ಸಂವಿಧಾನ ಜಾರಿಗೊಂಡ ಶುಭದಿನವೇ ಗಣರಾಜ್ಯ ದಿನ

KannadaprabhaNewsNetwork | Published : Jan 27, 2025 12:47 AM

ಸಾರಾಂಶ

ವಿವಿಧತೆಯಲ್ಲಿ ಏಕತೆ ಇರುವಂಥ, ಎಲ್ಲ ಜನರಿಗೂ ಹಕ್ಕು-ಕರ್ತವ್ಯಗಳನ್ನು ನೀಡಿರುವ ಏಕೈಕ ಸಂವಿಧಾನ ಹೊಂದಿರುವುದು ಭಾರತ ದೇಶದ ಹೆಗ್ಗಳಿಕೆ ಎಂದು ತಹಸೀಲ್ದಾರ್ ಕೆ.ಎಂ. ಗುರುಬಸವರಾಜ ಹರಿಹರದಲ್ಲಿ ಹೇಳಿದ್ದಾರೆ.

- ಹರಿಹರದಲ್ಲಿ ನಡೆದ ಗಣರಾಜ್ಯೋತ್ಸವದಲ್ಲಿ ತಹಸೀಲ್ದಾರ್ ಗುರುಬಸವರಾಜ - - -

ಕನ್ನಡಪ್ರಭ ವಾರ್ತೆ ಹರಿಹರ ವಿವಿಧತೆಯಲ್ಲಿ ಏಕತೆ ಇರುವಂಥ, ಎಲ್ಲ ಜನರಿಗೂ ಹಕ್ಕು-ಕರ್ತವ್ಯಗಳನ್ನು ನೀಡಿರುವ ಏಕೈಕ ಸಂವಿಧಾನ ಹೊಂದಿರುವುದು ಭಾರತ ದೇಶದ ಹೆಗ್ಗಳಿಕೆ ಎಂದು ತಹಸೀಲ್ದಾರ್ ಕೆ.ಎಂ. ಗುರುಬಸವರಾಜ ಹೇಳಿದರು.

ನಗರದ ಮಹಾತ್ಮ ಗಾಂಧಿ ಮೈದಾನದಲ್ಲಿ ಭಾನುವಾರ 76ನೇ ಗಣರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ, ಧ್ವಜ ಸಂದೇಶ ಸಾರಿ ಅವರು ಮಾತನಾಡಿದರು. ಅನೇಕ ಜಾತಿ, ಧರ್ಮ, ಸಂಸ್ಕೃತಿ, ಪರಂಪರೆ, ಪಂಥ, ಭಾಷೆಗಳನ್ನು ಭಾರತ ಹೊಂದಿದೆ. ದೇಶದಲ್ಲಿ ಸಾಮರಸ್ಯ, ಏಕತೆ ತರುವಂಥಹ ಸಂವಿಧಾನ ರಚಿಸಿದ ಕೀರ್ತಿ ಡಾ. ಅಂಬೇಡ್ಕರ್ ಅಧ್ಯಕ್ಷತೆಯಲ್ಲಿ ರಚಿಸಿದ ಸಮಿತಿಗೆ ಸಲ್ಲುತ್ತದೆ ಎಂದರು.

ದೇಶಕ್ಕೆ ಸ್ವತಂತ್ರ್ಯ ಸಿಕ್ಕ ನಂತರ ಅನೇಕ ರಾಜ್ಯಗಳು ದೇಶದ ಸಾರ್ವಭೌಮತೆ ಒಪ್ಪದೇ ತಮ್ಮದೆ ಆದ ಕಾನೂನುಗಳನ್ನು ಹೊಂದಲು ಹವಣಿಸಿದ್ದವು. ತದನಂತರ ರಾಜ್ಯದ ಎಲ್ಲ ಭಾಷೆ ಪಂಗಡಗಳಿಗೆ ಅನುಗುಣವಾಗಿ ಸಂವಿಧಾನ ರಚಿಸಿ, ಎಲ್ಲ ರಾಜ್ಯಗಳನ್ನು ತನ್ನೊಡಲಲ್ಲಿ ಪಡೆದು ಅತಿ ದೊಡ್ಡ ಸಂವಿಧಾನ ರಚಿಸಿ, ಜಾರಿಗೆ ತಂದ ಮಹತ್ವದ ದಿನವೇ ಗಣತಂತ್ರ ದಿನವಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಬಿ.ಪಿ. ಹರೀಶ್ ಮಾತನಾಡಿ, ನಮ್ಮ ದೇಶ ತಂತ್ರಜ್ಞಾನ ಸೇರಿದಂತೆ ಅನೇಕ ವಿಷಯಗಳಲ್ಲಿ ಮುನ್ನಡೆ ಸಾಧಿಸಿದೆ. ಅದರ ಪರಿಣಾಮ ಇಂದು ಇಡೀ ಪ್ರಪಂಚದಲ್ಲೆ ಆರ್ಥಿಕವಾಗಿ ಮೂರನೇ ಸ್ಥಾನದಲ್ಲಿ ಜಾಗ ಪಡೆದಿದೆ. ಇಂಗ್ಲೆಂಡ್ ಸೇರಿದಂತೆ ಅನೇಕ ದೇಶಗಳು ಇಂದಿಗೂ ಉಳಿದ ದೇಶಗಳನ್ನು ತನ್ನ ಕಪಿಮುಷ್ಠಿಯಲ್ಲಿ ಇಟ್ಟುಕೊಳ್ಳಲು ಪ್ರಯತ್ನಿಸುತ್ತಿವೆ. ಅನೇಕ ರೀತಿಯಲ್ಲಿ ಭಾರತಕ್ಕೆ ಆರ್ಥಿಕ ಪೆಟ್ಟು ನೀಡುತ್ತಿವೆ. ಅವುಗಳನ್ನೆಲ್ಲ ಮೀರಿ ಭಾರತವನ್ನು ಮುನ್ನಡೆಸುವಂಥಹ ನಾಯಕತ್ವ ದೇಶಕ್ಕೆ ಸಿಕ್ಕಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಮುಖ್ಯ ಅತಿಥಿಗಳಾಗಿ ನಗರಸಭಾ ಅಧ್ಯಕ್ಷೆ ಕವಿತಾ ಮಾರುತಿ ಬೇಡರ್, ತಾಪಂ ಇಒ ಎಸ್.ಪಿ. ಸುಮಲತಾ, ಪೌರಾಯುಕ್ತ ಪಿ. ಸುಬ್ರಮಣ್ಯ ಶೆಟ್ಟಿ, ಆರಕ್ಷಕ ವೃತ್ತ ನಿರೀಕ್ಷಕರಾದ ಎಸ್. ದೇವಾನಂದ, ಸುರೇಶ ಸಗರಿ ಹಾಗೂ ಇತರರು ಭಾಗವಹಿಸಿದ್ದರು.

- - -

(ಬಾಕ್ಸ್) * ಧೂಳಿನಿಂದ ಕಿರಿಕಿರಿ ಅನುಭವಿಸಿದ ಮಕ್ಕಳು ಹರಿಹರದ ಮಹಾತ್ಮ ಗಾಂಧಿ ಮೈದಾನದಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಆಯೋಜಕರ ನಿರ್ಲಕ್ಷ್ಯದಿಂದಾಗಿ ಚುರುಕು ಬಿಸಿಲಿನ ಮಧ್ಯೆ ಆಗಾಗ ಬೀಸಿದ ಗಾಳಿಯಿಂದಾಗಿ ಇಡೀ ಕ್ರೀಡಾಂಗಣ ಧೂಳುಮಯವಾಗಿತ್ತು. ಗಣ್ಯರು, ಶಿಕ್ಷಕರು, ವಿದ್ಯಾರ್ಥಿಗಳ ಕಣ್ಣು, ಮುಖ, ಬಟ್ಟೆಗಳ ಮೇಲೆ ಧೂಳಿನ ಸಿಂಚನವಾಯಿತು. ಅನೇಕ ವಿದ್ಯಾರ್ಥಿಗಳು, ಸಾರ್ವಜನಿಕರು ಮೈದಾನದಿಂದ ಹೊರಗೆ ತೆರಳಿದರು. ಕಾರ್ಯಕ್ರಮ ಆಯೋಜಕರು ಕಾರ್ಯಕ್ರಮಕ್ಕೂ ಮೊದಲು ಮೈದಾನದ ತುಂಬ ದಟ್ಟವಾಗಿ ನೀರು ಚಿಮುಕಿಸಿದ್ದರೆ, ಧೂಳಿನಿಂದ ಮುಕ್ತಿ ಪಡೆಯಬಹುದಿತ್ತು ಎಂಬ ಸಲಹೆಗಳು ಸಾರ್ವಜನಿಕರಿಂದ ಕೇಳಿಬಂದಿತು.

ಪಥ ಸಂಚಲನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು ಮಾತ್ರ ಬಹುಮಾನ ಪಡೆಯಲು ಮೈದಾನದಲ್ಲಿ ಉಳಿದಿದ್ದರು. ಪ್ರಥಮ, ದ್ವಿತೀಯ ಬಹುಮಾನ ಪಡೆದ ಶಾಲೆಗಳಿಗೆ ಯಾವುದೇ ಟ್ರೋಫಿ, ಕಪ್, ಫಲಕ, ಪದಕ ನೀಡದೇ ಕೇವಲ ಶಾಲಾ ಸರ್ಟಿಫಿಕೇಟ್ ಮಾತ್ರ ನೀಡಲಾಯಿತು. ಇದಕ್ಕೆ ಕೆಲ ವಿದ್ಯಾರ್ಥಿಗಳು ಹಾಗೂ ದೈಹಿಕ ಶಿಕ್ಷಕರು ನಿರಾಸೆ ವ್ಯಕ್ತಪಡಿಸಿದರು.

- - - -26ಎಚ್‍ಆರ್‍ಆರ್01:

ಹರಿಹರದ ಮಹಾತ್ಮ ಗಾಂಧಿ ಮೈದಾನದಲ್ಲಿ ಭಾನುವಾರ 76ನೇ ಗಣರಾಜ್ಯೋತ್ಸವದಲ್ಲಿ ಶಾಲಾ ಮಕ್ಕಳು ಪಥ ಸಂಚಲನ ನಡೆಸಿದರು. ಶಾಸಕ ಬಿ.ಪಿ. ಹರೀಶ್ ಇತರರು ಗೌರವ ರಕ್ಷೆ ಸ್ವೀಕರಿಸಿದರು.

Share this article