ಕನ್ನಡಪ್ರಭ ವಾರ್ತೆ ರಾಮನಗರ
ನಗರಸಭೆ ಸಭಾಂಗಣದಲ್ಲಿ ನಡೆದ ತುರ್ತು ಸಭೆಯಲ್ಲಿ ಪೈಪ್ ಲೈನ್ ಹಾದು ಹೋಗಿರುವ ಭಾಗದ ರಸ್ತೆಯಲ್ಲಿ ಗುಂಡಿಗಳು ಬಿದ್ದಿದ್ದು, ಅದನ್ನು ದುರಸ್ತಿ ಪಡಿಸದಿರುವ ವಿಚಾರ ಪ್ರಸ್ತಾಪವಾದಾಗ ಕೆ.ಶೇಷಾದ್ರಿರವರು, ರಸ್ತೆ ದುರಸ್ತಿ ಪಡಿಸದಿದ್ದರೆ ಜನರೇ ದಂಗೆ ಏಳುತ್ತಾರೆ. ಇಲ್ಲಿ ತುಘಲಕ್ ದರ್ಬಾರ್ ನಡೆಸಲು ಅವಕಾಶ ಇಲ್ಲ. ನೀವೇ ಶಾಸಕರಿಗೆ ಮನವರಿಕೆ ಮಾಡಿಕೊಡುವಂತೆ ಸಲಹೆ ನೀಡಿದರು.
ಪೈಪು ಅಳವಡಿಕೆ ಕಾಮಗಾರಿಗಾಗಿ ಅಗೆದಿರುವ ರಸ್ತೆಗಳ ಭಾಗವನ್ನು ಸರಿಪಡಿಸುವುದು ಟೆಂಡರ್ ನಲ್ಲಿ ಉಲ್ಲೇಖವಾಗಿದೆ. ಸುಮಾರು 160 ಕಿಮೀ ಪ್ರಮಾಣದ ರಸ್ತೆ ದುರಸ್ತಿ ಆಗಬೇಕು. ಆದರೆ, ನಗರದ ಎಲ್ಲಾ ರಸ್ತೆಗಳಿಗೆ ಪೂರ್ಣ ಪ್ರಮಾಣದಲ್ಲಿ ಡಾಂಬರೀಕರಣ ಮಾಡಬೇಕಾದ ಅವಶ್ಯಕತೆ ಇರುವುದರಿಂದ ಜಲಮಂಡಳಿ ಬಳಿ ಇರುವ ರಸ್ತೆ ದುರಸ್ತಿಯ ಹಣವನ್ನು ನಗರಸಭೆಗೆ ವರ್ಗಾಯಿಸುವಂತೆ ಶಾಸಕರು ಈ ಹಿಂದೆ ನಡೆದಿದ್ದ ಸಭೆಗಳಲ್ಲಿ ಜಲಮಂಡಳಿ ಅಧಿಕಾರಿಗಳಿಗೆ ಸೂಚಿಸಿದ್ದರು.ಆದರೆ, ದುರಸ್ತಿ ಹಣವನ್ನು ವರ್ಗಾವಣೆ ಮಾಡಲು ಸಾಧ್ಯವಿಲ್ಲ ಎಂದು ಜಲಮಂಡಳಿ ಅಧಿಕಾರಿಗಳು ತಿಳಿಸಿದ್ದರು. ಈ ವಿಚಾರ ಸರ್ಕಾರದ ಮಟ್ಟದಲ್ಲಿ ನಿರ್ಧಾರವಾಗಬೇಕಾಗಿತ್ತು. ಆನಂತರ ಮತ್ತೊಂದು ಸಭೆಯಲ್ಲಿ ಜಲಮಂಡಳಿ ಕೈಗೊಳ್ಳಬೇಕಾದ ದುರಸ್ತಿಯನ್ನು ಕೈಗೊಳ್ಳುವಂತೆ ಸದಸ್ಯರು ಅಧಿಕಾರಿಗಳ ಮೇಲೆ ಒತ್ತಡ ಹೇರಿದ್ದರು. ಆದರೆ ರಸ್ತೆ ದುರಸ್ತಿ ಕಾಮಗಾರಿ ನಡೆದೇ ಇಲ್ಲ ಎಂದು ನಗರಸಭಾ ಸದಸ್ಯರು ತುರ್ತು ಸಭೆಯಲ್ಲಿ ವಾದಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಜಲಮಂಡಳಿ ಅಧಿಕಾರಿಗಳು, ಈವರೆಗೆ 1.5 ಕೋಟಿ ರು.ವೆಚ್ಚದಲ್ಲಿ ಕೆಲವು ರಸ್ತೆಗಳ ದುರಸ್ತಿ ಆಗಿದೆ ಎಂದಾಗ ಅಸಮಾಧಾನ ವ್ಯಕ್ತಪಡಿಸಿದ ಕೆ.ಶೇಷಾದ್ರಿ , ಆ ಕಾಮಗಾರಿಯೂ ಸಮರ್ಪಕವಾಗಿಲ್ಲ ಎಂಬ ದೂರುಗಳಿವೆ ಎಂದರು.