ಬಾಳೆಹೊನ್ನೂರು: ಚಿಕ್ಕಮಗಳೂರು-ಬಾಳೆಹೊನ್ನೂರು ಮುಖ್ಯರಸ್ತೆಯ ರಾಜ್ಯ ಹೆದ್ದಾರಿಯು ಕಳೆದ ಕೆಲವು ತಿಂಗಳುಗಳಿಂದ ತೀವ್ರ ಹೊಂಡ ಗುಂಡಿಗಳಿಂದ ಕೂಡಿದ್ದು, ಇದರಿಂದಾಗಿ ವಾಹನ ಚಾಲಕರು, ಸವಾರರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಕೂಡಲೇ ಈ ರಸ್ತೆಯನ್ನು ದುರಸ್ತಿಗೊಳಿಸಬೇಕು ಎಂದು ಒತ್ತಾಯಿಸಿ ಸಾರ್ವಜನಿಕರು ಜನಪ್ರತಿನಿಧಿಗಳಿಗೆ ಪತ್ರ ಬರೆದಿದ್ದಾರೆ.ಚಿಕ್ಕಮಗಳೂರು-ಬಾಳೆಹೊನ್ನೂರು ಮುಖ್ಯರಸ್ತೆಯ ರಾಜ್ಯ ಹೆದ್ದಾರಿ ಮೂಲಕ ನಿತ್ಯವೂ ಸಾವಿರಾರು ಪ್ರಯಾಣಿಕರು, ಶೃಂಗೇರಿ, ಹೊರನಾಡು, ರಂಭಾಪುರಿ ಪೀಠ, ಹರಿಹರಪುರ ಮಠ, ಭಂಡಿಗಡಿ ಮಠ, ಎನ್.ಆರ್.ಪುರ ಬಸ್ತಿಮಠ, ಕಳಸ ಸೇರಿದಂತೆ ಹಲವು ಧಾರ್ಮಿಕ ಕ್ಷೇತ್ರಗಳಿಗೆ ಹಾಗೂ ವಿವಿಧ ಪ್ರವಾಸಿ ತಾಣಗಳಿಗೆ ಪ್ರವಾಸ ಬರುತ್ತಾರೆ.ಆದರೆ ಕಳೆದ ಕೆಲವು ತಿಂಗಳುಗಳಿಂದ ಚಿಕ್ಕಮಗಳೂರು-ಬಾಳೆಹೊನ್ನೂರು ರಸ್ತೆಯೂ ತೀವ್ರ ತರವಾದ ಹೊಂಡ ಗುಂಡಿಗಳಿಂದ ಕೂಡಿದ್ದು, ವಾಹನ ಚಾಲಕರು ವಾಹನ ಚಲಾಯಿಸದ ಪರಿಸ್ಥಿತಿ ನಿರ್ಮಾಣವಾಗಿದೆ. ಮುಖ್ಯರಸ್ತೆಯಲ್ಲಿ ಬಿದ್ದಿರುವ ಗುಂಡಿಗಳಿಂದಾಗಿ ವಾಹನ ಚಾಲಕರು, ಮತ್ತು ಪ್ರಯಾಣಿಕರು ಭಯದಲ್ಲಿಯೇ ಸಂಚಾರ ಮಾಡಬೇಕಿದೆ. ರಾತ್ರಿ ವೇಳೆಯಲ್ಲಂತೂ ಪ್ರಯಾಣ ದುಸ್ತರವಾಗಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.ರಸ್ತೆ ಹೊಂಡ ಗುಂಡಿಗಳಿಂದ ಇರುವ ಕಾರಣ ಕಡಿಮೆ ದೂರವನ್ನು ಕ್ರಮಿಸಲು ಹೆಚ್ಚು ಸಮಯ ತೆಗೆದುಕೊಳ್ಳಬೇಕಾಗಿದೆ. ಶಾಲಾ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು, ಕಚೇರಿಗಳಿಗೆ ತೆರಳುವ ಉದ್ಯೋಗಿಗಳಿಗೆ ತೀವ್ರ ಅನಾನುಕೂಲವಾಗುತ್ತಿದೆ. ರಸ್ತೆ ಹದಗೆಟ್ಟಿರುವ ಕಾರಣ ವಾಹನಗಳು ಪದೇ ಪದೇ ದುರಸ್ತಿಗೆ ಬರುತ್ತಿವೆ. ಇಂತಹ ಹತ್ತಾರು ಸಮಸ್ಯೆಗಳು ರಸ್ತೆ ಹದಗೆಟ್ಟಿರುವ ಕಾರಣ ಉದ್ಭವಿಸುತ್ತಿದೆ. ಈ ಹಿನ್ನೆಲೆಯಲ್ಲಿ ಕ್ಷೇತ್ರದ ಸಂಸದರು, ಚಿಕ್ಕಮಗಳೂರು, ಮೂಡಿಗೆರೆ, ಶೃಂಗೇರಿ ಕ್ಷೇತ್ರದ ಶಾಸಕರುಗಳು ಈ ಬಗ್ಗೆ ಗಮನಹರಿಸಿ ಚಿಕ್ಕಮಗಳೂರು-ಬಾಳೆಹೊನ್ನೂರು ಮುಖ್ಯರಸ್ತೆಯನ್ನು ಕೂಡಲೇ ದುರಸ್ತಿಗೊಳಿಸಿಕೊಡಬೇಕು ಎಂದು ಒತ್ತಾಯಿಸಿ ಪತ್ರ ಬರೆದಿದ್ದಾರೆ.