಟುವಲ್ಲಿ ವಿಳಂಬ ನೀತಿ ಅನುಸರಿಸುತ್ತಿದ್ದು, ತಾಪಂಗೆ ಬರಬೇಕಿರುವ ಲಕ್ಷಾಂತರ ರೂಪಾಯಿಯ ಆದಾಯವು ಬರುತ್ತಿಲ್ಲ.

ಮರು ಟೆಂಡರ್‌ ಆಗಿಲ್ಲ: ಈ ವಾಣಿಜ್ಯ ಮಳಿಗೆಗಳನ್ನು 2010-11ನೇ ಸಾಲಿನಲ್ಲಿ ಟೆಂಡರ್‌ ಕರೆಯಲಾಗಿತ್ತು. ಅಲ್ಲಿಂದ ಇಲ್ಲಿಯವರೆಗೆ ಯಾವುದೇ ಟೆಂಡರ್‌ ಇಲ್ಲದೆ ಮುಂದುವರಿಸಿಕೊಂಡು ಬಂದಿದ್ದು, ಕಳೆದ ವರ್ಷ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ ನೇತೃತ್ವದಲ್ಲಿ ಬಾಡಿಗೆ ಬಾಕಿ ಇರುವ ವಾಣಿಜ್ಯ ಮಳಿಗೆಗಳಿಗೆ ಕೀಲಿ ಹಾಕುವ ಮೂಲಕ ಬಿಸಿ ಮುಟ್ಟಿಸಲಾಗಿತ್ತು. ಆ ಸಮಯದಲ್ಲಿ ಬಾಕಿ ಉಳಿಸಿಕೊಂಡ ಕೆಲವರು ಅಲ್ಪಸ್ವಲ್ಪ ಬಾಡಿಗೆ ಕಟ್ಟಿದ್ದಾರೆ. ಅಂದು ಶೀಘ್ರದಲ್ಲಿಯೇ ಟೆಂಡರ್‌ ಕರೆಯಲಾಗುವುದು ಎಂದು ಅಧಿಕಾರಿಗಳು ಹೇಳಿದ್ದರೂ ಸಹಿತ ಇಲ್ಲಿಯವರೆಗೆ ಯಾವುದೇ ಪ್ರಕ್ರಿಯೆ ನಡೆದಿಲ್ಲ.

ಹಣ ಮಾಡುವ ದುರುದ್ದೇಶ: ಈ ವಾಣಿಜ್ಯ ಮಳಿಗೆಗಳನ್ನು ವ್ಯಾಪಾರ ವಹಿವಾಟು ನಡೆಸಲು ನೀಡಿದರೆ ಟೆಂಡರ್‌ನಲ್ಲಿ ಬಾಡಿಗೆ ಪಡೆದುಕೊಂಡಿರುವ ಕೆಲವರು ಹಣ ಗಳಿಸುವ ದುರುದ್ದೇಶದಿಂದ ಅನ್ಯರಿಗೆ ಹೆಚ್ಚಿನ ಬಾಡಿಗೆಯ ರೂಪದಲ್ಲಿ ಕೊಟ್ಟಿರುತ್ತಾರೆ. ಇದು ಅಧಿಕಾರಿಗಳ ಗಮನಕ್ಕೆ ಇದ್ದರೂ ಸಹಿತ ಸುಮ್ಮನೆ ಕುಳಿತಿದ್ದಾರೆ ಎನ್ನುವುದು ಸಾರ್ವಜನಿಕರ ಆರೋಪವಾಗಿದೆ.

ವಾಣಿಜ್ಯ ಮಳಿಗೆಗಳು ಮುಖ್ಯ ರಸ್ತೆಯ ಪಕ್ಕದಲ್ಲಿ ಇರುವುದರಿಂದಾಗಿ ವ್ಯಾಪಾರ ವಹಿವಾಟು ಉತ್ತಮವಾಗಿ ನಡೆಯುತ್ತಿದೆ. ಮಾರುಕಟ್ಟೆಯು ಸಹಿತ ಬೆಳೆದಿದ್ದು, ಮರು ಟೆಂಡರ್‌ ಕರೆಯುವ ಮೂಲಕ ಅವಶ್ಯಕತೆ ಇರುವವರಿಗೆ ಮಾತ್ರ ಬಾಡಿಗೆ ನೀಡಬೇಕು ಎಂದು ಸ್ಥಳೀಯ ವ್ಯಾಪಾರಿಗಳು ಒತ್ತಾಯಿಸಿದ್ದಾರೆ.

ಸುಮಾರು 55 ವಾಣಿಜ್ಯ ಮಳಿಗೆಗಳ ಬಾಡಿಗೆಯು ಅಳತೆಯ ಆಧಾರದ ಮೇಲೆ ₹500ರಿಂದ ಪ್ರಾರಂಭಗೊಂಡು ₹7000ದವರೆಗೆ ಇದ್ದು, ಸದ್ಯ ಈ ಮಳಿಗೆಯ ಬಾಡಿಗೆಯು ಪ್ರತಿ ತಿಂಗಳಿಗೆ ₹1.35 ಲಕ್ಷ ಬರಬೇಕು. ಕೆಲವು ಬಾಡಿಗೆದಾರರು ಸುಮಾರು 8-10 ವರ್ಷಗಳಿಂದ ಬಾಡಿಗೆಯನ್ನು ಸರಿಯಾಗಿ ಕಟ್ಟಿಲ್ಲ. ಅಧಿಕಾರಿಗಳು ಸೂಕ್ತ ಕ್ರಮಕ್ಕೆ ಮುಂದಾಗಿ ಬಾಡಿಗೆಯ ಬಾಕಿ ವಸೂಲಿ ಮಾಡಬೇಕು ಎನ್ನುವುದು ಪ್ರಜ್ಞಾವಂತರ ಆಗ್ರಹವಾಗಿದೆ.ತಾಪಂ ವ್ಯಾಪ್ತಿಯ ವಾಣಿಜ್ಯ ಮಳಿಗೆಗಳ ಬಾಡಿಗೆಯ ಹಣ ಲಕ್ಷಾಂತರ ರೂಪಾಯಿ ಬಾಕಿಯಿದ್ದು, ವಸೂಲಾತಿಗಾಗಿ ಅನೇಕ ನೋಟಿಸ್‌ ನೀಡಲಾಗಿದೆ. ಕೆಲವರು ಕಟ್ಟುತ್ತಿದ್ದಾರೆ. ಟೆಂಡರ್‌ ಕರೆಯುವ ಕೆಲಸ ಪ್ರಗತಿಯಲ್ಲಿದ್ದು, ಬಾಡಿಗೆ ವಸೂಲಾತಿಯ ಜೊತೆಗೆ ಟೆಂಡರ್‌ ಕರೆಯಲು ಕ್ರಮ ಕೈಗೊಳ್ಳಲಾಗುವುದು ಎಂದು ತಾಪಂ ಇಒ ಪಂಪಾಪತಿ ಹಿರೇಮಠ ಹೇಳುತ್ತಾರೆ.

ವಾಣಿಜ್ಯ ಮಳಿಗೆಗಳ ಟೆಂಡರ್ ಕರೆಯದೆ ಬಹಳಷ್ಟು ವರ್ಷಗಳಾಗಿದ್ದು, ಅಧಿಕಾರಿಗಳು ಶೀಘ್ರದಲ್ಲಿ ಬಹಿರಂಗ ಹರಾಜು ಕರೆಯಬೇಕು ಹಾಗೂ ಬಾಕಿ ಇರುವ ಬಾಡಿಗೆಯ ಹಣ ವಸೂಲಿ ಮಾಡಬೇಕು ಎಂದು ಸಾಮಾಜಿಕ ಹೋರಾಟಗಾರ ಬಸವರಾಜ ಗಾಣಿಗೇರ ಹೇಳುತ್ತಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!