ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕುರಿತು ಸರ್ಕಾರಕ್ಕೆ ವರದಿ

KannadaprabhaNewsNetwork |  
Published : Mar 04, 2024, 01:22 AM IST
ಉಪ ಲೋಕಾಯುಕ್ತ ಫಣೀಂದ್ರ | Kannada Prabha

ಸಾರಾಂಶ

ವೈದ್ಯಕಿಯ ಸೇವೆಗಳಿಗೆ ಯಾವುದೇ ಹಣ ಪಾವತಿ ಮತ್ತು ಹೊರಗಡೆಯಿಂದ ಔಷಧ ಪಡೆಯುವಂತೆ ತಿಳಿಸದೇ ಆಸ್ಪತ್ರೆಯಲ್ಲಿಯೇ ಉಚಿತವಾಗಿ ಔಷಧ ನೀಡುತ್ತಿರುವ ಬಗ್ಗೆ ಖಚಿತ ಮಾಡಿಕೊಂಡರು

ಕಾರವಾರ: ಇಲ್ಲಿನ ವೈದ್ಯಕೀಯ ಕಾಲೇಜಿನಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ಅಗತ್ಯ ತಜ್ಞ ವೈದ್ಯರ ನೇಮಕ ಕುರಿತಂತೆ ಲೋಕಾಯಕ್ತದ ಮೂಲಕ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ರಾಜ್ಯದ ಉಪ ಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ ತಿಳಿಸಿದರು.

ಇಲ್ಲಿನ ಮೆಡಿಕಲ್ ಕಾಲೇಜಿಗೆ ಭಾನುವಾರ ಅನಿರೀಕ್ಷಿತ ಭೇಟಿ ನೀಡಿ, ಪರಿಶೀಲನೆ ನಡೆಸಿ ಮಾತನಾಡಿ, ಆಸ್ಪತ್ರೆಯಲ್ಲಿದ್ದ ರೋಗಿಗಳ ಸಂಬಂಧಿಕರು ಮತ್ತು ಸಾರ್ವಜನಿಕರು ಉತ್ತರ ಕನ್ನಡದಲ್ಲಿ ಸೂಪರ್ ಸ್ಪೆಷಾಲಿಟಿ ಅಸ್ಪತ್ರೆಯ ಅಗತ್ಯತೆ ಮತ್ತು ತಜ್ಞ ವೈದ್ಯರ ಕೊರತೆ ಬಗ್ಗೆ ಮನವಿ ಮಾಡಿದರು.

ಈ ಬಗ್ಗೆ ಸ್ಥಳದಲ್ಲಿದ್ದ ವೈದ್ಯರ ಬಳಿ ಮಾಹಿತಿ ಪಡೆದ ನ್ಯಾಯಮೂರ್ತಿ, ವೈದ್ಯಕೀಯ ಕಾಲೇಜಿನಲ್ಲಿ ಹೃದಯ ರೋಗ ತಜ್ಞರು, ರೇಡಿಯಾಲಜಿಸ್ಟ್ ಸೇರಿದಂತೆ ಅಗತ್ಯವಿರುವ ತಜ್ಞ ವೈದ್ಯರ ನೇಮಕ ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಅಗತ್ಯತೆಯ ಬಗ್ಗೆ ಸರ್ಕಾರಕ್ಕೆ ವರದಿ ಕಳುಹಿಸಲಾಗುವುದು ಎಂದು ಭರವಸೆ ನೀಡಿದರು.

ಆಸ್ಪತ್ರೆಯಲ್ಲಿನ ರೋಗಿಗಳ ವಾರ್ಡ್‌ಗೆ ಭೇಟಿ ನೀಡಿದ ಅವರು, ಉತ್ತಮ ಚಿಕಿತ್ಸೆ ದೊರೆಯುತ್ತಿರುವ ಬಗ್ಗೆ ಮತ್ತು ವೈದ್ಯಕಿಯ ಸೇವೆಗಳಿಗೆ ಯಾವುದೇ ಹಣ ಪಾವತಿ ಮತ್ತು ಹೊರಗಡೆಯಿಂದ ಔಷಧ ಪಡೆಯುವಂತೆ ತಿಳಿಸದೇ ಆಸ್ಪತ್ರೆಯಲ್ಲಿಯೇ ಉಚಿತವಾಗಿ ಔಷಧ ನೀಡುತ್ತಿರುವ ಬಗ್ಗೆ ಖಚಿತ ಮಾಡಿಕೊಂಡರು.

ಆಸ್ಪತ್ರೆಯಲ್ಲಿನ ಎಕ್ಸ್ ರೇ ಕೊಠಡಿ, ನವಜಾತು ಶಿಶುಕೊಠಡಿ, ಮಹಿಳಾ ರೋಗಿಗಳನ್ನು ಭೇಟಿ ಮಾಡಿದ ಅವರು, ವೈದ್ಯಕಿಯ ಸೌಲಭ್ಯಗಳು ಸಮರ್ಪಕವಾಗಿ ದೊರೆಯುತ್ತಿರುವ ಕುರಿತು, ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ನೀಡುತ್ತಿರುವ ಚಿಕಿತ್ಸಾ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಿದರು.

ಇದೇ ಸಂದರ್ಭದಲ್ಲಿ ಮಕ್ಕಳಿಗೆ ಪೊಲಿಯೋ ಹನಿ ಹಾಕಿದರು.

ನಂತರ ಆಸ್ಪತ್ರೆಯ ವೈದ್ಯರೊಂದಿಗೆ ಸಭೆ ನಡೆಸಿದ ಅವರು, ಆಸ್ಪತ್ರೆಯಲ್ಲಿನ ವೈದ್ಯಕೀಯ ತ್ಯಾಜ್ಯವನ್ನು ಸಮರ್ಪಕವಾಗಿ ವಿಲೇವಾರಿ ಮಾಡುವಂತೆ ಹಾಗೂ ಆಸ್ಪತ್ರೆಯಲ್ಲಿ ಅವಧಿ ಮೀರಿದ ಔಷಧಗಳಿದ್ದಲ್ಲಿ ಕೂಡಲೇ ಅವುಗಳನ್ನು ನಾಶ ಪಡಿಸುವಂತೆ ಮತ್ತು ಹೆಚ್ಚವರಿ ಔಷಧಗಳಿದ್ದಲ್ಲಿ ಅಗತ್ಯವಿರುವ ಆಸ್ಪತ್ರೆಗಳಿಗೆ ಹಂಚಿಕೆ ಮಾಡುವಂತೆ ಸೂಚನೆ ನೀಡಿದರು.

ಆಸ್ಪತ್ರೆಯಲ್ಲಿ ಆ್ಯಂಬುಲೆನ್ಸ್‌ ಕೊರತೆಯಿರುವ ಬಗ್ಗೆ ದೂರು ಕೇಳಿ ಬಂದಿದ್ದು, ಹೆಚ್ಚುವರಿ 2 ಹೊಸ ಆ್ಯಂಬುಲೆನ್ಸ್‌ಗಳನ್ನು ಖರೀದಿಸುವಂತೆ ತಿಳಿಸಿದರು.

ಹಿರಿಯ ಸಿವಿಲ್ ನ್ಯಾಯಾಧೀಶೆ ರೇಣುಕಾ ರಾಯ್ಕರ, ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ, ಜಿಪಂ ಸಿಇಓ ಈಶ್ವರಕುಮಾರ ಕಾಂದೂ, ಎಸ್ಪಿ ಎನ್. ವಿಷ್ಣುವರ್ಧನ್, ಲೋಕಾಯುಕ್ತ ಉಪ ನಿಬಂಧಕ ರಾಜಶೇಖರ್, ಚನ್ನಕೇಶವ ರೆಡ್ಡಿ ಇದ್ದರು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ