ಇಡಿ ದಾಳಿಯಿಂದ ಬೆಳ್ಳಂಬೆಳಗ್ಗೆ ಬೆಚ್ಚಿ ಬಿದ್ದ ಜನಪ್ರತಿನಿಧಿಗಳು!

KannadaprabhaNewsNetwork |  
Published : Jun 12, 2025, 01:16 AM IST
ಶಾಸಕರ ಮೇಲೆ ಇಡಿ ದಾಳಿ ಫೋಟೋಗಳು  | Kannada Prabha

ಸಾರಾಂಶ

ವಾಲ್ಮೀಕಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣ ಹಿನ್ನೆಲೆ ಗಣಿ ಜಿಲ್ಲೆಯ ಕಾಂಗ್ರೆಸ್ ಶಾಸಕರು ಹಾಗೂ ಸಂಸದ ಈ.ತುಕಾರಾಂ ಅವರ ನಿವಾಸಗಳ ಮೇಲೆ ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳ ತಂಡ ಏಕಕಾಲಕ್ಕೆ ದಾಳಿ ನಡೆಸಿದ್ದರಿಂದ ಜನ ಪ್ರತಿನಿಧಿಗಳು ಬೆಚ್ಚಿ ಬಿದ್ದಿದ್ದಾರೆ.

ಕನ್ನಡಪ್ರಭ ವಾರ್ತೆ ಬಳ್ಳಾರಿ

ವಾಲ್ಮೀಕಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣ ಹಿನ್ನೆಲೆ ಗಣಿ ಜಿಲ್ಲೆಯ ಕಾಂಗ್ರೆಸ್ ಶಾಸಕರು ಹಾಗೂ ಸಂಸದ ಈ.ತುಕಾರಾಂ ಅವರ ನಿವಾಸಗಳ ಮೇಲೆ ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳ ತಂಡ ಏಕಕಾಲಕ್ಕೆ ದಾಳಿ ನಡೆಸಿದ್ದರಿಂದ ಜನ ಪ್ರತಿನಿಧಿಗಳು ಬೆಚ್ಚಿ ಬಿದ್ದಿದ್ದಾರೆ.

ಬೆಳಗ್ಗೆ 6 ಗಂಟೆಗೆ ಭದ್ರತಾ ಸಿಬ್ಬಂದಿಯೊಂದಿಗೆ ದಾಳಿ ಕಾರ್ಯ ಶುರುಗೊಳಿಸಿದ ಇಡಿ ಅಧಿಕಾರಿಗಳ ತಂಡ ನಗರ ಶಾಸಕ ನಾರಾ ಭರತ್ ರೆಡ್ಡಿ ನಿವಾಸ, ಕಂಪ್ಲಿಯ ಶಾಸಕ ಜೆ.ಎನ್. ಗಣೇಶ್, ಸಂಸದ ಈ.ತುಕಾರಾಂ ಹಾಗೂ ಇವರ ಪತ್ನಿ ಸಂಡೂರು ಶಾಸಕಿ ಈ.ಅನ್ನಪೂರ್ಣ ಅವರ ನಿವಾಸಕ್ಕೆ ತೆರಳಿ, ವಿಚಾರಣೆ ನಡೆಸಿದ್ದಾರೆ.ನನಗೇನೂ ಗೊತ್ತಿಲ್ಲ ಎಂದ ತುಕಾರಾಂ:ಸಂಡೂರಿನ ಅಶೋಕ ಕಾಲನಿಯಲ್ಲಿರುವ ಸಂಸದ ಈ.ತುಕಾರಾಂ ಹಾಗೂ ಪತ್ನಿ ಸಂಡೂರು ಶಾಸಕಿ ಅನ್ನಪೂರ್ಣ ತುಕಾರಾಂ ಅವರ ನಿವಾಸಕ್ಕೆ ಇಡಿ ಅಧಿಕಾರಿಗಳು ದಾಳಿ ನಡೆಸಿ, ಪರಿಶೀಲನೆ ನಡೆಸಿದ್ದಾರಲ್ಲದೆ, ಶಾಸಕಿ ಅನ್ನಪೂರ್ಣ ಹಾಗೂ ಸಂಸದ ಈ.ತುಕಾರಾಂ ಅವರನ್ನು ಪ್ರತ್ಯೇಕವಾಗಿ ವಿಚಾರಣೆ ಕೈಗೊಂಡಿದ್ದಾರೆ.

ಲೋಕಸಭಾ ಚುನಾವಣೆಗೆ ವಾಲ್ಮೀಕಿ ನಿಗಮದ ಹಣ ಬಳಕೆ ಬಗ್ಗೆ ವಿಚಾರಣೆ ವೇಳೆ ಇಡಿ ಅಧಿಕಾರಿಗಳು ಪ್ರಶ್ನೆಗಳನ್ನು ಕೇಳಿದ್ದು, ಇದಕ್ಕೆ ಸಂಸದ ತುಕಾರಾಂ ಅವರು ನನಗೇನೂ ಗೊತ್ತಿಲ್ಲ ಎಂದು ಉತ್ತರಿಸಿದ್ದಾರೆ. ವಾಲ್ಮೀಕಿ ನಿಗಮದ ಹಣ ದುರ್ಬಳಕೆ ಸಂಬಂಧಿಸಿದಂತೆ ಈ ಹಿಂದೆ ಗ್ರಾಮೀಣ ಶಾಸಕ ನಾಗೇಂದ್ರ ಅವರ ಮನೆಯ ಮೇಲೆ ದಾಳಿ ನಡೆಸಿದ್ದ ಇಡಿ ಅಧಿಕಾರಿಗಳು, ಅಲ್ಲಿ ದೊರೆತ ಕೆಲವು ದಾಖಲೆಗಳ ಆಧರಿಸಿ ಪ್ರಶ್ನೆಗಳನ್ನು ಹಾಕಿದ್ದಾರೆ. ದಿಢೀರ್ ದಾಳಿಯಿಂದ ಕಂಗಾಲಾಗಿದ್ದ ಸಂಸದ ಈ.ತುಕಾರಾಂ ಅವರು ಬಳಿಕ ಅಧಿಕಾರಿಗಳ ಕೆಲ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ ಎಂದು ಗೊತ್ತಾಗಿದೆ.ಸಂಸದ ತುಕಾರಾಂ ಅವರ ಪತ್ನಿ ಅನ್ನಪೂರ್ಣ ತುಕಾರಾಂ ಅವರನ್ನು ಪ್ರತ್ಯೇಕವಾಗಿ ವಿಚಾರಣೆ ಮಾಡಲಾಗಿದ್ದು, ವಾಲ್ಮೀಕಿ ನಿಗಮದ ಹಣ ಬಳಕೆಯ ಕುರಿತು ಪ್ರಶ್ನೆ ಮುಂದಿಟ್ಟಿದ್ದಾರೆ. ಹಣಕಾಸಿನ ವಿಚಾರ ನನಗೇನೂ ಗೊತ್ತಿಲ್ಲ. ಹಣದ ಬಗ್ಗೆ ನನ್ನ ಬಳಿ ಯಾರೂ ಮಾತನಾಡಿಲ್ಲ. ನಾನು ಪ್ರಚಾರಕ್ಕೆ ಕರೆದರೆ ಹೋಗುತ್ತಿದ್ದೆ. ಚುನಾವಣೆಯ ಪ್ರಕ್ರಿಯೆಯಲ್ಲಷ್ಟೇ ಭಾಗಿಯಾಗುತ್ತಿದ್ದೆ ಎಂದು ಸಂಡೂರು ಶಾಸಕಿ ಅನ್ನಪೂರ್ಣ ತುಕಾರಾಂ ಅವರು ಇಡಿ ಅಧಿಕಾರಿಗಳಿಗೆ ಉತ್ತರಿಸಿದ್ದಾರೆ ಎಂದು ತಿಳಿದು ಬಂದಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ವಾಲ್ಮೀಕಿ ನಿಗಮದ ಹಣ ದುರ್ಬಳಕೆ ಮಾಡಿಕೊಂಡಿರುವ ಆಪಾದನೆ ಹಿನ್ನೆಲೆ ವಿಚಾರಣೆ ತೀವ್ರಗೊಳಿಸಿರುವ ಇಡಿ ಅಧಿಕಾರಿಗಳು, ಸಂಸದ ತುಕಾರಾಂ ಹಾಗೂ ಶಾಸಕಿ ಈ.ಅನ್ನಪೂರ್ಣ ಅವರನ್ನು ಹೆಚ್ಚು ಹೊತ್ತು ವಿಚಾರಣೆ ಮಾಡಿದ್ದಾರೆ. ಜಿಲ್ಲೆಯ ದಾಳಿಯ ಪೈಕಿ ಸಂಸದ ಮನೆಯ ಮೇಲೆ ನಡೆದ ದಾಳಿಯಲ್ಲಿ ಇಡಿ ಅಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದರು.

ಕಂಪ್ಲಿ ಶಾಸಕ ಗಣೇಶ್ ನಿವಾಸದಲ್ಲಿ ವಿಚಾರಣೆ:ಹೊಸಪೇಟೆಯ ಬೈಪಾಸ್ ರಸ್ತೆಯಲ್ಲಿರುವ ಕಂಪ್ಲಿ ಶಾಸಕ ಜೆ.ಎನ್. ಗಣೇಶ್ ಅವರ ನಿವಾಸಕ್ಕೆ ಇಡಿ ಅಧಿಕಾರಿಗಳ ತಂಡ ಬೆಳಗ್ಗೆ 7.30ಕ್ಕೆ ದಾಳಿ ನಡೆಸಿತು. ಮೊದಲು ಕುರುಗೋಡು ಪಟ್ಟಣದ ಹೊರ ವಲಯದಲ್ಲಿರುವ ಗಣೇಶ್ ಅವರ ನಿವಾಸಕ್ಕೆ ಇಡಿ ಅಧಿಕಾರಿಗಳ ತಂಡ ತೆರಳಿತು. ಆದರೆ, ಶಾಸಕ ಕುರುಗೋಡಿನಲ್ಲಿಲ್ಲ ಎಂದು ಖಚಿತವಾಗುತ್ತಿದ್ದಂತೆಯೇ ಕಂಪ್ಲಿಯ ಹೊರ ವಲಯದ ಹೊಸಪೇಟೆ ಬೈಪಾಸ್ ರಸ್ತೆಯಲ್ಲಿರುವ ನಿವಾಸಕ್ಕೆ ತೆರಳಿದ ಅಧಿಕಾರಿಗಳು ಸುಮಾರು 4 ತಾಸಿಗೂ ಹೆಚ್ಚು ಹೊತ್ತು ಶಾಸಕ ಗಣೇಶ್ ಅವರನ್ನು ವಿಚಾರಣೆಗೊಳಪಡಿಸಿದ್ದಾರೆ. ಇಲ್ಲಿಯೂ ಸಹ ವಾಲ್ಮೀಕಿ ನಿಗಮದ ಹಣವನ್ನು ಚುನಾವಣೆಗೆ ಬಳಕೆ ಸಂಬಂಧದ ಪ್ರಶ್ನೆಗಳನ್ನೇ ಅಧಿಕಾರಿಗಳು ಕೇಳಿದ್ದಾರೆ ಎಂದು ತಿಳಿದು ಬಂದಿದೆ. ದಾಳಿ ವೇಳೆ ಭದ್ರತಾ ಸಿಬ್ಬಂದಿ ಸೇರಿ 10ಕ್ಕೂ ಹೆಚ್ಚು ಜನರಿದ್ದರು. ಶಾಸಕ ಗಣೇಶ್ ಅಧಿಕಾರಿಗಳ ಪ್ರಶ್ನೆಗಳಿಗೆ ಉತ್ತರಿಸಿದ್ದಾರಲ್ಲದೆ, ನಿಗಮದ ಹಣ ಬಳಕೆಯಲ್ಲಿ ನನ್ನದು ಯಾವ ಪಾತ್ರವೂ ಇಲ್ಲ ಎಂದು ಖಚಿತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

ಬಳ್ಳಾರಿ ಶಾಸಕ ಭರತ್ ರೆಡ್ಡಿ ನಿವಾಸದಲ್ಲಿ ಇಡಿ ತಲಾಶ್:ಇಲ್ಲಿನ ನೆಹರು ಕಾಲನಿಯಲ್ಲಿರುವ ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ನಿವಾಸ ಹಾಗೂ ಶಾಸಕರ ಆಪ್ತ ಗೋವರ್ಧನ ರೆಡ್ಡಿ ಅವರ ನಿವಾಸಕ್ಕೆ ಬೆಳ್ಳಂಬೆಳಿಗ್ಗೆ ದಾಳಿ ನಡೆಸಿದ ಇಡಿ ಅಧಿಕಾರಿಗಳು, ಮನೆಯಲ್ಲಿ ಶೋಧ ಕಾರ್ಯ ನಡೆಸಿದರು. ಬಳಿಕ ಶಾಸಕರನ್ನು ವಿಚಾರಣೆಗೊಳಪಡಿಸಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ವಾಲ್ಮೀಕಿ ನಿಗಮದ ಹಣ ದುರ್ಬಳಕೆಯಾಗಿರುವ ಹಿನ್ನೆಲೆಯಲ್ಲಿಯೇ ಪ್ರಶ್ನೆ ಕೇಳಿದ್ದಾರೆ. ಕಳೆದ ಬಾರಿಯ ದಾಳಿಯಲ್ಲಿ ಅನೇಕ ಮಾಹಿತಿ ನಮಗೆ ಲಭ್ಯವಾಗಿದೆ. ಚುನಾವಣೆ ಹಣ ಬಳಕೆಯ ಸಂಬಂಧ ದಾಖಲೆಗಳು ನಮ್ಮ ಬಳಿ ಇದ್ದು ಸರಿಯಾದ ಉತ್ತರ ನೀಡಿ ಸಹಕರಿಸಿ ಎಂದು ಇಡಿ ಅಧಿಕಾರಿಗಳು ತಿಳಿಸಿದ್ದಾರೆ. ಸುಮಾರು ಮೂರು ತಾಸಿಗೂ ಹೆಚ್ಚು ಹೊತ್ತು ವಿಚಾರಣೆ ಕಾರ್ಯ ನಡೆದಿದೆ. ಸಂಜೆವರೆಗೆ ದಾಖಲೆಗಳ ಪರಿಶೀಲನೆ ಹಾಗೂ ವಿಚಾರಣೆ ಮುಂದುವರಿದಿತ್ತು. ಗ್ರಾಮೀಣ ಶಾಸಕ ನಾಗೇಂದ್ರ ಅವರ ಆಪ್ತ ಗೋವರ್ಧನ ರೆಡ್ಡಿ ನಿವಾಸದಲ್ಲಿ ದಾಳಿ ಪ್ರಕ್ರಿಯೆ ನಡೆಸಿದ ಅಧಿಕಾರಿಗಳು, ಸಾಕಷ್ಟು ಮಾಹಿತಿಯನ್ನು ಕಲೆ ಹಾಕಿದ್ದಾರೆ. ನೆಹರು ಕಾಲನಿಯಲ್ಲಿ ಗ್ರಾಮೀಣ ಶಾಸಕ ನಾಗೇಂದ್ರ ಅವರ ಮನೆಗೆ ದಾಳಿ ನಡೆಸಲು, ಇಡಿ ಅಧಿಕಾರಿಗಳು ತೆರಳಿದ್ದರು. ಮನೆಯಲ್ಲಿ ಯಾರೂ ಇಲ್ಲದಿರುವುದರಿಂದ ವಾಪಸ್ ಆದರು.ಕೈ ಬರಹ ಯಾರದ್ದು?, ಚುನಾವಣೆಗೆ ಹಣ ಬಳಸಿದ್ದೆಷ್ಟು?:

ಕಳೆದ ಲೋಕಸಭಾ ಚುನಾವಣೆಯಲ್ಲಿ ಖುರ್ಚು ಮಾಡಿದ ಒಟ್ಟು ಹಣವೆಷ್ಟು? ಯಾವ ಮೂಲಗಳಿಂದ ಹಣ ಸಂಗ್ರಹಿಸಲಾಗಿದೆ. ಶಾಸಕ ನಾಗೇಂದ್ರ ಅವರ ಮೊಬೈಲ್‌ಗೆ ಕಳಿಸಿದ ಖರ್ಚುವೆಚ್ಚದ ಹಣದ ಕೈ ಬರಹ ಯಾರದ್ದು? ಈ ಬಗ್ಗೆ ನಿಮಗೆಷ್ಟು ಗೊತ್ತು? ಎಂಬಿತ್ಯಾದಿ ಪ್ರಶ್ನೆಗಳನ್ನು ಇಡಿ ಅಧಿಕಾರಿಗಳು ಶಾಸಕರು ಹಾಗೂ ಸಂಸದರನ್ನು ಕೇಳಿದ್ದಾರೆ ಎಂದು ತಿಳಿದು ಬಂದಿದೆ.

ಗಣಿ ಜಿಲ್ಲೆಯಲ್ಲಿ ಬುಧವಾರ ನಡೆದ ದಾಳಿಯ ಪೈಕಿ ಸಂಡೂರು ಸಂಸದ ಈ.ತುಕಾರಾಂ ಹಾಗೂ ಪತ್ನಿ ಅನ್ನಪೂರ್ಣ ಅವರಿಗೆ ಚುನಾವಣೆಗೆ ಸಂಬಂಧಿ ಹತ್ತಾರು ಪ್ರಶ್ನೆಗಳನ್ನು ಕೇಳಿದ್ದು ಸಂಸದ ನೀಡಿದ ಉತ್ತರ ದಾಖಲು ಮಾಡಿಕೊಂಡಿದ್ದಾರೆ. ಸಂಸದ ತುಕಾರಾಂ ಅವರಿಗೆ ಕೇಳಿದ ಪ್ರಶ್ನೆಗಳನ್ನೇ ಪತ್ನಿ ಅನ್ನಪೂರ್ಣ ಅವರಿಗೆ ಕೇಳಿದ್ದಾರೆ. ಆದರೆ, ಈ ಬಗ್ಗೆ ಹೆಚ್ಚು ಮಾಹಿತಿ ಇಲ್ಲ ಎಂದು ಶಾಸಕಿ ಅನ್ನಪೂರ್ಣ ಹೇಳಿದ್ದಾರೆ ಎಂದು ತಿಳಿದು ಬಂದಿದೆ.ಕಳೆದ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರುವ ಜವಾಬ್ದಾರಿಯನ್ನು ಆಯಾ ಸಚಿವರಿಗೆ ಸರ್ಕಾರ ವಹಿಸಿತ್ತು. ಚುನಾವಣೆ ಸಂದರ್ಭದಲ್ಲಿ ಗ್ರಾಮೀಣ ಶಾಸಕ ಬಿ.ನಾಗೇಂದ್ರ ಅವರು ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು. ಚುನಾವಣೆಗೆ ಹಣ ಜೋಡಿಸಿಕೊಳ್ಳಲು ವಾಲ್ಮೀಕಿ ನಿಗಮದ ಹಣ ದುರ್ಬಳಕೆ ಮಾಡಿರುವ ಕುರಿತು ಇಡಿ ವಿಚಾರಣೆ ನಡೆಸುತ್ತಿದ್ದು, ಈ ಹಿಂದೆ ನಾಗೇಂದ್ರ ಅವರ ನಿವಾಸದ ಮೇಲೆ ದಾಳಿ ನಡೆಸಿ, ಸಾಕಷ್ಟು ಮಾಹಿತಿ ಸಂಗ್ರಹಿಸಿದ್ದು, ಇದೀಗ ಗಣಿ ಜಿಲ್ಲೆಯ ಶಾಸಕರ ಮೇಲೂ ಇಡಿ ದಾಳಿ ನಡೆಸಿ, ವಿಚಾರಣೆ ನಡೆಸಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕನ್ನಡದಲ್ಲೂ ರೈಲ್ವೆ ಪರೀಕ್ಷೆ ನಡೆಸಲು ಪ್ರಧಾನಿ ಮೋದಿ ಅಸ್ತು: ಸೋಮಣ್ಣ
ಬಿಜೆಪಿ ಶಾಸಕ ಬೈರತಿ ವಿರುದ್ಧ ಲುಕ್‌ ಔಟ್‌ ನೋಟಿಸ್‌ ಜಾರಿ?