ಸರ್ಕಾರಿ ಬಸ್ ಡಿಪೋ ಶೀಘ್ರ ಆರಂಭಕ್ಕೆ ರೈತ ಮುಖಂಡರ ಮನವಿ

KannadaprabhaNewsNetwork | Published : Dec 8, 2024 1:16 AM

ಸಾರಾಂಶ

Request of farmer leaders for early start of government bus depot

-ಹಿರಿಯೂರು ರೈತ ಸಂಘದಿಂದ ಕೆಎಸ್‌ಆರ್‌ಟಿಸಿ ಜಿಲ್ಲಾ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿಗೆ ಮನವಿ

------

ಕನ್ನಡಪ್ರಭ ವಾರ್ತೆ ಹಿರಿಯೂರು

ತಾಲೂಕಿನಾದ್ಯಂತ ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಚಾರ ಸೇವೆ ಸಮಪರ್ಕವಾಗಿಲ್ಲ. ಸರ್ಕಾರಿ ಬಸ್‌ಗಳ ಕೊರತೆಯಿಂದ ಶಾಲಾ- ಕಾಲೇಜು ವಿದ್ಯಾರ್ಥಿಗಳು, ಗ್ರಾಮೀಣರು, ಕೂಲಿ ಕಾರ್ಮಿಕರಿಗೆ ಸಂಚಾರಕ್ಕಾಗಿ ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಆದ್ದರಿಂದ, ಶೀಘ್ರ ಬಸ್‌ ಡಿಪೋ ಆರಂಭಿಸಿ, ಬಸ್‌ಗಳ ಸಮರ್ಪಕ ಸಂಚಾರಕ್ಕೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಚಿತ್ರದುರ್ಗದಲ್ಲಿ ಕೆಎಸ್‌ಆರ್‌ಟಿಸಿ ಜಿಲ್ಲಾ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿಗೆ ರೈತ ಸಂಘ ಮುಖಂಡರು ಮನವಿ ಮಾಡಿದರು.

ನಗರದ ಹುಳಿಯಾರು ರಸ್ತೆಯ ಹರಿಶ್ಚಂದ್ರ ಘಾಟ್ ಬಳಿ ನೂತನವಾಗಿ ನಿರ್ಮಿಸಿರುವ ಸಾರಿಗೆ ನಿಗಮದ ಡಿಪೋದಲ್ಲಿ ಸಣ್ಣಪುಟ್ಟ ಕಾಮಗಾರಿಗಳನ್ನು ಶೀಘ್ರ ಮುಗಿಸಬೇಕು. ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಿಗೂ ಹಾಗೂ ತಾಲೂಕಿನ ಗ್ರಾಮಾಂತರ ಪ್ರದೇಶಗಳಿಗೆ ಬಸ್ ಸಂಚಾರ ಪ್ರಾರಂಭಿಸಲು ಸಂಬಂಧಪಟ್ಟ ಸಾರಿಗೆ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಮೇಲಧಿಕಾರಿಗಳ ಜೊತೆ ಚರ್ಚಿಸಿ, ಶೀಘ್ರ ಡಿಪೋ ಪ್ರಾರಂಭಿಸಲು ಮನವಿ ಮಾಡಿದರು.

ಮನವಿಗೆ ಸ್ಪಂದಿಸಿದ ಜಿಲ್ಲಾ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ಸಿ.ಇ. ಶ್ರೀನಿವಾಸ್ ಮೂರ್ತಿ ನೂತನ ಕಚೇರಿಯಲ್ಲಿ ಪೀಠೋಪಕರಣಗಳನ್ನು ಅಳವಡಿಸಲು ಟೆಂಡರ್ ಕರೆಯಲಾಗಿದೆ. ಜೊತೆಗೆ ಬಾಕಿ ಸಣ್ಣಪುಟ್ಟ ಕಾಮಗಾರಿ ಪೂರೈಸಿ ಶೀಘ್ರ ಡಿಪೋ ಪ್ರಾರಂಭಿಸಲಾಗುವುದು ಎಂದು ಭರವಸೆ ನೀಡಿದರು.

ಈ ಸಂದರ್ಭ ರಾಜ್ಯ ರೈತ ಸಂಘದ ಉಪಾಧ್ಯಕ್ಷ ಕೆ.ಸಿ. ಹೊರಕೇರಪ್ಪ, ಹಿರಿಯೂರು ತಾಲೂಕು ಅಧ್ಯಕ್ಷ ಬಿ.ಒ. ಶಿವಕುಮಾರ್, ಕಾರ್ಯಾಧ್ಯಕ್ಷ ದಸ್ತಗಿರಿ ಸಾಬ್, ಜಿಲ್ಲಾ ಉಪಾಧ್ಯಕ್ಷ ಎಂ. ಲಕ್ಷ್ಮೀಕಾಂತ್, ಗೌಸ್ ಪೀರ್, ಚೇತನ್ ಯಳನಾಡು, ಮೇಟಿಕುರ್ಕೆ ತಿಪ್ಪೇಸ್ವಾಮಿ ಮುಂತಾದವರು ಹಾಜರಿದ್ದರು.

- - -

-ಚಿತ್ರ1.ಜೆಪಿಜಿ:

ಸಾರಿಗೆ ಬಸ್ ಡಿಪೋ ಶೀಘ್ರ ಪ್ರಾರಂಭಿಸಿ, ಸಮರ್ಪಕ ಬಸ್‌ ಸಂಚಾರಕ್ಕೆ ಅವಕಾಶ ಕಲ್ಪಿಸಲು ಒತ್ತಾಯಿಸಿ ಹಿರಿಯೂರು ತಾಲೂಕಿನ ರೈತ ಸಂಘ ವತಿಯಿಂದ ಚಿತ್ರದುರ್ಗ ಕಚೇರಿಯಲ್ಲಿ ಕೆಎಸ್‌ಆರ್‌ಟಿಸಿ ಜಿಲ್ಲಾ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

Share this article