ರೇಣುಕಾಸ್ವಾಮಿ ಹತ್ಯೆ ನಿಷ್ಪಕ್ಷಪಾತ ತನಿಖೆಯಾಗಲಿ

KannadaprabhaNewsNetwork | Published : Jul 6, 2024 12:54 AM

ಸಾರಾಂಶ

Force for investigation Renukaswamy case

ಕುಟುಂಬದವರನ್ನು ಭೇಟಿ ಮಾಡಿ ಸಾಂತ್ವನ ಹೇಳಿದ ಮಾಜಿ ಸಚಿವ ಬಿ.ಸಿ. ಪಾಟೀಲ್ ತಾಕೀತು

ವಿಷಯ ಸದನದಲ್ಲಿ ಪ್ರಸ್ತಾಪಿಸಲು ಕ್ರಮ; ಪತ್ನಿಗೆ ಉದ್ಯೋಗ ನೀಡುವಂತೆ ಸರ್ಕಾರಕ್ಕೆ ಒತ್ತಾಯ-------

ಕನ್ನಡಪ್ರಭವಾರ್ತೆ, ಚಿತ್ರದುರ್ಗ

ರೇಣುಕಾಸ್ವಾಮಿ ಅಶ್ಲೀಲ ಸಂದೇಶ ಹಾಗೂ ಫೋಟೋಗಳ ಕಳಿಸುತ್ತಿದ್ದರೆ ಸಂಬಂಧಪಟ್ಟ ಪೊಲೀಸರಿಗೆ ದೂರು ನೀಡಬಹುದಿತ್ತು. ಆದರೆ, ದೊಡ್ಡ ಶಿಕ್ಷೆ ಕೊಡುವಷ್ಟು ಅಪರಾಧ ಅದಾಗಿರಲಿಲ್ಲ ಎಂದು ಮಾಜಿ ಸಚಿವ ಹಾಗೂ ಬಿಜೆಪಿ ಮುಖಂಡ ಬಿ.ಸಿ.ಪಾಟೀಲ್ ಹೇಳಿದರು.

ನಟ ದರ್ಶನ್ ಮತ್ತು ಗ್ಯಾಂಗ್‍ನಿಂದ ಹತ್ಯೆಗೀಡಾದ ರೇಣುಕಾಸ್ವಾಮಿ ನಿವಾಸಕ್ಕೆ ಶುಕ್ರವಾರ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದ ಅವರು ಸಣ್ಣ ವಿಚಾರಕ್ಕೆ ಕೊಲೆಯಂಥ ಕೃತ್ಯ ನಡೆಯಬಾರದಿತ್ತು. ಈ ವಯಸ್ಸಿನಲ್ಲಿ ನಿಮಗೆ ಈ ಸ್ಥಿತಿ ನಿರ್ಮಾಣ ಆಗಬಾರದಿತ್ತು ಎಂದು ನೋವು ವ್ಯಕ್ತಪಡಿಸಿದರು. ರೇಣುಕಾಸ್ವಾಮಿ ಕುಟುಂಬಕ್ಕೆ 50 ಸಾವಿರ ರು. ನೆರವು ನೀಡಿದ ಬಿ.ಸಿ ಪಾಟೀಲ್ ಅಧಿವೇಶನದಲ್ಲಿ ಈ ವಿಚಾರದ ಬಗ್ಗೆ ಧ್ವನಿ ಎತ್ತುವ ಭರವಸೆ ನೀಡಿದರು.

ಇದೇ ವೇಳೆ ಸುದ್ದಿಗಾರೊಂದಿಗೆ ಮಾತನಾಡಿದ ಅವರು ರೇಣುಕಾಸ್ವಾಮಿ ಹತ್ಯೆ ಪ್ರಕರಣ ನಿಷ್ಪಕ್ಷಪಾತ ತನಿಖೆ ಆಗಬೇಕು. ಆರೋಪಿಗಳಿಗೆ ಶಿಕ್ಷೆ ಆಗಲಿ. ಪ್ರಕರಣದಲ್ಲಿ ಯಾರೇ ಭಾಗಿಯಾಗಿ ತಪ್ಪಿತಸ್ಥರೆಂದು ಸಾಬೀತಾದಲ್ಲಿ ಕಾನೂನಿನಿಂದ ನುಸುಳಬಾರದು. ಮೃತನ ಪತ್ನಿಗೆ ಸರ್ಕಾರ ಉದ್ಯೋಗ ಕೊಡಬೇಕು ಎಂದರು. ದರ್ಶನ್ ಒಳ್ಳೆಯ ನಟ. ರೇಣುಕಾಸ್ವಾಮಿ ಹತ್ಯೆ ಬಗ್ಗೆ ದರ್ಶನ್ ಮೇಲೆ ಆಪಾದನೆ ಇದೆ. ಪ್ರಕರಣದ ತನಿಖೆ ಬಳಿಕ ಸತ್ಯಾಸತ್ಯತೆ ಗೊತ್ತಾಗಲಿದೆ. ನಟ ದರ್ಶನ್ ಬ್ಯಾನ್ ಮಾಡುವ ವಿಚಾರ ಫಿಲ್ಮ್ ಚೇಂಬರ್ ಗೆ ಬಿಟ್ಟಿದ್ದೆಂದು ಬಿ.ಸಿ.ಪಾಟೀಲ್ ಹೇಳಿದರು.

ನಾನು ಮಗನ ಭೇಟಿ ಮಾಡಲು ಸಾಧ್ಯವೇ

ನಟ ದರ್ಶನ್ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆಯಾಗಿದ್ದು, ಆರೋಪಿಗಳಿಗೆ ತಕ್ಕ ಶಿಕ್ಷೆ ಆಗಲಿ ಎಂದು ರೇಣುಕಾಸ್ವಾಮಿ ತಾಯಿ ರತ್ನಪ್ರಭ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಟ ದರ್ಶನ್ ಭೇಟಿಗೆ ಅವರ ತಾಯಿ, ಕುಟುಂಬಸ್ಥರು ಹೋಗುತ್ತಿದ್ದಾರೆ. ನಾವು, ನಮ್ಮ ಮಗನ ಭೇಟಿ ಮಾಡಲು ಸಾಧ್ಯವೇ ಎಂದು ನೋವು ತೋಡಿಕೊಂಡರು. ವೃದ್ಧರಾದ ನಮಗೆ ನಮ್ಮ ಮಗ ಮಣ್ಣು ಹಾಕಬೇಕಿತ್ತು. ಆದರೆ, ನಮ್ ಕಣ್ಣ ಮುಂದೆ ಮಗ ಹೋದರೆ ಶೋಕ ಯಾರ ಬಳಿ ಹಂಚಿಕೊಳ್ಳಲಿ. ನಾವು ಸಾಯೋತನಕ ಮನಗನ್ನು ನೋಡಲಾರೆವು ಎಂದರು.

ರೇಣುಕಾಸ್ವಾಮಿ ಅಶ್ಲೀಲ ಮೆಸೇಜ್ ಕಳಿಸಿದ್ದ ಎಂದು ಕೆಲ ಸೆಲೆಬ್ರಿಟಿಗಳ ಆರೋಪಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು ಅಶ್ಲೀಲ ಮೆಸೇಜ್ ವಿಷಯದಲ್ಲಿ ಮೊದಲೇ ಹೇಳಿದ್ದರೆ ಶಿಕ್ಷೆ ಕೊಡಿಸಬಹುದಿತ್ತು. ಈಗ ಏಕೆ ಏಳುತ್ತಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ ಎಂದರು.

ರೇಣುಕಾಸ್ವಾಮಿಯ ತಂದೆ ಕಾಶೀನಾಥಯ್ಯ ಮಾತನಾಡಿ, ನಟ ದರ್ಶನ್ ನೋಡಲು ಕುಟುಂಬಸ್ಥರು ಜೈಲಿಗೆ ಹೋಗುತ್ತಿದ್ದಾರೆ.

ನಾವು, ಮಗನನ್ನ ನೋಡಲು ಎಲ್ಲಿಗೆ ಹೋಗಬೇಕು. ನಮ್ಮ ಸಂಕಟ ಏನೆಂಬುದು ನಮಗೇ ಗೊತ್ತು. ನಮ್ಮ ಸ್ಥಾನದಲ್ಲಿದ್ದು ಎಲ್ಲರೂ ಯೋಚಿಸಲಿ. ದೊಡ್ಡವರಿರಲಿ, ಸಣ್ಣವರಿರಲಿ, ಯಾರೋ ಮಾಡಿದರೂ ಅಪರಾಧವೇ ಆಗಿದೆ. ಅಶ್ಲೀಲ ಮೆಸೇಜ್‌ ಬಗ್ಗೆ ಪೊಲೀಸರಿಗೆ ದೂರು ನೀಡಿ ಮಗನಿಗೆ ಶಿಕ್ಷೆ ಆಗಿದ್ದರೆ ಸ್ವೀಕರಿಸುತ್ತಿದ್ದೆವು. ಇಂತಹ ಅಮಾನುಷ ಕೊಲೆ ಮುಂದೆಂದು ಘಟಿಸಬಾರದು. ಆರೋಪಿಗಳಿಗೆ ಕಠಿಣ ಶಿಕ್ಷೆ ಆದರೆ ಮಾತ್ರ ಪುನರಾವರ್ತನೆ ಆಗುವುದಿಲ್ಲ. ಪ್ರಕರಣದಲ್ಲಿ ನಮಗೆ ನ್ಯಾಯ ಸಿಗುವ ವಿಶ್ವಾಸವಿದೆ.

ನಮ್ಮ ಮನೆಗೆ ಆಧಾರ ಸ್ತಂಭವಾಗಿದ್ದ ಮಗನೇ ಇಲ್ಲವಾಗಿದ್ದಾನೆ, ರಾಜ್ಯ ಸರ್ಕಾರ ಈ ಬಗ್ಗೆ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಲಿ

ನನ್ನ ಸೊಸೆಗೆ ಸರ್ಕಾರದಿಂದ ಸರ್ಕಾರಿ ನೌಕರಿ ಕೊಡಲಿ ಎಂದು ಮನವಿ ಮಾಡಿದರು.----------------

ಮಾಜಿ ಸಚಿವ ಬಿ.ಸಿ.ಪಾಟೀಲ್ ಶುಕ್ರವಾರ ಚಿತ್ರದುರ್ಗದ ರೇಣುಕಾಸ್ವಾಮಿ ನಿವಾಸಕ್ಕೆ ಭೇಟಿ ನೀಡಿ ನೊಂದ ಕುಟುಂಬದವರಿಗೆ ಸಾಂತ್ವನ ಹೇಳಿದರು.

---------

5ಸಿಟಿಡಿ7

Share this article