ಅಧಿಕಾರಕ್ಕೆ ಬರುತ್ತಿದ್ದಂತೆ ಕಾಂಗ್ರೆಸ್‌ಗೆ ಸೂಕ್ತ ಉತ್ತರ ನೀಡುತ್ತೇವೆ: ರೂಪಾಲಿ ನಾಯ್ಕ

KannadaprabhaNewsNetwork |  
Published : Apr 03, 2025, 12:30 AM IST
ರೂಪಾಲಿ ನಾಯ್ಕ ಮಾತನಾಡಿದರು  | Kannada Prabha

ಸಾರಾಂಶ

ಅಧಿಕಾರದ ದರ್ಪದಿಂದ ರಾಜಕೀಯ ಉದ್ದೇಶಕ್ಕಾಗಿ ಬಿಜೆಪಿಯ 18 ಶಾಸಕರನ್ನು ಅಮಾನತು ಮಾಡಲಾಗಿದೆ.

ಕಾರವಾರ: ಅಧಿಕಾರದ ದರ್ಪದಿಂದ ರಾಜಕೀಯ ಉದ್ದೇಶಕ್ಕಾಗಿ ಬಿಜೆಪಿಯ 18 ಶಾಸಕರನ್ನು ಅಮಾನತು ಮಾಡಲಾಗಿದೆ. ನಮಗೂ ಕಾಲ ಬರುತ್ತೆ. ನಾವು ಅಧಿಕಾರಕ್ಕೆ ಬಂದ ಮೇಲೆ ಇವರಿಗೆ ಸೂಕ್ತ ಉತ್ತರ ನೀಡುತ್ತೇವೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷೆ, ಮಾಜಿ ಶಾಸಕಿ ರೂಪಾಲಿ ಎಸ್.ನಾಯ್ಕ ಕಾಂಗ್ರೆಸ್ ಸರ್ಕಾರದ ವಿರುದ್ಧ ಅಬ್ಬರಿಸಿದರು.

ಬೆಲೆ ಏರಿಕೆ ವಿರೋಧಿಸಿ ಭಾರತೀಯ ಜನತಾ ಪಕ್ಷ ಬೆಂಗಳೂರಿನ ಪ್ರೀಡಂ ಪಾರ್ಕನಲ್ಲಿ ಹಮ್ಮಿಕೊಂಡ ಅಹೋರಾತ್ರಿ ಧರಣಿಯಲ್ಲಿ ಪಾಲ್ಗೊಂಡು ಮಾತನಾಡಿದರು.

ಹಿಂದೆ ಭಾರತೀಯ ಜನತಾ ಪಕ್ಷ ಅಧಿಕಾರದಲ್ಲಿದ್ದಾಗ ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕರಾಗಿದ್ದರು. ಆಗೆಲ್ಲ ಸದನದಲ್ಲಿ ಕಾಂಗ್ರೆಸ್ಸಿಗರು ಏನೆಲ್ಲ ಮಾಡಿದರೂ ಸ್ಪೀಕರ್ ಅವರ ವಿರುದ್ಧ ಇಂತಹ ಅಸ್ತ್ರ ಪ್ರಯೋಗಿಸಲಿಲ್ಲ. ಆದರೆ ಈಗ ರಾಜಕೀಯ ಉದ್ದೇಶಕ್ಕಾಗಿ ನಮ್ಮ ಪಕ್ಷದ ಶಾಸಕರನ್ನು ಅಮಾನತು ಮಾಡಲಾಗಿದೆ. ಅತ್ತೆಗೊಂದು ಕಾಲ ಸೊಸೆಗೊಂದು ಕಾಲ ಎನ್ನುವಂತೆ ಮುಂದೆ ನಾವು ಅಧಿಕಾರಕ್ಕೆ ಬರುತ್ತೇವೆ. ಪ್ರಜಾಪ್ರಭುತ್ವ ವಿರೋಧಿ, ಜನ ವಿರೋಧಿ ಕಾರ್ಯಗಳನ್ನು ಮಾಡಿದ ಕಾಂಗ್ರೆಸ್ಸಿಗರಿಗೆ ತಕ್ಕ ಉತ್ತರ ಕೊಡುತ್ತೇವೆ ಕಾದು ನೋಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್ ಆಡಳಿತದಲ್ಲಿ ಬೆಲೆ ಏರಿಕೆ ವಿಪರೀತವಾಗಿದೆ. ಒಂದು ಕಡೆಯಿಂದ ₹2 ಸಾವಿರ ಕೊಟ್ಟ ಹಾಗೆ ಮಾಡಿ ₹15 ಸಾವಿರದಷ್ಟು ದೋಚುತ್ತಿದ್ದಾರೆ. ಬಡವರು, ಮಧ್ಯಮ ವರ್ಗದವರು ಬದುಕು ಸಾಗಿಸುವುದೇ ದುಸ್ತರವಾಗಿದೆ. ಸರ್ಕಾರ ಜನರ ನೆಮ್ಮದಿಯನ್ನು ಕಸಿದುಕೊಳ್ಳುತ್ತಿದೆ. ಬೆಲೆ ಏರಿಕೆಯಿಂದ ಜನತೆ ಪ್ರತಿಯೊಂದು ವಸ್ತುವಿಗೂ ಪರದಾಡಬೇಕಾದ ಪರಿಸ್ಥಿತಿ ಬಂದಿದೆ ಎಂದು ವಿವರಿಸಿದರು. ರಾಜ್ಯದ ವಿವಿಧೆಡೆಯಿಂದ ಕಾರ್ಯಕರ್ತರು ಆಗಮಿಸಿದ್ದಾರೆ. ಪಕ್ಷದ ಹಿರಿಯರಾದ ಬಿ.ಎಸ್. ಯಡಿಯೂರಪ್ಪ, ರಾಜ್ಯ ಅಧ್ಯಕ್ಷರಾದ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ನಡೆಯುತ್ತಿರುವ ಈ ಹೋರಾಟ ಯಶಸ್ವಿಯಾಗುವುದು ನಿಶ್ಚಿತ. ಸತತವಾಗಿ ಬೆಲೆ ಏರಿಕೆ ಮಾಡುತ್ತಾ, ಭ್ರಷ್ಟಾಚಾರದಲ್ಲಿ ಮುಳುಗಿ, ಅಭಿವೃದ್ಧಿಯನ್ನೇ ಕಡೆಗಣಿಸಿರುವ ಕಾಂಗ್ರೆಸ್ ಸರ್ಕಾರ ಅಧಿಕಾರದಿಂದ ತೊಲಗುವ ತನಕ ಭಾರತೀಯ ಜನತಾ ಪಕ್ಷ ವಿರಮಿಸುವುದಿಲ್ಲ ಎಂದು ಹೇಳಿದರು.

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ, ವಿಪ ವಿರೋಧ ಪಕ್ಷದ ನಾಯಕ ಚಲವಾದಿ ನಾರಾಯಣ ಸ್ವಾಮಿ ಮತ್ತಿತರು ನಾಯಕರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಯ್ಯಪ್ಪನ ಮಾಲೆ ಧರಿಸಿದ ಬಾಲಕನ ಮೇಲೆ ಶಿಕ್ಷಕ ಹಲ್ಲೆ!
ತಂದೆಗೆ ಕಿರುಕುಳ ನೀಡದಂತೆ ಚೈತ್ರಾ ಕುಂದಾಪುರಗೆ ಆದೇಶ