ಮಳೆ ಹಾನಿ ಕುರಿತು ಎರಡು ದಿನದೊಳಗೆ ವರದಿ ಕೊಡಿ

KannadaprabhaNewsNetwork |  
Published : Sep 09, 2024, 01:30 AM IST
ಕಲಬುರಗಿ ಜಿಲ್ಲಾಧಿಕಾರಿಗಳ ಕಚೇರಿಯ ವಿಡಿಯೋ ಕಾನ್ಪರೆನ್ಸ್ ಹಾಲ್‍ನಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆ ನಡೆಯಿತು. | Kannada Prabha

ಸಾರಾಂಶ

ಜಿಲ್ಲಾಧಿಕಾರಿಗಳ ಕಚೇರಿಯ ವಿಡಿಯೋ ಕಾನ್ಪರೆನ್ಸ್ ಹಾಲ್‍ನಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆ

ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆ

ಕನ್ನಡಪ್ರಭ ವಾರ್ತೆ ಕಲಬುರಗಿ

ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಸುರಿದ ಮಳೆಯಿಂದ ಹಾನಿಯಾದ ರಸ್ತೆ, ಸೇತುವೆ, ಮನೆ, ಕೆರೆ, ಟ್ಯಾಂಕ್, ಶಾಲಾ ಕಟ್ಟಡಗಳ ಕುರಿತು ಎರಡು ದಿನದಲ್ಲಿ ವರದಿ ನೀಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಸೂಚಿಸಿದರು.

ಜಿಲ್ಲಾಧಿಕಾರಿಗಳ ಕಚೇರಿಯ ವಿಡಿಯೋ ಕಾನ್ಪರೆನ್ಸ್ ಹಾಲ್‍ನಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರಸ್ತೆ, ಸೇತುವೆ, ಶಾಲಾ ಕಟ್ಟಡ ಹೀಗೆ ಎಲ್ಲವು ಸಮೀಕ್ಷೆ ಮಾಡಬೇಕು. ಮನೆ ಹಾನಿ ಕುರಿತು ಸರ್ಕಾರದ ಪರಿಷ್ಕೃತ ಮಾರ್ಗಸೂಚಿಯಂತೆ ಕೂಡಲೆ ಪರಿಹಾರ ಧನ ಫಲಾನುಭವಿಗಳಿಗೆ ವಿತರಿಸಬೇಕೆಂದರು.

ಜಲಾಶಯಗಳ ಸುತ್ತ ಜನ ಮತ್ತು ಜಾನುವಾರುಗಳು ಹೋಗದಂತೆ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಬೇಕು. ಜಲಾಶಯಗಳು ಒಳಹರಿವು ಹೆಚ್ಚಾದಲ್ಲಿ ಎಫ್.ಆರ್.ಎಲ್. ನಂತೆ ನದಿಗೆ ನೀರು ಬಿಡಬೇಕು. ನೀರು ಶೇಖರಣೆ ಮಾಡದೆ ಅನಗತ್ಯ ನದಿಗೆ ನೀರು ಹರಿಸಬಾರದು ಎಂದು ಕೆ.ಎನ್.ಎನ್.ಎಲ್. ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಲೋಕೋಪಯೋಗಿ ಮತ್ತು ಪಿ.ಆರ್.ಇ.ಡಿ. ಇಲಾಖೆಯವರು ಗ್ರಾಮೀಣ ರಸ್ತೆ, ರಾಜ್ಯ ಹೆದ್ದಾರಿಗಳು, ಜಿಲ್ಲಾ ಹೆದ್ದಾರಿಗಳು, ಸೇತುವೆ ಹಾನಿಯಾದ ಬಗ್ಗೆ ಕೂಡಲೇ ಸಮೀಕ್ಷೆ ವರದಿ ಸಲ್ಲಿಸಲು ತಿಳಿಸಿದ ಅವರು, ಮಳೆಯಿಂದ ರಸ್ತೆಗಳಲ್ಲಿ ಗುಂಡಿಗಳು ಕಂಡು ಬಂದಲ್ಲಿ ಕೂಡಲೆ ದುರಸ್ತಿ ಕಾರ್ಯ ಕೈಗೆತ್ತಿಕೊಳ್ಳಬೇಕು ಎಂದರು.

ಮಳೆ ಮುನ್ಸೂಚನೆ ಹಿನ್ನೆಲೆಯಲ್ಲಿ ತಹಸೀಲ್ದಾರರು, ಪಿಡಿಓ, ಇಓಗಳು, ವಿಎ ಅಧಿಕಾರಿಗಳು ಕೇಂದ್ರಸ್ಥಾನದಲ್ಲಿದ್ದು, ಮಳೆಯಿಂದಾಗುವ ಹಾನಿ ಬಗ್ಗೆ ಮೇಲಾಧಿಕಾರಿಗಳಿಗೆ ಕಾಲ ಕಾಲಕ್ಕೆ ವರದಿ ನೀಡಬೇಕಲ್ಲದೆ ರಕ್ಷಣಾ ಕಾರ್ಯಚರಣೆ ಕೈಗೊಳ್ಳಬೇಕು. ಮನೆಗೆ ನೀರು ನುಗಿದ್ದ ಪ್ರಕರಣಗಳು, ಬೆಳೆಯಿಂದ ಹಾನಿಗೊಳದ ಮನೆಗಳಿಗೆ ಪರಿಶೀಲಿಸಿ ಪರಿಹಾರ ಹಣ ಬಿಡುಗಡೆಗೆ ಕ್ರಮ ವಹಿಸಬೇಕೆಂದು ತಹಸೀಲ್ದಾರ್‌ಗೆ ಸೂಚನೆ ನೀಡಿದರು.

ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್ ಮಾತನಾಡಿ, ಕಲಬುರಗಿ ಜಿಲ್ಲೆಯಲ್ಲಿ ಜ.1ರಿಂದ ಸೆ.6ರ ವರೆಗೆ ವಾಡಿಕೆಗಿಂತ ಶೇ.23ರಷ್ಟು ಮಳೆ ಹೆಚ್ಚಾಗಿದೆ. ಕಳೆದ 2-3 ದಿನಗಳಿಂದ ಅತಿ ಹೆಚ್ಚು ಮಳೆಯಿಂದ ಬೆಳೆ ಹಾನಿಯಾಗಿದ್ದು, ಕೃಷಿ, ಕಂದಾಯ ಇಲಾಖೆ ಅಧಿಕಾರಿಗಳಿಂದ ಜಂಟಿ ಸಮೀಕ್ಷೆ ನಡೆಸಲಾಗುತ್ತಿದೆ. ಬೆಳೆ ಹಾನಿಗೆ ಸಂಬಂಧಪಟ್ಟಂತೆ ಬೆಳೆ ವಿಮೆ ಮಾಡಿಸಿದ ರೈತರು ವಿಮಾ ಕಂಪನಿಗೆ ದೂರು ಸಲ್ಲಿಸಬೇಕಿದೆ ಎಂದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಪ್ರೊಬೇಷನರಿ ಐಎಎಸ್ ಅಧಿಕಾರಿ ಮೀನಾಕ್ಷಿ ಆರ್ಯ, ತೋಟಗಾರಿಕೆ ಉಪನಿರ್ದೇಶಕ ಸಂತೋಷ ಇನಾಂದರ್ ಸೇರಿದಂತೆ ಇತರೆ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ