ಯಲಬುರ್ಗಾ:
ಜಗದ್ಗುರು ರೇಣುಕಾಚಾರ್ಯರು ಸರ್ವ ಜನಾಂಗದ ಒಳಿತಿಗಾಗಿ ಶ್ರಮಿಸಿದ್ದಾರೆ ಎಂದು ಮುಖಂಡ ಶಿವಣ್ಣ ರಾಯರಡ್ಡಿ ಹೇಳಿದರು.ಪಟ್ಟಣದ ಮೋಗ್ಗಿಬಸವೇಶ್ವರ ದೇವಸ್ಥಾನದಲ್ಲಿ ತಾಲೂಕು ವೀರಶೈವ ಜಂಗಮ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ನಡೆದ ರೇಣುಕಾಚಾರ್ಯರ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಾನವೀಯ ಉದಾತ್ತ ಮೌಲ್ಯಗಳನ್ನು ಸಂವರ್ಧಿಸಿದ ಕೀರ್ತಿ ರೇಣುಕಾಚಾರ್ಯರಿಗೆ ಸಲ್ಲುತ್ತದೆ ಎಂದರು.
ಬಿಜೆಪಿ ವಕ್ತಾರ ವೀರಣ್ಣ ಹುಬ್ಬಳ್ಳಿ ಮಾತನಾಡಿ, ಕಲಿಯುಗದಲ್ಲಿ ವೀರಶೈವ ಧರ್ಮವನ್ನು ಬೋಧಿಸಲು ಬಂದ ಆಚಾರ್ಯರಲ್ಲಿ ರೇಣುಕಾಚಾರ್ಯರು ಒಬ್ಬರು. ಅವರು ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂದು ಸಾರಿದ ಮಹಾಮಹಿಮರಾಗಿದ್ದಾರೆ ಎಂದು ಹೇಳಿದರು.ಸಾನ್ನಿಧ್ಯ ವಹಿಸಿದ್ದ ಪಟ್ಟಣದ ಉಭಯ ಮಠಾಧೀಶ ಬಸವಲಿಂಗೇಶ್ವರ ಸ್ವಾಮೀಜಿ ಹಾಗೂ ಸಿದ್ದರಾಮೇಶ್ವರ ಸ್ವಾಮೀಜಿ, ರೇಣುಕಾಚಾರ್ಯರು ಅಧರ್ಮಿಗಳಿಂದ ಧರ್ಮ ಪರಿಪಾಲನೆ ಮಾಡಿದವರು. ಸಮಾಜದಲ್ಲಿ ಅಸಮಾನತೆ, ಅಸ್ಪೃಶ್ಯತೆ ತಲೆದೋರಿದಾಗ ಅವುಗಳನ್ನು ಹೊಡೆದೋಡಿಸಲು ಆವಿರ್ಭವಿಸಿದ ಮಹಾನ್ ಗುರುಗಳು. ಭೂಲೋಕಗಳ ಸಂಕಷ್ಟಗಳ ನಿವಾರಣೆಗೆ ಇವರು ಉದ್ಭವಿಸಿದವರು ಎಂದರು.
ಉಪನ್ಯಾಸ ನೀಡಿದ ಉಪನ್ಯಾಸಕ ಸೋಮನಾಥಯ್ಯಸ್ವಾಮಿ ಕುಲಕರ್ಣಿ, ಮನೆ ಮಕ್ಕಳಿಗೆ ಸಂಸ್ಕಾರ ಬಿತ್ತುವ ಕೂರಿಗೆಗಳಾಗಬೇಕು. ಮಕ್ಕಳಿಗೆ ಹೆತ್ತವರು ಸಂಸ್ಕಾರ, ಒಳ್ಳೆಯ ಆಲೋಚನೆ, ಶಾಶ್ವತ ಶಾಂತಿ, ನೆಮ್ಮದಿ ಕಾಣುವ ಬಗ್ಗೆ ಅರಿವು ಮೂಡಿಸಬೇಕು ಎಂದ ಅವರು, ರೇಣುಕಾಚಾರ್ಯರು ಶಿವನ ಸ್ವರೂಪಿಗಳು. ಲಿಂಗದಲ್ಲಿ ಉದ್ಭವಿಸಿದ ಅವರು ಧರ್ಮ ಸ್ಥಾಪನೆಗೆ ವೀರಶೈವ ಧರ್ಮ ಸ್ಥಾಪಿಸಿದರು ಎಂದು ತಿಳಿಸಿದರು.ವೀರ ಮಹೇಶ್ವರ ಜಂಗಮ ಕ್ಷೇಮಾಭಿವೃದ್ಧಿ ಸಂಘದ ತಾಲೂಕಾಧ್ಯಕ್ಷ ಹಂಪಯ್ಯಸ್ವಾಮಿ ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ಸಮಾಜದ ಹಿರಿಯರಾದ ಬಿ.ಎಚ್.ಎಂ. ತಿಪ್ಪೇರುದ್ರಸ್ವಾಮಿ, ಎಚ್.ಎಂ. ಸಿದ್ದರಾಮಸ್ವಾಮಿ ಮಾತನಾಡಿದರು.
ಈ ವೇಳೆ ವೀರ ಮಹೇಶ್ವರ ಜಂಗಮ ಸಮಾಜದ ಅನೇಕ ಹಿರಿಯರನ್ನು ಸನ್ಮಾನಿಸಲಾಯಿತು. ಸಮಾಜದ ಗೌರವಾಧ್ಯಕ್ಷ ಡಾ. ಅಂದಾನಯ್ಯ ಶ್ಯಾಡ್ಲಗೇರಿ, ಪಪಂ ಅಧ್ಯಕ್ಷೆ ಅಂದಯ್ಯ ಕಳ್ಳಿಮಠ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕರಿಬಸಪ್ಪ ನಿಡಗುಂದಿ, ಶೇಖರಗೌಡ ಉಳ್ಳಾಗಡ್ಡಿ, ಸಂಗಣ್ಣ ಟೆಂಗಿನಕಾಯಿ, ಬಸವರಾಜ ಗುಳಗುಳಿ, ಎಸ್.ವಿ. ಧರಣಾ, ಸಿದ್ಲಿಂಗಪ್ಪ ಶ್ಯಾಗೋಟಿ, ಪಪಂ ಮುಖ್ಯಾಧಿಕಾರಿ ನಾಗೇಶ, ಜಂಗಮ ಸಮಾಜದ ಅನೇಕ ಹಿರಿಯರು ಇದ್ದರು.