ಟಿಬಿ ಬಡಾವಣೆ ಬದಲು ವಿಜಯಪುರ ಹೆಸರಿಡಿ

KannadaprabhaNewsNetwork | Published : Apr 10, 2025 1:01 AM

ಸಾರಾಂಶ

ಪಟ್ಟಣದ ಟಿಬಿ ಬಡಾವಣೆ ಬದಲಿಸಿ ವಿಜಯಪುರ ಬಡಾವಣೆ ಎಂದು ಮರು ನಾಮಕರಣ ಮಾಡಬೇಕು ಎಂದು ಜಿಲ್ಲಾ ಮತ್ತು ತಾಲೂಕು ಕಸಾಪ ಘಟಕಗಳು ಪುರಸಭೆ ಅಧ್ಯಕ್ಷ ಮಧುಗೆ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಪಟ್ಟಣದ ಟಿಬಿ ಬಡಾವಣೆ ಬದಲಿಸಿ ವಿಜಯಪುರ ಬಡಾವಣೆ ಎಂದು ಮರು ನಾಮಕರಣ ಮಾಡಬೇಕು ಎಂದು ಜಿಲ್ಲಾ ಮತ್ತು ತಾಲೂಕು ಕಸಾಪ ಘಟಕಗಳು ಪುರಸಭೆ ಅಧ್ಯಕ್ಷ ಮಧುಗೆ ಮನವಿ ಸಲ್ಲಿಸಿದರು.

ಪುರಸಭೆ ಕಚೇರಿಯಲ್ಲಿ ಪುರಸಭೆ ಅಧ್ಯಕ್ಷರಿಗೆ ಜಿಲ್ಲಾ ಕಸಾಪ ಅಧ್ಯಕ್ಷ ಎಂ.ಶೈಲಕುಮಾರ್ ಮನವಿ ಸಲ್ಲಿಸಿ ವಿಜಯನಾರಾಯಣ ಸ್ವಾಮಿ ದೇವಾಲಯದ ರಸ್ತೆಯಲ್ಲಿ ವಿಜಯಪುರ ಬಡಾವಣೆ ಎಂದು ಫಲಕ ಹಾಕಲು ಕೋರಿದರು. ಈ ಸಮಯದಲ್ಲಿ ಪುರಸಭೆ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಒಪ್ಪಿಗೆ ಪಡೆದು ನಾಮಕರಣ ಮಾಡುವ ಭರವಸೆಯನ್ನು ಪುರಸಭೆ ಅಧ್ಯಕ್ಷರು ನೀಡಿದ್ದಾರೆ ಎಂದು ಕಸಾಪ ಕಾರ್ಯದರ್ಶಿ ಹೂರದಹಳ್ಳಿ ಪ್ರಸಾದ್‌ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ಮಹಮದ್‌ ಇಲಿಯಾಸ್, ಕಸಾಪದ ಆಲತ್ತೂರು ಶಾಂತೇಶ್, ವಕೀಲ ಕಾಳಸ್ವಾಮಿ ಇದ್ದರು.

ಗುಂಡ್ಲುಪೇಟೆಯ ಮೂಲ ಹೆಸರು ವಿಜಯಪುರ!ಜಿಲ್ಲಾ ಕಸಾಪದ ಅಧ್ಯಕ್ಷ ಎಂ.ಶೈಲಕುಮಾರ್‌ (ಶೈಲೇಶ್‌) ಪ್ರಕಾರ ತಾಲೂಕು ಕೇಂದ್ರವಾದ ಗುಂಡ್ಲುಪೇಟೆ ಪಟ್ಟಣದ ಮೂಲ ಹೆಸರು ವಿಜಯಪುರ ಎಂದಿತ್ತು. ಗಂಗರ ಆಳ್ವಿಕೆಯಲ್ಲಿ ಕುಡುಗುನಾಡು ಎಂದು ಕರೆಯಲ್ಪಡುತ್ತಿದ್ದ ಈ ಸ್ಥಳ ಹೊಯ್ಸಳರ ಕಾಲಕ್ಕೆ ಕ್ರಿಶ ೧೨೨೧ರಲ್ಲಿ ತೆರಕಣಾಂಬಿ ಮೋಡ ಕುಲದ ಅರಸು ಶ್ರೀರಂಗ ಡಣಾಯಕರು ಇಲ್ಲಿ ವಿಜಯ ನಾರಾಯಣ ಸ್ವಾಮಿ ದೇವಾಲಯ ಕಟ್ಟಿಸಿದರು. ದೇವಸ್ಥಾನದ ನಿರ್ವಹಣೆಗಾಗಿ ಅಗ್ರಹಾರ ಹಾಗೂ ಪ್ರಧಾನ ಬೀದಿ, ಅದರ ಸುತ್ತಲೂ ಮಣ್ಣಿನಕೋಟೆ ನಿರ್ಮಿಸಿ ‌‌ಕೋಟೆಯೊಳಗಿನ ಪಟ್ಟಣಕ್ಕೆ ಪ್ರಸನ್ನ ವಿಜಯಪುರ ಎಂದು ನಾಮಕರಣ ಮಾಡಿದರೆಂಬ ಐತಿಹಾಸಿಕ ದಾಖಲೆಗಳಿವೆ. ಮುಂದೆ ಹಲವು ಶತಮಾನಗಳ ಕಾಲ ವಿಜಯಪುರ ಎಂದೇ ಜನಜನಿತವಾಗಿದ್ದ ಈ ‌‌ಸ್ಥಳ ‌ಮೈಸೂರು ಅರಸು ‌ಚಿಕ್ಕದೇವರಾಜ ಒಡೆಯರ್ ಕಾಲದಲ್ಲಿ ಗುಂಡ್ಲುಪೇಟೆ ಎನಿಸಿಕೊಂಡಿತು.

ಪ್ರಸ್ತುತ ಸರ್ಕಾರದ ಕಂದಾಯ ಇಲಾಖೆ ಭೂ ದಾಖಲೆಯಲ್ಲಿ ವಿಜಯಪುರ ಎಂದೇ ಕರೆಸಿಕೊಳ್ಳುತ್ತಿರುವ ಸಂಗತಿಯಿಂದಾಗಿ ಕನ್ನಡ ಸಾಹಿತ್ಯ ಪರಿಷತ್ತು ಈ ಪಟ್ಟಣದಲ್ಲಿ ಈಗಾಗಲೇ ಟಿಬಿ ಬಡಾವಣೆ ಎನಿಸಿಕೊಳ್ಳುತ್ತಿರುವ ಪ್ರದೇಶವನ್ನು ವಿಜಯಪುರ ಬಡಾವಣೆ ಎಂದು ಮರು ನಾಮಕರಣ ಮಾಡಲು ಪ್ರಮುಖ ಕಾರಣ. ಪಟ್ಟಣದ ಜನರ ಬಹುದಿನದ ಬಯಕೆಯನ್ನು ಶಾಸಕ ಗಣೇಶ್ ಪ್ರಸಾದರ ಗಮನಕ್ಕೆ ತಂದು ಶೀಘ್ರ ಈಡೇರಿಸಲು ತಾಲೂಕು ಆಡಳಿತ ಹಾಗೂ ಜಿಲ್ಲಾಡಳಿತವನ್ನು ಕೋರಿಕೊಳ್ಳಲು ಕನ್ನಡ ಸಾಹಿತ್ಯ ಪರಿಷತ್ತು ನಿರ್ಧರಿಸಿದೆ ಎಂದು ಗೌರವ ಕಾರ್ಯದರ್ಶಿ ಪ್ರಸಾದ್ ತಿಳಿಸಿದರು.

Share this article