ಕನ್ನಡಪ್ರಭ ವಾರ್ತೆ, ಶಿಕಾರಿಪುರ
ಕರ್ನಾಟಕ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ (ತಿದ್ದುಪಡಿ) ವಿಧೇಯಕ- 2024 ಅನ್ನು ರದ್ದುಪಡಿಸುವಂತೆ ಆಗ್ರಹಿಸಿ ಕರ್ನಾಟಕ ದೇವಸ್ಥಾನ ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದ ವತಿಯಿಂದ ಗುರುವಾರ ರಾಜ್ಯಪಾಲರಿಗೆ ತಹಸೀಲ್ದಾರ್ ಮೂಲಕ ಮನವಿ ಸಲ್ಲಿಸಲಾಯಿತು.ಕರ್ನಾಟಕ ಸರ್ಕಾರ ಫೆ.20ರಂದು ಕರ್ನಾಟಕ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಆಧಿನಿಯಮ 1997ಕ್ಕೆ ಹೆಚ್ಚಿನ ತಿದ್ದುಪಡಿ ಮಾಡಿದೆ. ಈ ತಿದ್ದುಪಡಿಯಲ್ಲಿ ಹಲವಾರು ದೋಷಗಳು ಇವೆ. ಹೊಸ ತಿದ್ದುಪಡಿ ದೇವಸ್ಥಾನಗಳ ಪರಂಪರೆ ರಕ್ಷಣೆಯ ದೃಷ್ಟಿಯಿಂದ ಅತ್ಯಂತ ಅಪಾಯಕಾರಿಯಾಗಿದೆ. ಈ ದಿಸೆಯಲ್ಲಿ ಕಲಂಗಳನ್ನು ರದ್ದು ಮಾಡಬೇಕು ಮತ್ತು ಕಲಂ 69 ಇ ನಲ್ಲಿ ಜಿಲ್ಲಾಮಟ್ಟದ ಮತ್ತು ರಾಜ್ಯಮಟ್ಟದ ಉನ್ನತ ಸಮಿತಿಗಳನ್ನು ರಚನೆ ಮಾಡಲಾಗಿದೆ. ಜಿಲ್ಲಾಮಟ್ಟದ ಸಮಿತಿಗೆ 9 ಜನರ ಸದಸ್ಯರ ನೇಮಕಾತಿ ಬಗ್ಗೆ ಉಲ್ಲೇಖ ಮಾಡಲಾಗಿದೆ. ಈ 9 ಜನರಲ್ಲಿ ಪದನಿಮಿತ್ತ ಜಿಲ್ಲಾಧಿಕಾರಿ, ಪೋಲಿಸ್ ಅಧಿಕಾರಿ, ಅರಣ್ಯ ಸಂರಕ್ಷಣಾ, ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ, ಲೋಕೊಪಯೋಗಿ ಅಭಿಯಂತರರ ಸಹಿತ 9 ಜನರ ಸಮಿತಿ ರಚಿಸಲಾಗಿದೆ. ಇದೇ ರೀತಿಯಲ್ಲಿ 16 ಜನರ ರಾಜ್ಯಮಟ್ಟದ ಸಮಿತಿಯನ್ನು ರಚನೆ ಮಾಡಲಾಗಿದೆ. ಅದರಲ್ಲಿ ಸ್ಥಳೀಯ ಶಾಸಕರು, ಸಂಸದರು ಸೇರಿ ವಿವಿಧ ಇಲಾಖೆಗಳ ಕಾರ್ಯದರ್ಶಿಗಳನ್ನು ಸಮಿತಿ ಸದಸ್ಯರನ್ನಾಗಿ ಮಾಡಲಾಗಿದೆ. ಇದರಲ್ಲಿ ಹಿಂದೂಗಳಲ್ಲದವರು ಇರುವ ಸಾಧ್ಯತೆ. ಆದಕಾರಣದಿಂದ ಇದು ಅತ್ಯಂತ ಅಪಾಯಕಾರಿಯಾಗಿದೆ. ಅಲ್ಲಿಯೂ ಭ್ರಷ್ಟಾಚಾರ ತಾಂಡವಾಡಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಕಲಂ 17ರಲ್ಲಿ ಯಾವ ಸಂಸ್ಥೆಗಳ ಆದಾಯ ₹1 ಕೋಟಿ ಮೀರಿರುವುದೋ ಅವುಗಳ 10 % ನಿವ್ವಳ ಆದಾಯದ ಪ್ರತಿಶತ ಹಣವನ್ನು ₹5 ರಿಂದ ₹10 ಲಕ್ಷ ಆದಾಯ ಇರುವ ದೇವಸ್ಥಾನಗಳ ಶೇ.5ರಷ್ಟು ಹಣವನ್ನು ಸಾಮಾನ್ಯ ಸಂಗ್ರಹಣ ನಿಧಿಗೆ ವರ್ಗಾವಣೆ ಮಾಡುವ ಬಗ್ಗೆ ಉಲ್ಲೇಖ ಮಾಡಲಾಗಿದೆ. ಇದು ದೇವಸ್ಥಾನಗಳ ಹಣವನ್ನು ದೋಚುವ ಹುನ್ನಾರವಾಗಿದೆ. ಈ ವಿಧೇಯಕಕ್ಕೆ ಯಾವುದೇ ಕಾರಣಕ್ಕೂ ಅಂಕಿತ ಹಾಕಬಾರದೆಂದು ಆಗ್ರಹಿಸಲಾಯಿತು.ಈ ಸಂದರ್ಭ ಮಹಾಸಂಘದ ಸದಸ್ಯರಾದ ಶಿವಯ್ಯ ಶಾಸ್ತ್ರಿ, ವೀರಶೈವ ಜಂಗಮ ಅರ್ಚಕ ಪುರೋಹಿತ ಸಂಘದ ಅಧ್ಯಕ್ಷ ಪ್ರಭುಸ್ವಾಮಿ ಆರಾಧ್ಯಮಠ, ಹಿಂದೂ ಜನಜಾಗೃತಿ ಸಮಿತಿಯ ಪರಶುರಾಮ, ಈರೇಶ್, ವಿಶ್ವ ಹಿಂದೂ ಪರಿಷತ್ತು ಅಧ್ಯಕ್ಷ ಕುಮಾರಸ್ವಾಮಿ, ಶ್ರೀ ತುಳಜಾ ಭವಾನಿ ದೇವಸ್ಥಾನ ಅಧ್ಯಕ್ಷ ಅರ್ಜುನ್ ರಾವ್, ತುಕ್ಕೋಜಿ ರಾವ್, ಶ್ರೀ ಲಕ್ಷ್ಮೀವೆಂಕಟೇಶ್ವರ ದೇವಸ್ಥಾನ ಸಮಿತಿಯ ರಘು, ಶ್ರೀನಿವಾಸ್, ಸತೀಶ್ ಆರ್.ಡಿ., ವಿಶ್ವನಾಥ್, ಪ್ರಕಾಶ್ ಎಸ್. ಎಂ., ಹನುಮಂತಪ್ಪ, ಶರತ್ ಮತ್ತಿತರರು ಉಪಸ್ಥಿತರಿದ್ದರು.
- - - -7ಕೆ.ಎಸ್.ಕೆ.ಪಿ2:ಕರ್ನಾಟಕ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ (ತಿದ್ದುಪಡಿ) ವಿಧೇಯಕ 2024 ನ್ನು ರದ್ದುಪಡಿಸುವಂತೆ ಆಗ್ರಹಿಸಿ ಕರ್ನಾಟಕ ದೇವಸ್ಥಾನ ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದ ವತಿಯಿಂದ ಗುರುವಾರ ರಾಜ್ಯಪಾಲರಿಗೆ ತಹಶೀಲ್ದಾರರ ಮೂಲಕ ಮನವಿ ಸಲ್ಲಿಸಲಾಯಿತು.