ಗುಲಾಮಗಿರಿಗೆ ತಳ್ಳಲಿರುವ ಸಂಹಿತೆ ರದ್ದುಪಡಿಸಿ

KannadaprabhaNewsNetwork |  
Published : Jul 10, 2025, 12:45 AM IST
೯ಕೆಎನ್‌ಕೆ-೪                                        ಕನಕಗಿರಿಯ ವಾಲ್ಮೀಕಿ ವೃತ್ತದಲ್ಲಿ ಸಿಐಟಿಯುನಿಂದ ಬುಧವಾರ ಪ್ರತಿಭಟನೆ ನಡೆಯಿತು.   | Kannada Prabha

ಸಾರಾಂಶ

ಕಳೆದ ೫೦ ವರ್ಷಗಳಿಂದಿರುವ ಐಡಿಡಿಸಿ ಯೋಜನೆಯನ್ನು ಕಾಯಂ ಮಾಡಬೇಕು. ಕಾಯಂ ಆಗುವ ಸಿಬ್ಬಂದಿಗೆ ಕನಿಷ್ಠ ವೇತನ, ಎಫ್‌ಆರ್‌ಎಸ್‌ನಿಂದ ಅಂಗನವಾಡಿ ಸಿಬ್ಬಂದಿಗೆ ಹೊರೆಯಾಗುತ್ತಿದ್ದು, ಮರುಪರಿಶೀಲನೆ ನಡೆಸಬೇಕು.

ಕನಕಗಿರಿ:

ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಸಿಐಟಿಯುನಿಂದ ಪಟ್ಟಣದ ವಾಲ್ಮೀಕಿ ವೃತ್ತದಲ್ಲಿ ಬುಧವಾರ ಪ್ರತಿಭಟನೆ ನಡೆಯಿತು.

ಎಸ್‌ಎಫ್‌ಐ ರಾಜ್ಯಾಧ್ಯಕ್ಷ ಅಮರೇಶ ಕಡಗದ ಮಾತನಾಡಿ, ಕೇಂದ್ರ ಸರ್ಕಾರ ಕಾರ್ಮಿಕರ ವಿರೋಧ ಲೆಕ್ಕಿಸದೆ ೪ ಕಾರ್ಮಿಕ ಸಂಹಿತೆ ಜಾರಿಗೊಳಿಸಲು ಹೊರಟಿದೆ. ಇದು ದೇಶದಲ್ಲಿನ ಕಾರ್ಮಿಕರ ರಕ್ಷಣಾತ್ಮಕ ಅಂಶ, ಮೂಲಭೂತ ಹಕ್ಕು, ವೇತನ ಕುರಿತ ವ್ಯಾಖ್ಯಾನ, ಹೋರಾಟದ ಹಕ್ಕು, ಸಾಮಾಜಿಕ ಭದ್ರತೆ, ಮಾಲೀಕ-ಕಾರ್ಮಿಕ ಸಂಬಂಧ, ವೇತನ ಚೌಕಾಸಿ, ಆರೋಗ್ಯ ಮತ್ತು ಸುರಕ್ಷತೆ ನಿಯಮ ಮೊಟಕುಗೊಳಿಸಿ ಕಲ್ಯಾಣ ರಾಜ್ಯದ ಪರಿಕಲ್ಪನೆ ದುರ್ಬಲಗೊಳಿಸಲಿವೆ. ಕಾರ್ಪೋರೇಟರ್‌ಗಳಿಗೆ ಕಡಿವಾಣವಿಲ್ಲದ ಲಾಭ ಗಳಿಸುವ ರಹದಾರಿ ಆಗಲಿದೆ. ಕಾರ್ಮಿಕರನ್ನು ನವ ಗುಲಾಮಗಿರಿಗೆ ತಳ್ಳಲಿರುವ ಈ ಸಂಹಿತೆಗಳನ್ನು ರದ್ದುಪಡಿಸಬೇಕು ಎಂದರು.

ನಂತರ ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಅಮರಮ್ಮ ಯರಡೋಣ ಮಾತನಾಡಿ, ಕಳೆದ ೫೦ ವರ್ಷಗಳಿಂದಿರುವ ಐಡಿಡಿಸಿ ಯೋಜನೆಯನ್ನು ಕಾಯಂ ಮಾಡಬೇಕು. ಕಾಯಂ ಆಗುವ ಸಿಬ್ಬಂದಿಗೆ ಕನಿಷ್ಠ ವೇತನ, ಎಫ್‌ಆರ್‌ಎಸ್‌ನಿಂದ ಅಂಗನವಾಡಿ ಸಿಬ್ಬಂದಿಗೆ ಹೊರೆಯಾಗುತ್ತಿದ್ದು, ಮರುಪರಿಶೀಲನೆ ನಡೆಸಬೇಕು. ಖಾಲಿಯಿರುವ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಹುದ್ದೆ ಭರ್ತಿ, ಚುನಾವಣಾ ಕಾರ್ಯಕ್ಕೆ ಅಂಗನವಾಡಿ ಕಾರ್ಯಕರ್ತರನ್ನು ಬಳಸಿಕೊಳ್ಳಬಾರದೆಂದು ಆಗ್ರಹಿಸಿದರು.

ಸಿಡಿಪಿಒ ವಿರುಪಾಕ್ಷಿಗೆ ಅಂಗನವಾಡಿ ನೌಕರರು ಹಾಗೂ ಶಿರಸ್ತೇದಾರ ಅನಿತಾ ಇಂಡಿ ಅವರಿಗೆ ಸಿಐಟಿಯುನಿಂದ ಪ್ರತ್ಯೇಕ ಮನವಿ ಸಲ್ಲಿಸಲಾಯಿತು.

ಸಿಐಟಿಯು ತಾಲೂಕು ಅಧ್ಯಕ್ಷ ಮಲ್ಲಪ್ಪ ಮ್ಯಾಗಡೆ, ಕಾರ್ಯದರ್ಶಿ ಪರಶುರಾಮ, ಮುಖಂಡರಾದ ಹುಸೇನಸಾಬ ತಾವರಗೇರಾ, ಹೊನ್ನಪ್ಪ, ಹುಸೇನಪ್ಪ, ಮುನಿಯಪ್ಪ, ವೆಂಕಟೇಶ ಶಿವು ಕಜ್ಜಿ, ಕೃಷಿ ರಮೇಶ ಬಡಿಗೇರ, ಬಾಳಪ್ಪ ಹುಲಿಹೈದರ, ಶಿವಕುಮಾರ ಈಚನಾಳ, ಅಂಗನವಾಡಿ ನೌಕರರ ಸಂಘದ ಕಾರ್ಯದರ್ಶಿ ಲಕ್ಷ್ಮಿ ಸಜ್ಜನ, ಖಜಾಂಚಿ ಸವಿತಾ, ಸದಸ್ಯರಾದ ಗಿರಿಜಾಬಾಯಿ, ಕವಿತಾ, ಅನಿತಾ, ರತ್ನಮ್ಮ, ಸುಶೀಲಾ, ಭಾಗ್ಯಲಕ್ಷ್ಮೀ, ಶಶಿಕಲಾ, ನಾಗರತ್ನ, ಲಲಿತಾ ಅನುಸೂಯ ಇತರರಿದ್ದರು.

PREV