ಭಾರತದಲ್ಲಿ ಹಾವಿನ ಕಡಿತದಿಂದ ಸಾಯುವವರ ಸಂಖ್ಯೆ ಅಧಿಕ

KannadaprabhaNewsNetwork |  
Published : Sep 29, 2024, 01:35 AM IST
56 | Kannada Prabha

ಸಾರಾಂಶ

ಹಾವು ಕಡಿತ ಜಾಗತಿಕ ಸಮಸ್ಯೆಯಾಗಿದ್ದು, ಜಗತ್ತಿನ ಎಲ್ಲ ದೇಶಗಳಲ್ಲೂ ಬಗೆಬಗೆಯ ಹಾವುಗಳಿದ್ದು, ಅವುಗಳ ಕಡಿತವೂ ಸಾಮಾನ್ಯ

ಕನ್ನಡಪ್ರಭ ವಾರ್ತೆ ಕೆ.ಆರ್. ನಗರ ಭಾರತದಲ್ಲಿ ಹಾವಿನ ಕಡಿತದಿಂದ ಸಾಯುವವರ ಸಂಖ್ಯೆ ವಿಶ್ವದಲ್ಲೇ ಅಧಿಕವಾಗಿದ್ದು, ನಿರಂತರ ಜಾಗೃತಿ ಮೂಡಿಸಿದರೂ ಗಂಭೀರವಾಗಿ ತೆಗೆದುಕೊಳ್ಳುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಉರಗ ತಜ್ಞ ಸ್ನೇಕ್ ಶ್ಯಾಮ್ ಹೇಳಿದರು.ಪಟ್ಟಣದ ತಾಪಂ ಸಭಾಂಗಣದಲ್ಲಿ ಜಿಲ್ಲಾ ಮತ್ತು ತಾಲೂಕು ಆರೋಗ್ಯ ಇಲಾಖೆ ವತಿಯಿಂದ ನಡೆದ ವಿಶ್ವ ಹಾವು ಕಡಿತ ಜಾಗೃತಿ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಹಾವು ಕಡಿತ ಜಾಗತಿಕ ಸಮಸ್ಯೆಯಾಗಿದ್ದು, ಜಗತ್ತಿನ ಎಲ್ಲ ದೇಶಗಳಲ್ಲೂ ಬಗೆಬಗೆಯ ಹಾವುಗಳಿದ್ದು, ಅವುಗಳ ಕಡಿತವೂ ಸಾಮಾನ್ಯ, ಆದರೆ ವಿಶ್ವದಲ್ಲಿ ಹಾವು ಕಡಿತದ ರಾಷ್ಟ್ರ ಎಂದು ಕರೆಯುವುದು ಭಾರತವನ್ನು ಮಾತ್ರ ಎಂದರು.ಇತರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಹಾವುಗಳ ಸಂಖ್ಯೆ ಅಧಿಕ, ಇದರೊಟ್ಟಿಗೆ ಜಾಗೃತಿ ಕೊರತೆಯಿಂದ ಗ್ರಾಮೀಣ ಭಾಗದಲ್ಲಿ ಹಾವು ಕಡಿತದಿಂದ ಮೃತಪಡುವವರ ಸಂಖ್ಯೆಯೂ ಏರಿಕೆಯಾಗಿದ್ದು, ಇದರಿಂದ ಸಾವಿನ ಪ್ರಮಾಣ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಕಾರಣ ಆರು ವರ್ಷದಿಂದ ಸೆ. 19ನ್ನು ಅಂತರ ರಾಷ್ಟ್ರೀಯ ಹಾವು ಕಡಿತದ ಜಾಗೃತಿ ದಿನವನ್ನಾಗಿ ಆಚರಿಸಿ ಹಾವಿನ ಕಡಿತದ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ ಎಂದು ಅವರು ತಿಳಿಸಿದರು.ಯಾವ ಹಾವು ಅಪಾಯಕಾರಿ - ಭಾರತದಲ್ಲಿ 300 ವಿಧದ ಹಾವುಗಳಿದ್ದು, ಅವುಗಳೆಲ್ಲವೂ ಅಪಾಯಕಾರಿಯಲ್ಲ, ಹಾಗಾಗಿ ದೇಶದಲ್ಲಿ ಹಾವು ಕಡಿತದಿಂದ ಮೃತಪಡುವವರಲ್ಲಿ ಶೇ. 90ಕ್ಕೂ ಅಧಿಕ ಜನರು 4 ಜಾತಿಯ ಹಾವುಗಳ ಕಡಿತದಿಂದ ಮಾತ್ರ ಮೃತಪಡುತ್ತಿದ್ದಾರೆ. ನಾಗರಹಾವು, ಕೊಳಕು ಮಂಡಲ, ಕಟ್ಟುಹಾವು, ಉರಿ ಮಂಡಲ ಹೆಚ್ಚು ಅಪಾಯಕಾರಿ ಹಾವುಗಳೆಂದು ಮಾಹಿತಿ ನೀಡಿದರು. ಈ ನಾಲ್ಕು ಜಾತಿಯ ಹಾವುಗಳು ಗ್ರಾಮೀಣ ಮತ್ತು ನಗರ ಪ್ರದೇಶದ ಜನ ವಸತಿ ಪ್ರದೇಶಗಳಲ್ಲಿ ಹೆಚ್ಚು ಕಂಡು ಬರುತ್ತವೆ ಹಾಗೂ ಇವುಗಳ ಕಡಿತದಿಂದಲೇ ಗರಿಷ್ಠ ಸಂಖ್ಯೆಯ ಜನ ಮೃತಪಡುತ್ತಿದ್ದಾರೆ, ಇವುಗಳ ಚಲನ ವಲನ, ಆಹಾರ ಪದ್ದತಿ ಇತ್ಯಾದಿ ವಿಷಯಗಳ ಬಗ್ಗೆ ಮತ್ತ ಕಡಿತದಿಂದ ಪಾರಾಗಲು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳನ್ನು ಅರಿತರೆ ಸುಲಭವಾಗಿ ಪಾರಾಗಬಹುದು ಎಂದು ನುಡಿದರು.ಮುನ್ನೆಚ್ಚರಿಕೆ ಕ್ರಮಗಳು ಹೀಗಿರಲಿದೆ- ರೈತರು ದೇಶದ ಬೆನ್ನೆಲುಬು, ಆದ್ದರಿಂದ ಹಾವು ಕಡಿತದಿಂದ ಹೆಚ್ಚಾಗಿ ರೈತರು, ಕೂಲಿ ಕಾರ್ಮಿಕರು ಮೃತಪಡುತ್ತಿದ್ದು, ರಾತ್ರಿ ವೇಳೆ ಜಮೀನುಗಳಿಗೆ ಹೋದಾಗ ಕಡ್ಡಾಯವಾಗಿ ಚಾರ್ಚ್ ಲೈಟ್ ಮತ್ತು ಶೂಗಳನ್ನು ಬಳಸಬೇಕು ಹಾಗೂ ಸೂಕ್ತ, ಕಳೆ, ಹುಲ್ಲುಗಾವಲು, ಅರಣ್ಯ ಪ್ರದೇಶ, ಜಮೀನಿನಲ್ಲಿ ಕೆಲಸ ಮಾಡುವಾಗ ಗಮ್ ಬೂಟ್ ಬಳಸುವುದು ಸೂಕ್ತ ಎಂದು ಸಲಹೆ ನೀಡಿದ ಅವರು, ಹಾವು ಕಚ್ಚಿದಾಗ ಮಂತ್ರ ತಂತ್ರದ ಮೊರೆ ಹೋಗದೆ ಹತ್ತಿರದ ಆಸ್ವತ್ರೆಗಳಿಗೆ ತೆರಳಿ ಚಿಕಿತ್ಸೆ ಪಡೆದರೆ ಹಾವು ಕಚ್ಚಿದವರು ಬದುಕುಳಿಯುತ್ತಾರೆ ಎಂದರು.ತಾಲೂಕು ಆರೋಗ್ಯಾಧಿಕಾರಿ ಡಾ.ಡಿ. ನಟರಾಜು ಮಾತನಾಡಿ, ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಹಾವು ಕಡಿತದಿಂದ ಪ್ರತಿ ವರ್ಷ ಪ್ರಪಂಚದಾದ್ಯಂತ ಸುಮಾರು 1.40 ಲಕ್ಷ ಜನ ಜೀವ ಕಳೆದುಕೊಳ್ಳುತ್ತಿದ್ದು, ಭಾರತದಲ್ಲೇ ಪ್ರತಿ ವರ್ಷ 50 ಸಾವಿರಕ್ಕೂ ಹೆಚ್ಚು ಜನರು ಸಾಯುತ್ತಿದ್ದು, ನಮ್ಮ ದೇಶವನ್ನು ಹಾವು ಕಡಿತದಿಂದ ಸಾಯುವ ಜಾಗತಿಕ ರಾಜಧಾನಿ ಎಂದೇ ವಿಶ್ವ ಆರೋಗ್ಯ ಸಂಸ್ಥೆ ಹೇಳುತ್ತದೆಂದರು.ಕೆ.ಆರ್. ನಗರ ಮತ್ತು ಸಾಲಿಗ್ರಾಮ ತಾಲೂಕಿನ ಪ್ರತಿಯೊಂದು ಗ್ರಾಪಂ ಮಟ್ಟದ ಗ್ರಾಮ ಸಭೆಯಲ್ಲಿ ನಮ್ಮ ಆರೋಗ್ಯ ಇಲಾಖೆಯ ಸಹಾಯಕರು, ಆಶಾ ಕಾರ್ಯಕರ್ತೆಯರು ಸಂಕ್ಷಿಪ್ತವಾಗಿ ಮಾಹಿತಿನೀಡಿ ರೈತರು ಹಾಗೂ ಕೂಲಿ ಕಾರ್ಮಿಕರಲ್ಲಿ ಜಾಗೃತಿ ಮೂಡಿಸಲಿದ್ದಾರೆ ಎಂದರು.ಕರ್ನಾಟಕ ರಾಜ್ಯ ರೈತ ಪರ್ವ ಸಂಘದ ಗೌರವಾಧ್ಯಕ್ಷ ಜೆ.ಎಂ. ಕುಮಾರ್, ತಾಲೂಕು ಯುವ ರೈತ ವೇದಿಕೆ ಅಧ್ಯಕ್ಷ ರಾಮ್ ಪ್ರಸಾದ್ ಮಾತನಾಡಿದರು.ತಾಲೂಕು ಸರ್ವೋದಯ ಪಕ್ಷದ ಅಧ್ಯಕ್ಷ ಗರುಡಗಂಭ ಸ್ವಾಮಿ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಕೆ.ವಿ. ರಮೇಶ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಸಿ.ಎಂ. ರೇಖಾ, ಆರೋಗ್ಯ ಸಂರಕ್ಷಣಾಧಿಕಾರಿ, ಪಾರ್ವತಿ, ಆರೋಗ್ಯ ಇಲಾಕೆಯ ರೇಖಾ, ಡಿಸೋಜ, ಹೇಮಲತ ಮತ್ತಿತರರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಟಿ ಆತ್ಮ*ತ್ಯೆಗೆ ಸರ್ಕಾರಿ ನೌಕರಿಗೆ ಸೇರುವಂತೆ ಕುಟುಂಬ ಒತ್ತಡ ಕಾರಣ?
ನಮ್ಮವರಿಗೆ ಇಲ್ಲದ ಪರಿಹಾರ ಅವರಿಗೆ ಏಕೆ : ಬಿಜೆಪಿ ಆಕ್ರೋಶ