ಗ್ರಾಮಸ್ಥರಿಂದಲೇ ಹದಗೆಟ್ಟ ರಸ್ತೆ ದುರಸ್ತಿ

KannadaprabhaNewsNetwork |  
Published : Oct 31, 2026, 02:30 AM IST
ಸಿದ್ದಾಪುರ ತಾಲೂಕಿನ ಕರ್ಕಿಸವಲ್ ಮಾರ್ಗವಾಗಿ ಗಾಳಿಜಡ್ಡಿಯವರೆಗಿನ ರಸ್ತೆಯನ್ನು ಸರಿಪಡಿಸಿಕೊಂಡ ಸಾರ್ವಜನಿಕರು. | Kannada Prabha

ಸಾರಾಂಶ

ತಾಲೂಕಿನ ಸಿದ್ದಾಪುರ- ಗೋಳಿಮಕ್ಕಿ ಮುಖ್ಯರಸ್ತೆಯಿಂದ ಕರ್ಕಿಸವಲ್ ಮಾರ್ಗವಾಗಿ ಗಾಳಿಜಡ್ಡಿವರೆಗೆ ಸಂಪರ್ಕಿಸುವ ಮುಖ್ಯ ಕೊಂಡಿ ರಸ್ತೆ ಹಲವು ವರ್ಷಗಳಿಂದ ತೀವ್ರ ಹದಗೆಟ್ಟು ಸಂಚಾರಕ್ಕೆ ಸಂಪೂರ್ಣ ಅಯೋಗ್ಯವಾಗಿತ್ತು.

ಸಿದ್ದಾಪುರ: ವರ್ಷಗಳಿಂದ ರಸ್ತೆ ದುರಸ್ತಿಗಾಗಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಕಚೇರಿಗಳಿಗೆ ಅಲೆದಾಡಿ ಸುಸ್ತಾದ ಗ್ರಾಮೀಣ ಜನರು ಕೊನೆಗೂ ಸರ್ಕಾರದ ಬೊಕ್ಕಸದ ಕಡೆಗೆ ಮುಖ ಮಾಡಿ ಕೂರದೆ ತಾವೇ ಹಣ ಒಟ್ಟುಗೂಡಿಸಿ, ಶ್ರಮದಾನದ ಮೂಲಕ ರಸ್ತೆಯ ಹೊಂಡ-ಗುಂಡಿಗಳನ್ನು ಮುಚ್ಚಿ ಸರಿಮಾಡಿಕೊಂಡ ಮಾದರಿ ಕಾರ್ಯ ತಾಲೂಕಿನಲ್ಲಿ ಜರುಗಿದೆ.

ತಾಲೂಕಿನ ಸಿದ್ದಾಪುರ- ಗೋಳಿಮಕ್ಕಿ ಮುಖ್ಯರಸ್ತೆಯಿಂದ ಕರ್ಕಿಸವಲ್ ಮಾರ್ಗವಾಗಿ ಗಾಳಿಜಡ್ಡಿವರೆಗೆ ಸಂಪರ್ಕಿಸುವ ಮುಖ್ಯ ಕೊಂಡಿ ರಸ್ತೆ ಹಲವು ವರ್ಷಗಳಿಂದ ತೀವ್ರ ಹದಗೆಟ್ಟು ಸಂಚಾರಕ್ಕೆ ಸಂಪೂರ್ಣ ಅಯೋಗ್ಯವಾಗಿತ್ತು.

ಈ ಭಾಗದ ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪಂಚಾಯಿತಿ ಹಾಗೂ ಲೋಕೋಪಯೋಗಿ ಇಲಾಖೆಗೆ ಸ್ಥಳೀಯರು ಹಲವು ಬಾರಿ ಲಿಖಿತ ಮನವಿಗಳನ್ನು ಸಲ್ಲಿಸಿದ್ದರು. ಆದರೆ, ಅನುದಾನದ ಕೊರತೆ ಹಾಗೂ ಬೊಕ್ಕಸದಲ್ಲಿ ಹಣವಿಲ್ಲವೆಂಬ ನೆಪಗಳನ್ನೊಡ್ಡಿ ಅಧಿಕಾರಿಗಳು ಪ್ರಸ್ತಾವನೆಗಳನ್ನು ಕಸದ ಬುಟ್ಟಿಗೆ ಹಾಕಿದ್ದರೇ ವಿನಾ ಯಾವುದೇ ಕಾಯಕಲ್ಪ ಒದಗಿಸಿರಲಿಲ್ಲ. ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯಕ್ಕೆ ಪ್ರತಿಯಾಗಿ ಜನಶಕ್ತಿಯ ಎಚ್ಚರಿಕೆ ಇದಾಗಿದೆ.

ಹಾಳಾದ ರಸ್ತೆಯಲ್ಲೇ ಸಾಗುತ್ತಿದ್ದ ದ್ವಿಚಕ್ರ ವಾಹನಗಳು, ಕಾರುಗಳು ಪದೇ ಪದೇ ಕೆಟ್ಟು ನಿಲ್ಲುವುದು, ಕಾಲ್ನಡಿಗೆಯಲ್ಲಿ ತೆರಳುವ ಶಾಲಾ-ಕಾಲೇಜು ಮಕ್ಕಳು, ವೃದ್ಧರು ಹಾಗೂ ಅನಾರೋಗ್ಯ ಪೀಡಿತರು ತೀವ್ರ ಯಾತನೆ ಅನುಭವಿಸುವುದು ನಿತ್ಯದ ಗೋಳಾಗಿತ್ತು. ಮಳೆಗಾಲದಲ್ಲಿ ಕೆಸರು ಗದ್ದೆಯಾಗಿ, ಬೇಸಿಗೆಯಲ್ಲಿ ಕಣ್ಣು- ಬಾಯಿ ಮುಚ್ಚಿಕೊಂಡು ಓಡಾಡುವಷ್ಟು ಧೂಳಿನ ಮಡುವಾಗುತ್ತಿದ್ದ ರಸ್ತೆಯಿಂದಾಗಿ ಸಾರ್ವಜನಿಕರ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತಿತ್ತು. ಆಡಳಿತ ವ್ಯವಸ್ಥೆ ಕಣ್ಮುಚ್ಚಿ ಕುಳಿತಿದ್ದರಿಂದ ಬೇಸತ್ತ ಕರ್ಕಿಸವಲು, ಗಾಳಿಮನೆ ಹಾಗೂ ಸುತ್ತಮುತ್ತಲಿನ ಹಳ್ಳಿಗಳ ಗ್ರಾಮಸ್ಥರು ಒಗ್ಗಟ್ಟಾಗಿ ರಸ್ತೆ ಸರಿಪಡಿಸಲು ಪಣತೊಟ್ಟರು.

ಸುಮಾರು ೩೦ಕ್ಕೂ ಹೆಚ್ಚು ಗ್ರಾಮಸ್ಥರು ಸ್ವಯಂಪ್ರೇರಿತರಾಗಿ ಒಟ್ಟುಗೂಡಿ, ತಮ್ಮ ಸ್ವಂತ ಖರ್ಚಿನಲ್ಲೇ ಟಿಪ್ಪರ್ ಮೂಲಕ ಜಲ್ಲಿಕಲ್ಲು ಹಾಗೂ ನದಿ ಮಣ್ಣನ್ನು ತರಿಸಿಕೊಂಡರು. ಸತತ ಪರಿಶ್ರಮದಿಂದ ಸುಮಾರು ೩ ಕಿಲೋಮೀಟರ್ ಉದ್ದಕ್ಕೂ ಬಿದ್ದಿದ್ದ ಆಳವಾದ ಗುಂಡಿಗಳನ್ನು ಜಲ್ಲಿ ಹಾಗೂ ಮಣ್ಣು ಹಾಕಿ ಸಮತಟ್ಟುಗೊಳಿಸಿದರು. ನಾಲ್ಕೈದು ತಂಡಗಳಾಗಿ ಕೆಲಸ ಹಂಚಿಕೊಂಡು ಇಡೀ ಮಾರ್ಗವನ್ನು ಸುಗಮ ವಾಹನ ಸಂಚಾರಕ್ಕೆ ಯೋಗ್ಯವಾಗುವಂತೆ ಸರಿಪಡಿಸಿದ್ದಾರೆ.

ಸಾರ್ವಜನಿಕರ ಮೂಲ ಸೌಕರ್ಯದ ಅಳಲನ್ನು ಆಲಿಸಬೇಕಾದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕಣ್ಮುಚ್ಚಿ ಕುಳಿತಿದ್ದಾರೆ. ಗ್ರಾಮೀಣ ಭಾಗದ ಜನರಿಗೆ ಕನಿಷ್ಠ ಸಂಪರ್ಕ ರಸ್ತೆ ನೀಡಲು ಸಾಧ್ಯವಾಗದ ವ್ಯವಸ್ಥೆ ನಾವೇ ಸ್ವಂತ ಶ್ರಮ ಹಾಗೂ ಖರ್ಚಿನಲ್ಲಿ ರಸ್ತೆ ಸರಿಪಡಿಸಿಕೊಳ್ಳುವ ದುಃಸ್ಥಿತಿಗೆ ತಳ್ಳಿದೆ. ಇದು ಸ್ಥಳೀಯ ಆಡಳಿತ ವೈಫಲ್ಯಕ್ಕೆ ಹಿಡಿದ ಕೈಗನ್ನಡಿ ಎಂದು ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತಡೆಯಾಜ್ಞೆ ಇದ್ದರೂ ಪೊಲೀಸರಿಂದ ಚಾರ್ಜ್‌ಶೀಟ್‌: ಹೈಕೋರ್ಟ್‌ ಗರಂ
ಪ್ರೀತಿಗೆ ಪೋಷಕರು ವಿರೋಧ: ಪ್ರೇಮಿಗಳಿಂದ ಆತ್ಮಹತ್ಯೆ ಯತ್ನ