ಕನ್ನಡಪ್ರಭ ವಾರ್ತೆ ಚಾಮರಾಜನಗರ
ಜಿಲ್ಲಾಡಳಿತ ಭವನದ ಆವರಣದಲ್ಲಿ ನಿರ್ಮಾಣಗೊಳ್ಳುತ್ತಿರುವ ಬಸವಣ್ಣನ ಪುತ್ಥಳಿಯನ್ನು ಮೂಲ ಸ್ಥಳಕ್ಕೆ (ಜಿಲ್ಲಾ ರಂಗಮಂದಿರ ಮುಂಭಾಗ) ಸ್ಥಳಾಂತರಿಸಬೇಕು, ವಿನ್ಯಾಸ ಬದಲಿಸಿ ಸಾಂಸ್ಕೃತಿಕ ನಾಯಕ ಬಸವಣ್ಣನವರನ್ನು ಸ್ಥಾಪಿಸಬೇಕು ಎಂದು ಒತ್ತಾಯಿಸಿ ಡಾ.ಅಂಬೇಡ್ಕರ್ ಸ್ವಾಭಿಮಾನಿ ಹೋರಾಟ ಸಮಿತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಿ, ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ನಗರದ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು ಅಲ್ಲಿಂದ ಮೆರವಣಿಗೆಯಲ್ಲಿ ಜಿಲ್ಲಾಡಳಿತ ಭವನದ ಪ್ರವೇಶ ದ್ವಾರದ ಬಳಿ ಪ್ರತಿಭಟನೆ ನಡೆಸಿ, ಮುಖಂಡರು ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಜಿಲ್ಲಾಡಳಿತದ ಮೂಲಕ ಮನವಿ ಸಲ್ಲಿಸಿದರು.ಸಮಿತಿಯ ಸಿ.ಎಂ.ಕೃಷ್ಣ ಮಾತನಾಡಿ, ಜಿಲ್ಲಾಡಳಿತ ಭವನದ ಆವರಣದ ಡಾ.ಅಂಬೇಡ್ಕರ್ ಪುತ್ಥಳಿ ಎದುರು ರಾಜ ಪ್ರಭುತ್ವದ ವಿನ್ಯಾಸದ ಬಸವಣ್ಣನ ಪುತ್ಥಳಿ ಸ್ಥಾಪಿಸಿರುವುದು ಕಾನೂನು ಬಾಹಿರವಾಗಿದೆ ಎಂದು ಆರೋಪಿಸಿದರು. ಅಕ್ರಮ, ಕಾನೂನುಬಾಹಿರ ಶ್ರಿಬಸವಣ್ಣನ ಪುತ್ಥಳಿ ಉದ್ಘಾಟನೆಯನ್ನು ಸ್ಥಗಿತಗೊಳಿಸಿ. ಜಿಲ್ಲಾ ರಂಗಮಂದಿರ ಮುಂಭಾಗಕ್ಕೆ ಸ್ಥಳಾಂತರಗೊಳಿಸಿ. ಅನಾಮಧೇಯ ವ್ಯಕ್ತಿಗಳು ರಾತ್ರೋರಾತ್ರಿ ಅತಿಕ್ರಮಣ ಪ್ರವೇಶ ಮಾಡಿ, ಅಕ್ರಮವಾಗಿ, ಕಾನೂನುಬಾಹಿರವಾಗಿ ಜಿಲ್ಲಾಡಳಿತಭವನ ಆವರಣದೊಳಗಡೆ ಅನುಸ್ಥಾಪನೆಗೊಳಿಸಿರುವ ಅತಿಕ್ರಮಣಕಾರರ ವಿರುದ್ಧ ಸೂಕ್ತ ಕಾನೂನು ಕ್ರಮ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.ಅತಿಕ್ರಮಣಕಾರರಿಗೆ ಪ್ರತ್ಯಕ್ಷ ಪರೋಕ್ಷವಾಗಿ ಕಾನೂನುಬಾಹಿರ ಚಟುವಟಿಕೆಗೆ ಬೆಂಬಲ ನೀಡಿ. ತಮ್ಮ ದುರಾಡಳಿತದ ಮೂಲಕ ಕರ್ತವ್ಯ ಲೋಪವೆಸಗಿರುವ ಅಪರ ಜಿಲ್ಲಾಧಿಕಾರಿ ಗೀತಾ ಹುಡೇದ್, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕರಾದ ಶ್ರಿಮಂಜುಳ ಮತ್ತು ಎ.ಇ.ಇ ವೃಷಬೇಂದ್ರಪ್ಪ ಅವರನ್ನು ಸೇವೆಯಿಂದ ಅಮಾನತುಗೊಳಿಸಬೇಕು ಎಂದು ಒತ್ತಾಯಿಸಿದರು.ಜಿಲ್ಲಾ ರಂಗಮಂದಿರ ಮುಂಭಾಗ ಶ್ರೀ ಬಸವಣ್ಣನ ಪುತ್ಥಳಿ ನಿರ್ಮಾಣ ಮಾಡಲು ನಿರ್ಣಯಿಸಿ, ಅಂದಿನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ವಿ.ಸೋಮಣ್ಣ ಜನವರಿ ೨೦೨೩ರಲ್ಲಿ ಗುದ್ದಲಿ ಪೂಜೆ ಮತ್ತು ಶಿಲಾನ್ಯಾಸ ನೆರವೇರಿಸಿದ್ದರು. ಈ ಸ್ಥಳಕ್ಕೆ ಸಾಂಸ್ಕೃತಿಕ ನಾಯಕ ಬಸವಣ್ಣನವರ ವಿನ್ಯಾಸವುಳ್ಳ ಪುತ್ಥಳಿಯನ್ನು ಸ್ಥಳಾಂತರಿಸಿ ಸ್ಥಾಪಿಸಬೇಕು, ಇದಕ್ಕೆ ನಮ್ಮ ವಿರೋಧವಿಲ್ಲ ಎಂದರು.ನಮ್ಮ ಮನವಿ ಪುರಸ್ಕರಿಸದಿದ್ದರೆ ಬಸವೇಶ್ವರ ಪುತ್ಥಳಿ ಉದ್ಘಾಟನೆಗೆ ಅವಕಾಶ ಮಾಡಿಕೊಡುವುದಿಲ್ಲ ಎಂದು ಎಚ್ಚರಿಸಿದರು. ಪ್ರತಿಭಟನೆಯಲ್ಲಿ ಕದಂಬ ಅಂಬರೀಶ್, ಹೊಂಗನೂರು ನಟರಾಜ್, ಭೋಗಾಪುರ ನಾಗೇಶ್, ಕೆಂಪರಾಜು ಹೊಂಗನೂರು, ರಂಗಸ್ವಾಮಿ ಕಾಗಲವಾಡಿ ಇತರರು ಭಾಗವಹಿಸಿದ್ದರು.