ಕನ್ನಡಪ್ರಭ ವಾರ್ತೆ, ತರೀಕೆರೆ
ತಾಲೂಕಿನ ಲಕ್ಕವಳ್ಳಿ ಗ್ರಾಮದ ಕೆಲವು ಭಾಗಗಳಲ್ಲಿ ಬಳಕೆಯಾದ ಆಹಾರ ಪದಾರ್ಥಗಳು, ವಸ್ತುಗಳಿಂದ ಕೂಡಿದ ತ್ಯಾಜ್ಯದ ಮಾಲೀನ್ಯದಿಂದ ಕೆಟ್ಟ ವಾಸನೆ ಬರುತ್ತಿದೆ. ಸ್ಥಳೀಯ ಆಡಳಿತ ಈ ಸಮಸ್ಯೆ ಬಗ್ಗೆ ಕಿಂಚಿತ್ತೂ ಗಮನ ಹರಿಸದೇ ಇರುವುದರಿಂದ ರೋಗ-ರುಜಿನ ಹರಡಬಹುದು ಎಂದು ಸ್ಥಳೀಯ ನಿವಾಸಿಗಳು ಭಯಭೀತರಾಗಿದ್ದಾರೆ ಎಂದು ಲಕ್ಕವಳ್ಳಿ ಗ್ರಾಮದ ಮುಖಂಡ ಎಲ್.ಟಿ.ಹೇಮಣ್ಣ ತಿಳಿಸಿದ್ದಾರೆ.ಮೂಲಭೂತ ಸೌಕರ್ಯಗಳ ಕೊರತೆಯಿಂದ ಹಲವಾರು ಸಮಸ್ಯೆಗಳು ಬಗೆಹರಿದಿಲ್ಲ. ಇತ್ತೀಚೆಗೆ ಗ್ರಾಮದಲ್ಲಿ ನಡೆದ ಜಾತ್ರೋತ್ಸವದಲ್ಲಿ ಲಕ್ಷಾಂತರ ಜನರು ಭಾಗವಹಿಸಿದ್ದರು. ತ್ಯಾಜ್ಯ ಪದಾರ್ಥಗಳು ರಾಶಿ ರಾಶಿ ಬಿದ್ದಿದೆ. ಇದರ ಹಿನ್ನೆಲೆ ಯಲ್ಲಿ ಒಂದು ವಾರ ಕಳೆದರೂ ತ್ಯಾಜ್ಯ ವಿಲೇವಾರಿ ಆಗದೇ ಗಂಭೀರ ಅಡ್ಡಪರಿಣಾಮಗಳು ಬೀರುವ ಸಾಧ್ಯತೆ ಇದೆ ಹೇಳಿದ್ದಾರೆ.
ಜಾತ್ರೆಯಲ್ಲಿ ಕೆಲವು ವಿಭಾಗದಲ್ಲಿ ಕುಡಿಯುವ ನೀರು ಹಾಗೂ ಬಳಕೆಗೆ ಸಮರ್ಪಕ ನೀರಿನ ಸಮಸ್ಯೆ ಇದ್ದುದರಿಂದ ತಾತ್ಕಾಲಿಕ ವ್ಯವಸ್ಥೆಯಲ್ಲಿ ಕೆಲವು ಪದಾರ್ಥಗಳು ತ್ಯಾಜ್ಯಗಳಾಗಿ ಮಾರ್ಪಟ್ಟಿದ್ದು, ಇದರ ವಿಲೇವಾರಿಗೆ ಸ್ಥಳೀಯ ಆಡಳಿತ ಹೆಚ್ಚಿನ ಗಮನ ಹರಿಸಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.ಜಾತ್ರೆಯಲ್ಲಿ ಕೈಗೊಳ್ಳಬೇಕಿರುವ ಮುಂಜಾಗ್ರತಾ ಸೌಲಭ್ಯಗಳ ಒದಗಿಸುವ ಕುರಿತು ಆಯೋಜಿಸಲಾಗಿದ್ಧ ಸಭೆಯಲ್ಲಿ ಚರ್ಚಿಸಲಾಗಿತ್ತು. ದಯವಿಟ್ಟು ಸ್ಥಳೀಯ ಆಡಳಿತ ಮತ್ತು ತಾಲೂಕಿನ ಆಡಳಿತ ಗಮನ ಹರಿಸಿ ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿದ್ದಾರೆ.21ಕೆಟಿಆರ್.ಕೆ.4ಃ ರಾಶಿ ಬಿದ್ದಿರುವ ತ್ಯಾಜ್ಯ ಪದಾರ್ಥಗಳು