ಕನ್ನಡಪ್ರಭ ವಾರ್ತೆ ಕಂಪ್ಲಿ
ಶತ್ರು ಇಲ್ಲದವ, ಶತ್ರು ಆಗಿರದವ, ಜಗದ ಕರ್ತೃವನ್ನು ಪಿತೃವಿನಂತೆ ದೇಹದ ಮೇಲೆ ಧರಿಸಿಕೊಂಡು ಜಗದ ಜನರನ್ನು ಮಿತ್ರರಂತೆ ಕಾಣುವ ಅಜಾತ ಶತ್ರುವೇ ವೀರಶೈವ ಲಿಂಗಾಯತನಾಗಿದ್ದಾನೆ ಎಂದು ಎಮ್ಮಿಗನೂರಿನ ಹಂಪಿಸಾವಿರ ದೇವರ ಮಠದ ವಾಮದೇವಶಿವಾಚಾರ್ಯರು ಹೇಳಿದರು.ಪಟ್ಟಣದ ಸಾಂಗತ್ರಯ ಸಂಸ್ಕೃತ ಪಾಠಶಾಲೆಯಲ್ಲಿ ತಾಲೂಕಿನ ವೀರಶೈವ ಲಿಂಗಾಯತ ಸಮಾಜವು ಸೋಮವಾರ ಸಂಜೆ ಹಮ್ಮಿಕೊಂಡಿದ್ದ ಆದಿಜಗದ್ಗುರು ಶ್ರೀರೇಣುಕಾಚಾರ್ಯರ ಜಯಂತ್ಯುತ್ಸವ, ಯುಗಮಾನೋತ್ಸವ ಸಮಾರಂಭ ಹಾಗೂ ಧರ್ಮ ಜಾಗೃತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಆಗಮ ಶಾಸ್ತ್ರವು ಶಿವನಿಗಿಂತಲು ಶ್ರೇಷ್ಠನಾದಂತಹ ಪುರುಷನಿಲ್ಲ, ಪಾರ್ವತಿಗಿಂತಲು ಶ್ರೇಷ್ಠಳಾದಂತಹ ಸ್ತ್ರೀ ಇಲ್ಲ, ವೀರಶೈವ ಧರ್ಮಕ್ಕಿಂತಲು ಶ್ರೇಷ್ಠವಾದ ಧರ್ಮವಿಲ್ಲವೆಂದು ಹೇಳುತ್ತದೆ. ವೀರಶೈವ ಪದವನ್ನು ಸಂಕುಚಿತಗೊಳಿಸಲು ಸಾಧ್ಯವಿಲ್ಲ, ವೀರಶೈವ ಧರ್ಮ ವಾಚಕ ಪದ, ಲಿಂಗಾಯತ ಕ್ರಿಯಾ ವಾಚಕ ಪದವಾಗಿದೆ. ವೀರಶೈವ ಲಿಂಗಾಯತ ಧರ್ಮ ಜ್ಞಾನೋದಯಕ್ಕೆ, ಅಜಾತಶತ್ರುವಿನ ಬದುಕಿಗೆ ಒತ್ತು ಕೊಟ್ಟಿದೆ. ಜಗದ್ಗುರು ರೇಣುಕಾಚಾರ್ಯರು ಎರಡಿಲ್ಲದಂತೆ ಸರ್ವರನ್ನೂ ಒಂದುಗೂಡಿಸುವ, ಸರ್ವರಿಗೂ ಹಿತವಾಗುವ ಧರ್ಮವನ್ನು ಬೋಧಿಸಿದ್ದಾರೆ. ವೀರಶೈವರು ಶ್ರೇಷ್ಠವಾದ ದಶಗುಣಗಳನ್ನು ಬೆಳೆಸಿಕೊಂಡು ಅರಿಷಡ್ವರ್ಗಗಳನ್ನು ತ್ಯಜಿಸಿ ಬದುಕಬೇಕು. ಸನಾತನ ವೀರಶೈವ ಲಿಂಗಾಯತ ತತ್ವಗಳು ಪಂಚಪೀಠಗಳ ಪಂಚ ತತ್ವಗಳಲ್ಲಿವೆ ಎಂದರು.ಹೆಬ್ಬಾಳ ಬೃಹನ್ಮಠದ ನಾಗಭೂಷಣ ಶಿವಾಚಾರ್ಯರು ಮಾತನಾಡಿ, ಸರ್ಕಾರವೇ ರೇಣುಕಾಚಾರ್ಯರ ಜಯಂತ್ಯುತ್ಸವ ಆಚರಿಸುತ್ತಿರುವುದು ಸಂತಸ ತಂದಿದೆ. ಸನಾತನ ವೀರಶೈವ ಧರ್ಮ ಜಾಗೃತಿಗಾಗಿ ಆದಿಜಗದ್ಗುರು ರೇಣುಕಾಚಾರ್ಯರು ಜನಿಸಿದರು. ವೀರಶೈವ ಲಿಂಗಾಯತರು ಬೇರೆಬೇರೆ ಅಲ್ಲ. ಬಸವಣ್ಣ ಮತ್ತು ಆದಿ ಜಗದ್ಗುರು ರೇಣುಕಾಚಾರ್ಯರು ವೀರಶೈವ ಮತ್ತು ಲಿಂಗಾಯತರ ಎರಡು ಕಣ್ಣುಗಳಂತಾಗಿದ್ದು, ಸಮಾನ ಗೌರವದಿಂದ ಕಾಣಬೇಕಿದೆ. ಸರ್ವರನ್ನು ಒಂದಾಗಿ ಕರೆದುಕೊಂಡು ಸಾಗುವ ಹಾಗೂ ಸಂಘಟಿಸಿ ಸಮಾಜದಲ್ಲಿ ಶಕ್ತಿಯನ್ನು ನೀಡುವಲ್ಲಿ ಪಂಚಪೀಠಗಳು ನಿರತವಾಗಿವೆ ಎಂದರು.
ಬುಕ್ಕಸಾಗರ ವಿಶ್ವಾರಾಧ್ಯ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ವೀರಶೈವ ಲಿಂಗಾಯತ ಸಮಾಜದ ಪ್ರಮುಖರಾದ ಪಿ.ಮೂಕಯ್ಯಸ್ವಾಮಿ, ಎಂ.ಎಸ್. ಶಶಿಧರಶಾಸ್ತ್ರಿ, ಕಲ್ಯಾಣಿಚೌಕಿಮಠದ ಬಸವರಾಜಶಾಸ್ತ್ರಿ, ಘನಮಠದಯ್ಯ ಹಿರೇಮಠ, ಗೊಗ್ಗ ಚನ್ನಬಸವರಾಜ, ಅರವಿ ಬಸವನಗೌಡ, ಕೆ.ಎಂ. ಹೇಮಯ್ಯಸ್ವಾಮಿ, ಕಲ್ಗುಡಿ ವಿಶ್ವನಾಥ್, ವಾಲಿ ಕೊಟ್ರಪ್ಪ, ಎಸ್.ಎಂ. ನಾಗರಾಜ, ಕೆ.ಎಂ. ವಾಗೀಶ, ಇಟಗಿ ಬಸವರಾಜಗೌಡ, ಎಲಿಗಾರ ವೆಂಕಟರೆಡ್ಡಿ, ವಾಲಿ ಕೊಟ್ರಪ್ಪ, ಬಿ.ಸದಾಶಿವಪ್ಪ, ಜೀರು ಗಾದಿಲಿಂಗ, ಎನ್.ಎಂ. ಪತ್ರೆಯ್ಯಸ್ವಾಮಿ, ಮುಕ್ಕುಂದಿ ಶಿವಗಂಗಮ್ಮ, ಬಿ.ಎಂ. ಪುಷ್ಪಾ, ಎಸ್.ಡಿ. ಬಸವರಾಜ ಇತರರಿದ್ದರು.