ಕುಷ್ಟಗಿ:
ಮನುಕುಲಕ್ಕೆ ಹತ್ತಿರವಾದ ಮೌಲ್ಯಗಳನ್ನು ರೇಣುಕಾಚಾರ್ಯರು ಬೋಧಿಸಿದ್ದಾರೆ. ಮಾನವರೆಲ್ಲರೂ ಒಂದೇ ಎಂದು ಪ್ರತಿಪಾದಿಸಿದ ಅವರ ತತ್ವಾದರ್ಶ ಪಾಲಿಸಬೇಕು ಎಂದು ಕುಷ್ಟಗಿಯ ಕರಿಬಸವ ಶಿವಾಚಾರ್ಯರು ಹೇಳಿದರು.ತಾಲೂಕಿನ ಹಿರೇಮನ್ನಾಪುರ ಗ್ರಾಮದಲ್ಲಿ ನಡೆದ ಜಗದ್ಗುರು ರೇಣುಕಾಚಾರ್ಯರ ಜಯಂತಿಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದ ಅವರು,
ರೇಣುಕಾಚಾರ್ಯರು ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂದು ಸಾರಿದ್ದಾರೆ. ಅವರ ವಿಚಾರಗಳು ಇಂದಿಗೂ ಸಾರ್ವಕಾಲಿಕವಾಗಿವೆ ಎಂದರು.ನಿಡಶೇಸಿಯ ಅಭಿನವ ಕರಿಬಸವ ಶಿವಾಚಾರ್ಯರು ಮಾತನಾಡಿ, ರೇಣುಕಾಚಾರ್ಯರ ತತ್ವಗಳು ಸಮಾನತೆ, ಧಾರ್ಮಿಕ ಮತ್ತು ಆಧ್ಯಾತ್ಮಿಕ ಪ್ರಗತಿಗೆ ಆಧುನಿಕ ದಾರಿ ದೀಪದಂತಿವೆ. ಅವರ ಬದುಕು, ತತ್ವಗಳು ಸಮಾಜಕ್ಕೆ ಮಾತ್ರವಲ್ಲದೇ ವಿಶ್ವದಲ್ಲಿಯೇ ಪ್ರಾಮುಖ್ಯತೆ ಹೊಂದಿವೆ ಎಂದು ಹೇಳಿದರು.ಚಳಗೇರಿಯ ವೀರಸಂಗಮೇಶ್ವರ ಶಿವಾಚಾರ್ಯರು ಮಾತನಾಡಿ, ಮಾನವ ಕುಲಕ್ಕೆ ಮಾನವೀತೆಯ ಸಂದೇಶ ನೀಡುವ ಮೂಲಕ ಈ ಜಗತ್ತು ಮಾನವೀಯ ಮಾರ್ಗದಲ್ಲಿ ನಡೆಯಲು ಮೊದಲು ಹೇಳಿದ ವೀರಶೈವ ಧರ್ಮದ ಮಹಾನ್ ಶರಣ ರೇಣುಕಾಚಾರ್ಯರು ಎಂದರು.
ನಾವೆಲ್ಲರು ಭಾರತೀಯ ಮಕ್ಕಳು. ಸಮಾಜದ ಎಲ್ಲರನ್ನು ಪ್ರೀತಿಸಿ, ಅವರಿಗೆ ಮಹನಿಯರ ತತ್ವಾದರ್ಶ ಮತ್ತು ಧಾರ್ಮಿಕ ಶಿಕ್ಷಣ ನೀಡಬೇಕು. ಸಮಾಜದಲ್ಲಿ ಗಂಡು-ಹೆಣ್ಣಿಗೆ ಸಮಾನ ಸ್ಥಾನ ನೀಡಬೇಕು. ಮಕ್ಕಳಿಗೆ ಸರಿಯಾದ ಸಂಸ್ಕಾರ ಹೇಳಿಕೊಡಬೇಕು ಎಂದು ಸಲಹೆ ನೀಡಿದರು.ಅದ್ಧೂರಿ ಮೆರವಣಿಗೆ:
ತಾಲೂಕಿನ ಹಿರೇಮನ್ನಾಪುರದಲ್ಲಿ ನಡೆದ ರೇಣುಕಾಚಾರ್ಯರ ಜಯಂತಿ ಅಂಗವಾಗಿ ಜಗದ್ಗುರು ರೇಣುಕಾಚಾರ್ಯರ ಭಾವಚಿತ್ರವನ್ನು ಮಹಿಳೆಯರು ಕಳಸ ಮತ್ತು ಕುಂಭಗಳೊಂದಿಗೆ ಗ್ರಾಮದಲ್ಲಿ ಅದ್ಧೂರಿ ಮೆರವಣಿಗೆ ಮಾಡಿದರು.ಈ ವೇಳೆ ಗುಡದೂರಿನ ನೀಲಕಂಠಯ್ಯ ತಾತನವರು, ಮಹಾಂತಯ್ಯ ಹಿರೇಮಠ, ನಾಗರಾಜ ಹಿರೇಮಠ, ವಿಜಯಕುಮಾರ ಹಿರೇಮಠ, ವಿರೂಪಾಕ್ಷಯ್ಯ ಹಿರೇಮಠ, ದೊಡ್ಡಯ್ಯ ಗದ್ದಡಕಿ, ವೀರಬಸಯ್ಯ ಕಾಡಗಿಮಠ, ದೊಡ್ಡಬಸಯ್ಯ ಹಿರೇಮಠ, ಗುರುಬಸಯ್ಯ ಹಿರೇಮಠ, ನೀಲಕಂಠಯ್ಯ ಹಿರೇಮಠ, ವೀರಯ್ಯ ಹಿರೇಮಠ, ಶರಣಗೌಡ ಮಾಲಿಪಾಟೀಲ, ಮಹಾಂತೇಶ ಹಿರೇಮಠ, ಶಿವಾನಂದ ಹಿರೇಮಠ, ಬಸವರಾಜ ಹಿರೇಮಠ, ಸುರೇಶ, ಶಿವಕುಮಾರ, ಕಳಕಪ್ಪ, ಪುಂಡಲಿಕಪ್ಪ ಬುಡಕುಂಟಿ, ದೇವಣ್ಣ ಬಳಿಗಾರ ಸೇರಿದಂತೆ ಅನೇಕರು ಇದ್ದರು. ಕಾರ್ಯಕ್ರಮದಲ್ಲಿ ಎಲ್ಲ ಸಮಾಜದ ಪ್ರಮುಖರೊಬ್ಬರನ್ನು ಸನ್ಮಾನಿಸಲಾಯಿತು.