ರಾಣಿಬೆನ್ನೂರು: ರೇಣುಕಾಚಾರ್ಯರ ತ್ಯಾಗ, ಅಧ್ಯಾತ್ಮಿಕ ಶ್ರದ್ಧೆ, ಜನಪರ ಕಾಳಜಿ, ಭವ ಬಂಧಗಳಿಂದ ಜನಸಾಮಾನ್ಯರನ್ನು ಮುಕ್ತಗೊಳಿಸಿ ಅವರ ಬದುಕನ್ನು ಹಸನು ಮಾಡಲು ರೇಣುಕಾಚಾರ್ಯರ ಜಯಂತಿ ಸಾಕ್ಷಿಯಾಗಿದೆ ಎಂದು ದಾವಣಗೆರೆ ಆವರಗೊಳ್ಳ ಪುರವರ್ಗಮಠದ ಓಂಕಾರ ಶಿವಾಚಾರ್ಯರು ನುಡಿದರು. ನಗರದ ದೊಡ್ಡಪೇಟೆ ಪಂಚಾಚಾರ್ಯ ಜಗದ್ಗುರು ಮಂಗಲ ಮಂದಿರದ ಹಿರೇಮಠದಲ್ಲಿ ತಾಲೂಕು ಜಂಗಮ ನೌಕರರ ವೇದಿಕೆ ಮತ್ತು ತಾಲೂಕು ಜಂಗಮ ಸಮಾಜದ ಆಶ್ರಯದಲ್ಲಿ ಏರ್ಪಡಿಸಿದ್ದ ರೇಣುಕಾಚಾರ್ಯರ ಜಯಂತಿ, ಯುಗಮಾನೋತ್ಸವ ಆಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಅಷ್ಟಾವರ್ಣಗಳಾದ ಗುರು, ಲಿಂಗ, ಜಂಗಮ, ವಿಭೂತಿ, ರುದ್ರಾಕ್ಷಿ, ಪಾದೋದಕ, ಪ್ರಸಾದಗಳೆಂಬ ಆಚಾರಗಳಿಂದ ಮಾನವನು ಮಹಾದೇವನಾಗಬಹುದು ಎಂದು ಪ್ರಾಯೋಗಿಕವಾಗಿ ರೇಣುಕಾಚಾರ್ಯರು ತಿಳಿಸಿಕೊಟ್ಟರು. ಜಾತಿ, ಲಿಂಗ ಭೇದಗಳಿಲ್ಲದೇ ಸರ್ವರನ್ನೂ ಸಮಾನವಾಗಿ ಕಾಣುವ ವೀರಶೈವ ಧರ್ಮದ ಸಂಪ್ರದಾಯದಂತೆ ಎಲ್ಲರಲ್ಲೂ ಧರ್ಮ ಸಂಸ್ಕಾರಗಳನ್ನು ಬಿತ್ತಿ ಜನ ಸಾಮಾನ್ಯರ ಬಾಳಿಗೆ ಬೆಳಕಾಗಿದೆ ಎಂದರು.ರೇಣುಕಾಚಾರ್ಯರ ತತ್ವಾದರ್ಶಗಳನ್ನು ಮೆಚ್ಚಿ ಮುಂದಿನ ಪೀಳಿಗೆಗೆ ಪರಿಚಯಿಸಿಕೊಡಲು ಸರ್ಕಾರ ರೇಣುಕಾಚಾರ್ಯರ ಜಯಂತಿ ಆಚರಣೆಗೆ ಮುಂದಾಗಿದೆ. ಇದನ್ನು ಸಹಿಸದ ಕೆಲವರು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಅದಕ್ಕೆ ಕಿವಿಗೊಡಬಾರದು ಎಂದರು. ಕಲಾವಿದ ಪ್ರಕಾಶ ಗಚ್ಚಿನಮಠ ಅವರು ಸಂಗೀತ ಸೇವೆ ಸಲ್ಲಿಸಿದರು. ಇದಕ್ಕೂ ಪೂರ್ವದಲ್ಲಿ ರೇಣುಕಾಚಾರ್ಯರ ಮಂಗಲ ಮೂರ್ತಿಗೆ ರುದ್ರಾಭಿಷೇಕ, ಅಷ್ಟೋತ್ತರ ನಾಮಾವಳಿ, ಅಲಂಕಾರ ಪೂಜೆ ಮತ್ತು ಮಹಾಮಂಗಳಾರತಿ ಕಾರ್ಯಕ್ರಮಗಳು ಜರುಗಿದವು. ಚನ್ನೇಶ್ವರ ಮಠದ ವಟುಗಳು ವೇದಗೋಷ ಮೊಳಗಿಸಿದರು.ಕಂದಾಯ ಇಲಾಖೆಯ ವಾಗೀಶ ಮಳೇಮಠ ಅವರು ರೇಣುಕಾಚಾರ್ಯ ಜಯಂತಿ ಬಗ್ಗೆ ಮಾತನಾಡಿದರು. ಜಿಲ್ಲಾ ಬಿಸಿಎಂ ಇಲಾಖೆ ಅಧಿಕಾರಿ ವಿ.ಎಸ್. ಹಿರೇಮಠ, ತಾಲೂಕು ಜಂಗಮ ನೌಕರರ ವೇದಿಕೆ ಅಧ್ಯಕ್ಷ ಮುಕ್ತೇಶ್ವರ ಕೂರಗುಂದಮಠ, ರವಿಕುಮಾರ ಪಾಟೀಲ, ಅಖಿಲ ಭಾರತ ವೀರಶೈವ ಮಹಾಸಭಾದ ಕಾರ್ಯದರ್ಶಿ ಪರಮೇಶ ಯಡಿಯಾಪುರ, ನಿವೃತ್ತ ಶಿರಸ್ತೇದಾರ ಎಂ.ವಿ. ಹಿರೇಮಠ, ನಿವೃತ್ತ ಪ್ರಾಧ್ಯಾಪಕ ಪ್ರೊ. ಎಸ್.ವಿ. ಉಜ್ಜಯಿನಿಮಠ, ಶಿವಯೋಗಿ ಸ್ವಾಮಿ ಮಹಾನುಭಾವಿಮಠ, ಆರ್.ಎಂ. ಬೆಳವಿಗಿಮಠ, ಚೇತನಾ ಪಾಟೀಲ, ಜಗದೀಶ ಮಳಿಮಠ, ವಿದ್ಯಾವತಿ ಜಂಗಿನ, ಕೊಟ್ರೇಶ ಅಜ್ಜೋಡಿಮಠ, ಎಂ.ಕೆ. ಸಾಲಿಮಠ, ಸರೋಜಮ್ಮ ಅಜ್ಜೇವಡಿಮಠ, ಶಿವಯೋಗಯ್ಯ ಹಿರೇಮಠ, ಎಸ್.ಸಿ. ಷಡಾಕ್ಷರಿಮಠ, ಎಫ್.ಕೆ. ಭಸ್ಮಾಂಗಿಮಠ, ಎಸ್.ವಿ. ಸಾಲಿಮಠ, ವಾಗೀಶ ನೀರಲಗಿಮಠ, ಮುತ್ತಣ್ಣ ಸುರಳಿಕೇರಿಮಠ ಉಪಸ್ಥಿತರಿದ್ದರು.