ಎಂಪಿ ಚುನಾವಣೆ ನೋಡಲು ಬೆಳಗಾವಿಗೆ 5 ದೇಶಗಳ ಪ್ರತಿನಿಧಿಗಳು

KannadaprabhaNewsNetwork |  
Published : May 07, 2024, 01:04 AM IST
ಲೋಕಸಭಾ ಚುನಾವಣೆಯಸಿದ್ಧತೆ ಹಾಗೂ ವಿವಿಧ ಹಂತಗಳ ಪ್ರಕ್ರಿಯೆಗಳನ್ನು ವೀಕ್ಷಿಸಲು ಆಗಮಿಸಿರುವ ಐದು ರಾಷ್ಟ್ರಗಳಚುನಾವಣಾ ಆಯೋಗಗಳ ಪ್ರತಿನಿಧಿಗಳ ಅಂತರ್ ರಾಷ್ಟ್ರೀಯ ತಂಡವು ಬೆಳಗಾವಿ ಜಿಲ್ಲೆಗೆ ಭೇಟಿ ನೀಡಿತು. | Kannada Prabha

ಸಾರಾಂಶ

ವಿಶ್ವದ ಬಹುದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿರುವ ಭಾರತದಲ್ಲಿ ನಡೆಯುತ್ತಿರುವ ಲೋಕಸಭಾ ಚುನಾವಣೆಯ ಸಿದ್ಧತೆ ಹಾಗೂ ವಿವಿಧ ಹಂತದ ಚುನಾವಣಾ ಪ್ರಕ್ರಿಯೆಗಳನ್ನು ವೀಕ್ಷಿಸಲು ಆಗಮಿಸಿರುವ ಐದು ರಾಷ್ಟ್ರಗಳ ಚುನಾವಣಾ ಆಯೋಗಗಳ ಪ್ರತಿನಿಧಿಗಳ ಅಂತಾರಾಷ್ಟ್ರೀಯ ತಂಡವು ಬೆಳಗಾವಿ ಜಿಲ್ಲೆಗೆ ಸೋಮವಾರ ಭೇಟಿ ನೀಡಿತು.

ಕನ್ನಡಪ್ರಭ ವಾರ್ತೆ ಬೆಳಗಾವಿ

ವಿಶ್ವದ ಬಹುದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿರುವ ಭಾರತದಲ್ಲಿ ನಡೆಯುತ್ತಿರುವ ಲೋಕಸಭಾ ಚುನಾವಣೆಯ ಸಿದ್ಧತೆ ಹಾಗೂ ವಿವಿಧ ಹಂತದ ಚುನಾವಣಾ ಪ್ರಕ್ರಿಯೆಗಳನ್ನು ವೀಕ್ಷಿಸಲು ಆಗಮಿಸಿರುವ ಐದು ರಾಷ್ಟ್ರಗಳ ಚುನಾವಣಾ ಆಯೋಗಗಳ ಪ್ರತಿನಿಧಿಗಳ ಅಂತಾರಾಷ್ಟ್ರೀಯ ತಂಡವು ಬೆಳಗಾವಿ ಜಿಲ್ಲೆಗೆ ಸೋಮವಾರ ಭೇಟಿ ನೀಡಿತು.

ಜಿಲ್ಲೆಗೆ ಆಗಮಿಸಿದ ಕಾಂಬೋಡಿಯಾ, ನೇಪಾಳ, ಮೊಲ್ಡೊವಾ, ಸಿಷೆಲ್ಸ್‌ ಹಾಗೂ ಟ್ಯುನಿಷಿಯಾ ದೇಶಗಳ ಚುನಾವಣಾ ಆಯೋಗಗಳ 10 ಸದಸ್ಯರ ತಂಡವನ್ನು ಜಿಲ್ಲಾ ಚುನಾವಣಾಧಿಕಾರಿ ನಿತೇಶ್ ಪಾಟೀಲ ಬರಮಾಡಿಕೊಂಡು , ಜಿಲ್ಲೆಯಲ್ಲಿ ಕೈಗೊಳ್ಳಲಾಗಿರುವ ಚುನಾವಣಾ ಸಿದ್ಧತೆಗಳ ಕುರಿತು‌ ಮಾಹಿತಿ ನೀಡಿದರು.

ಮಸ್ಟರಿಂಗ್ ಕೇಂದ್ರಕ್ಕೆ ಭೇಟಿ:

ಇದಾದ ಬಳಿಕ ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರಗಳ ಮಸ್ಟರಿಂಗ್ ಕೇಂದ್ರಕ್ಕೆ ಭೇಟಿ ನೀಡಿದ ನಿಯೋಗದ ಸದಸ್ಯರು, ಮಸ್ಟರಿಂಗ್ ಕುರಿತು ಮಾಹಿತಿ ಪಡೆದುಕೊಂಡರು. ಮತಗಟ್ಟೆ ಸಿಬ್ಬಂದಿ ನಿಯೋಜನೆ, ಸ್ಟ್ರಾಂಗ್ ರೂಮ್, ಮತಯಂತ್ರಗಳ ವಿತರಣೆ, ಮತಗಟ್ಟೆಗೆ ಚುನಾವಣಾ ಅಧಿಕಾರಿ/ಸಿಬ್ಬಂದಿ ತಂಡಗಳ ರವಾನೆ ಹಾಗೂ ಸಾರಿಗೆ ವ್ಯವಸ್ಥೆ ಬಗ್ಗೆ ಜಿಲ್ಲಾ ಚುನಾವಣಾಧಿಕಾರಿ ನಿತೀಶ್ ಪಾಟೀಲ ಮಾಹಿತಿ ನೀಡಿದರು.

ಮಾದರಿ ನೀತಿಸಂಹಿತೆ(ಎಂಸಿಸಿ) ಕೇಂದ್ರ ವೀಕ್ಷಣೆ: ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಮಾದರಿ ನೀತಿಸಂಹಿತೆ(ಎಂಸಿಸಿ) ಪಾಲನೆಯನ್ನು ಖಚಿತಪಡಿಸುವ ಹಿನ್ನೆಲೆಯಲ್ಲಿ ಸ್ಥಾಪಿಸಲಾಗಿರುವ ಎಂಸಿಸಿ ನಿಗಾ ಕೇಂದ್ರಕ್ಕೆ ಅಂತಾರಾಷ್ಟ್ರೀಯ ನಿಯೋಗ ಭೇಟಿ ನೀಡಿತು.

ಚುನಾವಣೆ ಘೋಷಣೆಯಾದ‌ ತಕ್ಷಣ ಮಾದರಿ ನೀತಿಸಂಹಿತೆ ಜಾರಿಗೆ ಬರುತ್ತದೆ. ಮಾದರಿ ನೀತಿಸಂಹಿತೆ‌ ಉಲ್ಲಂಘನೆಗಳನ್ನು ಪತ್ತೆ ಮಾಡಿ ಸೂಕ್ತಕ್ರಮ ಕೈಗೊಳ್ಳಲು ಅನುಕೂಲವಾಗುವಂತೆ ಸ್ಮಾರ್ಟ್ ಸಿಟಿ ಯೋಜನೆಯಡಿ ಸ್ಥಾಪಿಸಲಾಗಿರುವ ಸುಸಜ್ಜಿತ ಕಮಾಂಡ್ ಆ್ಯಂಡ್ ಕಂಟ್ರೋಲ್‌ ಸೆಂಟರ್ ನಲ್ಲಿ ಎಂಸಿಸಿ ತಂಡ ಕಾರ್ಯನಿರ್ವಹಿಸುತ್ತಿದೆ ಎಂದು ಅಧಿಕಾರಿಗಳು ವಿವರಿಸಿದರು.

ಇಡೀ ಜಿಲ್ಲೆಯಾದ್ಯಂತ ಸ್ಥಾಪಿಸಲಾಗಿರುವ ಚೆಕ್‌ಪೋಸ್ಟ್‌ಗಳನ್ನು ವೆಬ್ ಕ್ಯಾಮೆರಾ ಮೂಲಕ ಒಂದೇ‌ ಕಡೆ ಕುಳಿತು‌ ನಿಗಾ ವಹಿಸುವ ವ್ಯವಸ್ಥೆ; ಜಿಪಿಎಸ್ ಆಧಾರಿತ ವಾಹನಗಳೊಂದಿಗೆ ಕ್ಷೇತ್ರದಾದ್ಯಂತ ಸಂಚರಿಸುವ ಎಫ್.ಎಸ್.ಟಿ ತಂಡಗಳಿಗೆ ತಕ್ಷಣವೇ ಮಾಹಿತಿ ರವಾನಿಸಲು‌ ಅನುಕೂಲವಾಗುವಂಥ ಏಕೀಕೃತ ವ್ಯವಸ್ಥೆ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ವಿವರಿಸಲಾಯಿತು.

ಎಂಸಿಎಂಸಿಗೆ ಭೇಟಿ: ವಾರ್ತಾ ಮತ್ತು ಸಾರ್ವಜನಿಕ‌ ಸಂಪರ್ಕ ಇಲಾಖೆಯ ವಾರ್ತಾಭವನದಲ್ಲಿ ಸ್ಥಾಪಿಸಲಾಗಿರುವ ಮಾಧ್ಯಮ ಪ್ರಮಾಣೀಕರಣ ಹಾಗೂ ಕಣ್ಗಾವಲು ಕೇಂದ್ರ(ಎಂಸಿಎಂಸಿ)ಕ್ಕೆ ಭೇಟಿ ನೀಡಿದ ನಿಯೋಗದ ಸದಸ್ಯರು, ಪ್ರಮಾಣೀಕರಣ ಹಾಗೂ ನಿಗಾ‌ ವ್ಯವಸ್ಥೆಯ ಕುರಿತು ಮಾಹಿತಿ ಪಡೆದುಕೊಂಡರು.

ಮಾಧ್ಯಮ ಪ್ರಮಾಣೀಕರಣ ಹಾಗೂ ಕಣ್ಗಾವಲು ಕೇಂದ್ರ(ಎಂಸಿಎಂಸಿ)ದ ನೋಡಲ್ ಅಧಿಕಾರಿ ಹಾಗೂ ವಾರ್ತಾ ಇಲಾಖೆ ಉಪ ನಿರ್ದೇಶಕ ಗುರುನಾಥ ಕಡಬೂರ ಕಾರ್ಯಚಟುವಟಿಕೆಗಳನ್ನು ವಿವರಿಸಿದರು.

ಸಾಮಾಜಿಕ‌ ಜಾಲತಾಣಗಳ ನಿಗಾ:

ಎ.ಐ. ನಿಂದ ಸೃಜಿಸಲಾಗುವ ಸುಳ್ಳುಸುದ್ದಿಗಳ ಪತ್ತೆ, ಅಭ್ಯರ್ಥಿಗಳು ಮತ್ತು ರಾಜಕೀಯ ಪಕ್ಷಗಳ ಚುನಾವಣಾ ವೆಚ್ಚದ ಮೇಲೆ ನಿಗಾ ವಹಿಸುವ ವಿಧಾನಗಳು ಮತ್ತು ಕಾನೂನು ಕ್ರಮಗಳ ಬಗ್ಗೆ ನಿಯೋಗದ ಸದಸ್ಯರು ಇದೇ ವೇಳೆ ಚರ್ಚಿಸಿದರು.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ