ಕನ್ನಡಪ್ರಭ ವಾರ್ತೆ ಮಂಗಳೂರು
ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಶೇ. 50ರಷ್ಟು ಪ್ರದೇಶಗಳಿಗೆ ಶುದ್ಧೀಕರಿಸದ ನೀರು ಪೂರೈಕೆ ಮಾಡುತ್ತಿರುವ ವಿಚಾರವನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಈ ಕುರಿತು ತನಿಖೆ ನಡೆಸಲು ಕಾರ್ಪೊರೇಟರ್‌ಗಳು ಮತ್ತು ತಜ್ಞರನ್ನೊಳಗೊಂಡ ಸತ್ಯಶೋಧನಾ ಸಮಿತಿ ರಚಿಸಿ ಅದರ ವರದಿಯನ್ನು ರಾಜ್ಯ ಸರ್ಕಾರಕ್ಕೆ ನೀಡಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ತಿಳಿಸಿದ್ದಾರೆ.ಪಾಲಿಕೆಯ ವಿಪಕ್ಷ ಸದಸ್ಯರ ಜತೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಲುಷಿತವಾಗಿರುವ 13 ನದಿಗಳ ಪೈಕಿ ನೇತ್ರಾವತಿಯೂ ಸೇರಿರುವ ವೈಜ್ಞಾನಿಕ ವರದಿ ಬಹಿರಂಗವಾದ ಬಳಿಕವೂ ಸಂಸ್ಕರಿಸದ ಮಲಿನ ನೀರನ್ನೇ ಜನರಿಗೆ ನೀಡುತ್ತಿರುವುದು ಆತಂಕದ ವಿಚಾರ. ಜ.17ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಲ್ಲೆಗೆ ಭೇಟಿ ನೀಡುವ ಮೊದಲು ಈ ಕುರಿತು ಸತ್ಯಶೋಧನಾ ವರದಿ ಸಿದ್ಧಪಡಿಸಿ ಸಿಎಂ ಅವರಿಗೆ ಹಸ್ತಾಂತರಿಸಲಾಗುವುದು ಎಂದು ಹೇಳಿದರು.
ಜನರಿಗೆ ಕುಡಿಯುವ ನೀರೂ ಕಲುಷಿತ, ಮಹಾನಗರ ಪಾಲಿಕೆಯ ಕ್ಷೇತ್ರಗಳನ್ನು ಪ್ರತಿನಿಧಿಸುವ ಇಬ್ಬರು ಶಾಸಕರು ಈ ವಿಚಾರದಲ್ಲಿ ಮೌನ ವಹಿಸಿದ್ದು ಏಕೆ ಎಂದು ಐವನ್ ಪ್ರಶ್ನಿಸಿದರು.ಪಾಲಿಕೆಯ ವಿಪಕ್ಷ ನಾಯಕ ಅನಿಲ್ ಕುಮಾರ್, ಕಾರ್ಪೊರೇಟರ್‌ಗಳಾದ ಶಶಿಧರ ಹೆಗ್ಡೆ, ಪ್ರವೀಣ್‌ಚಂದ್ರ ಆಳ್ವ, ಸಂಶುದ್ದೀನ್, ಕೇಶವ್, ಭಾಸ್ಕರ ಕೆ., ಮಾಜಿ ಕಾರ್ಪೊರೇಟರ್ ಹರಿನಾಥ್ ಇದ್ದರು.ನನ್ನ ಮನೆಗೂ ಕಲುಷಿತ ನೀರು: ವಿಪಕ್ಷ ನಾಯಕ ಗಂಭೀರ ಆರೋಪ
ಪಂಜಿಮೊಗರು ಪ್ರದೇಶದಲ್ಲಿರುವ ನನ್ನ ಮನೆಗೂ ಶುದ್ಧೀಕರಣ ಆಗದ ಕಲುಷಿತ ನೀರೇ ಸರಬರಾಜಾಗುತ್ತಿದೆ ಎಂದು ವಿಪಕ್ಷ ನಾಯಕ ಅನಿಲ್ ಕುಮಾರ್ ಗಂಭೀರ ಆರೋಪ ಮಾಡಿದರು. ಒಂದು ತಿಂಗಳ ಅವಧಿಯಲ್ಲಿ ತನ್ನ ಮನೆಯ ಟ್ಯಾಂಕ್ ಶುದ್ಧೀಕರಿಸಿದ ಸಂದರ್ಭ ಕಲುಷಿತ ನೀರು ಹೊರಹಾಕುವ ವಿಡಿಯೊವನ್ನು ಅವರು ಇದೇ ಸಂದರ್ಭ ಪ್ರದರ್ಶಿಸಿದರು.