ಹಳೆಯ ವಿದ್ಯುತ್ ತಂತಿಗಳನ್ನು ಬದಲಿಸಿ ರೈತರು, ಜಾನುವಾರುಗಳನ್ನು ರಕ್ಷಿಸಿ: ಪುಟ್ಟೇಗೌಡ

KannadaprabhaNewsNetwork |  
Published : Jan 02, 2025, 12:35 AM ISTUpdated : Jan 02, 2025, 01:19 PM IST
31ಕೆಎಂಎನ್ ಡಿ24 | Kannada Prabha

ಸಾರಾಂಶ

ಹಳೆಯ ವಿದ್ಯುತ್ ತಂತಿ ಬದಲಿಸಿ ರೈತರು ಮತ್ತು ರಾಸುಗಳ ಜೀವ ರಕ್ಷಣೆ ಮಾಡುವಂತೆ ತಾಲೂಕು ರೈತಸಂಘದ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ ಆಗ್ರಹಿಸಿದರು.

  ಕೆ.ಆರ್.ಪೇಟೆ : ಹಳೆಯ ವಿದ್ಯುತ್ ತಂತಿ ಬದಲಿಸಿ ರೈತರು ಮತ್ತು ರಾಸುಗಳ ಜೀವ ರಕ್ಷಣೆ ಮಾಡುವಂತೆ ತಾಲೂಕು ರೈತಸಂಘದ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ ಆಗ್ರಹಿಸಿದರು.

ಪಟ್ಟಣದ ಹೊಸಹೊಳಲು ರಸ್ತೆಯ ಸೆಸ್ಕಾಂ ವಿಭಾಗೀಯ ಕಚೇರಿ ಆವರಣದಲ್ಲಿ ಇಲಾಖೆಯಿಂದ ಆಯೋಜಿಸಿದ್ದ ಜನಸಂಪರ್ಕ ಸಭೆಯಲ್ಲಿ ಮಾತನಾಡಿ, ಹಗುಣಮಟ್ಟದ ವಿದ್ಯುತ್ ಲೈನ್ ಅಳವಡಿಸಿದೆ ತಾಲೂಕಿನ ವಿವಿಧ ಭಾಗಗಳಲ್ಲಿ ರೈತರು, ರೈತರ ಮಕ್ಕಳು ಮತ್ತು ರೈತರ ಜಾನುವಾರುಗಳು ವಿದ್ಯುತ್ ಅವಘಡದಿಂದ ದುರ್ಮರಣಕ್ಕೆ ಒಳಗಾಗುತ್ತಿದ್ದಾರೆ ಎಂದು ಎಚ್ಚರಿಸಿದರು.

ಇಲಾಖೆ ನೀಡಿದ ಅನುದಾನವನ್ನು ಹಳೆಯ ವಿದ್ಯುತ್ ಲೈನ್ ಬದಲಾವಣೆಗೆ ಬಳಕೆ ಮಾಡದೆ ಇತರೆ ಉದ್ದೇಶಗಳಿಗೆ ಬಳಕೆ ಮಾಡುತ್ತಿದ್ದಾರೆ. ಇದರಿಂದ ವಿದ್ಯುತ್ ಅವಘಡ ಸಂಭವಿಸಿ ಅನಾಹುತಗಳು ಸಂಭವಿಸುತ್ತಿವೆ ಎಂದು ಕಿಡಿಕಾರಿದರು.

ಟಿಸಿ ಹಾಕಿಸಿಕೊಳ್ಳಲು ರೈತರು ಲಕ್ಷಾಂತರ ರು.ಲಂಚ ನೀಡಬೇಕು. ಲಂಚ ನೀಡಿದರೆ ಮಾತ್ರ ಗುತ್ತಿಗೆದಾರರು ಟಿಸಿ ಹಾಕುತ್ತಾರೆ. ಈ ಹಿಂದೆ ರೈತರ ಅನುಮತಿಯಿಲ್ಲದೆ ಹೊಲ ಗದ್ದೆಗಳ ಮೂಲಕ ವಿದ್ಯುತ್ ಲೈನ್ ಎಳೆಯಲಾಗಿದೆ. ರೈತರು ಕಂಬಗಳನ್ನು ಸ್ಥಳಾಂತರಿಸಲು ಒಂದು ಕಂಬ ಸ್ಥಳಾಂತರಕ್ಕೆ ಇಂತಿಷ್ಟು ಹಣ ಎಂದು ಇಲಾಖೆ ಸೂಚಿಸಿದಷ್ಟು ಹಣ ನೀಡಬೇಕಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಯಾವುದೇ ಬಾಡಿಗೆ ಪಡೆಯದೆ ಕಂಬ ಅಳವಡಿಸಿಕೊಳ್ಳಲು ರೈತರು ಜಾಗ ಕೊಟ್ಟಿದ್ದಾರೆ. ಸ್ಥಳಾಂತರಕ್ಕೆ ಹಣ ವಸೂಲಿ ಮಾಡುವುದು ಸರಿಯಲ್ಲ. ಜಮೀನಿನಲ್ಲಿ ಅಳವಡಿಸಿರುವ ವಿದ್ಯುತ್ ಕಂಬಗಳಿಗೆ ಒಂದು ಕಂಬಕ್ಕೆ ಇಂತಿಷ್ಟು ಎಂದು ಮಾಸಿಕ ಬಾಡಿಗೆ ನೀಡಿ ಎಂದು ಆಗ್ರಹಿಸಿದರು.

ರೈತಸಂಘದ ಮುಖಂಡ ಕೆ.ಆರ್.ಜಯರಾಂ ಮಾತನಾಡಿ, ನಮಗೆ ಉಚಿತ ವಿದ್ಯುತ್ ಅಗತ್ಯವಿಲ್ಲ. ಬದಲಾಗಿ ಗುಣಮಟ್ಟದ ವಿದ್ಯುತ್ ನೀಡಬೇಕು. ರೈತ ತನ್ನ ಸ್ವಂತ ಖರ್ಚಿನಲ್ಲಿ ತನ್ನ ಭೂಮಿಯನ್ನು ತಾನೇ ನೀರಾವರಿಗೆ ಒಳಪಡಿಕೊಂಡರೂ ವಿದ್ಯುತ್ ಇಲಾಖೆ ರೈತರಿಗೆ ಸಮರ್ಪಕ ವಿದ್ಯುತ್ ಪೂರೈಕೆ, ಟಿ.ಸಿ.ಅಳವಡಿಕೆ ಮತ್ತಿತರ ರೈತರ ಸಮಸ್ಯೆಗಳಿಗೆ ಸ್ಪಂದಿಸದೆ ರೈತರ ಸುಲಿಗೆಗೆ ನಿಂತಿದೆ ಎಂದು ದೂರಿದರು.

ಜನಸಂಪರ್ಕ ಸಭೆಗಳಿಗೆ ಅಧಿಕಾರಿಗಳು ಬಂದು ರೈತರ ಸಮಸ್ಯೆ ಆಲಿಸುತ್ತಿಲ್ಲ. ಸಭೆ ಬಗ್ಗೆ ವ್ಯವಸ್ಥಿತ ಕರಪತ್ರಗಳನ್ನು ಅಂಟಿಸಿ ಹೆಚ್ಚಿನ ರೈತರು ಭಾಗವಹಿಸುವ ಬಗ್ಗೆ ಗಮನ ಹರಿಸಬೇಕು ಎಂದು ಒತ್ತಾಯಿಸಿದರು.

ಸಭೆಯಲ್ಲಿ ಜಿಲ್ಲಾ ರೈತಸಂಘ ಮಾಜಿ ಅಧ್ಯಕ್ಷ ಎಂ.ವಿ.ರಾಜೇಗೌಡ, ಮುಖಂಡರಾದ ಕೃಷ್ಣಾಪುರ ರಾಜಣ್ಣ, ಚೌಡೇನಹಳ್ಳಿ ಕೃಷ್ಣೇಗೌಡ, ಲಕ್ಷ್ಮೀಪುರ ನಾಗರಾಜು, ನಗರೂರು ಕುಮಾರ್, ಬಳ್ಳೇಕೆರೆ ವಿಜಯಕುಮಾರ್ ಮತ್ತಿತರರು ಮಾತನಾಡಿದರು.

ಸೆಸ್ಕಾಂ ಅಧೀಕ್ಷಕ ಅಭಿಯಂತರ ಸೋಮಶೇಖರ್, ಕಾರ್ಯಪಾಲಕ ಅಭಿಯಂತರ ರಮೇಶ್, ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಪುಟ್ಟಸ್ವಾಮಿ, ದೀಪಕ್ ಸೇರಿದಂತೆ ಸೆಸ್ಕಾಂ ವಿವಿಧ ಉಪ ಘಟಕಗಳ ಕಿರಿಯ ಅಭಿಯಂತರರುಗಳು ಇದ್ದರು.

PREV

Latest Stories

ಏಕರೂಪ ಸಿನಿಮಾ ಟಿಕೆಟ್‌ ದರಕ್ಕೆ ಕರಡು- ಗರಿಷ್ಠ ಟಿಕೆಟ್‌ ದರ ₹200 ನಿಗದಿ
ಶಾಲೆಯಲ್ಲಿನ ಕಲುಷಿತ ಬಿಸಿಯೂಟ ಸೇವಿಸಿ 68 ವಿದ್ಯಾರ್ಥಿಗಳು ಅಸ್ವಸ್ಥ
ರಾಷ್ಟ್ರೀಯ ಲೋಕ ಅದಾಲತ್: 58.67 ಲಕ್ಷ ಕೇಸ್ ಇತ್ಯರ್ಥ