ಮಾಗಡಿ: ಬಂಡಾಯ ಕವಿ ಎಂದೇ ಖ್ಯಾತರಾದ, ಪದ್ಮಶ್ರೀ ಪುರಸ್ಕೃತ ಡಾ.ಸಿದ್ದಲಿಂಗಯ್ಯನವರ ಹೆಸರನ್ನು ಪಟ್ಟಣದ ಪ್ರಮುಖ ವೃತ್ತ ಅಥವಾ ರಸ್ತೆಗೆ ಇಡುವಂತೆ ಆಗ್ರಹಿಸಿ ದಲಿತ ಮುಖಂಡರು ತಹಸೀಲ್ದಾರ್ ಹಾಗೂ ಪುರಸಭಾ ಮುಖ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಡಾ.ಸಿದ್ದಲಿಂಗಯ್ಯನವರ ಸಹೋದರ ಶಿವಶಂಕರ್ ಮಾತನಾಡಿ, ಮಾಗಡಿ ಪಟ್ಟಣದ ಹೊಸಪೇಟೆ ಕಾಲೋನಿಯಲ್ಲಿ ಜನಿಸಿದ ಬಂಡಾಯ ಕವಿ ಡಾ.ಸಿದ್ದಲಿಂಗಯ್ಯನವರಿಗೆ ಸಲ್ಲಬೇಕಾದ ಗೌರವಗಳು ಅವರು ಹುಟ್ಟಿದ ಊರಿನಲ್ಲೇ ಸಲ್ಲುತ್ತಿಲ್ಲ ಎಂಬುದು ಬೇಸರದ ಸಂಗತಿ. ಒಂದೇ ತಾಲೂಕಿನ ಸಾಲುಮರದ ತಿಮ್ಮಕ್ಕ ಮತ್ತು ಸಿದ್ದಲಿಂಗಯ್ಯನವರಿಗೆ ದೇಶದ ಅತ್ಯುನ್ನತ ಪದ್ಮಶ್ರೀ ಪ್ರಶಸ್ತಿ ಸಿಕ್ಕಿರುವುದು ಇಡೀ ತಾಲೂಕಿಗೆ ಹೆಮ್ಮೆಯ ವಿಷಯ. ರಾಜ್ಯ ಸರ್ಕಾರ ಅವರ ಹೆಸರಿನಲ್ಲಿ ಶಾಶ್ವತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಅಂಬೇಡ್ಕರ್ ಅವರ ಆಶಯಗಳನ್ನು ಬರಹಗಳ ಮೂಲಕ ಜನರಿಗೆ ತಲುಪಿಸಿದ ಸಿದ್ದಲಿಂಗಯ್ಯನವರ ಹೆಸರನ್ನು ಹೊಸಪೇಟೆ ವೃತ್ತಕ್ಕೆ ಅಥವಾ ಪ್ರಮುಖ ರಸ್ತೆಗೆ ಇಡಬೇಕು. ಹಾಗೆಯೇ ಸಾಲುಮರದ ತಿಮ್ಮಕ್ಕನವರ ಹೆಸರು ಶಾಶ್ವತವಾಗಿ ಉಳಿಯುವ ನಿಟ್ಟಿನಲ್ಲಿ ಶಾಸಕ ಬಾಲಕೃಷ್ಣ ಅವರು ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.
ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಕಲ್ಕೆರೆ ಶಿವಣ್ಣ ಮಾತನಾಡಿ, ತಮ್ಮ ಬರಹಗಳಿಂದ ದಲಿತರಲ್ಲಿ ಜ್ಞಾನ ಮತ್ತು ಚಳವಳಿ ಪ್ರೇರಣೆ ನೀಡಿದ ಡಾ.ಸಿದ್ದಲಿಂಗಯ್ಯನವರು ಸಾಹಿತ್ಯ ಶರಣರು. ರಾಷ್ಟ್ರಕವಿ ಕುವೆಂಪು ಅವರ ಸಾಲಿಗೆ ನಿಲ್ಲುವ ಸಿದ್ದಲಿಂಗಯ್ಯನವರು ನಮ್ಮ ತಾಲೂಕಿನವರು ಎನ್ನುವುದೇ ನಮಗೆ ಹೆಮ್ಮೆ. ತಾಲೂಕು ಆಡಳಿತ ಅವರಿಗೆ ಸೂಕ್ತ ಗೌರವ ನೀಡಬೇಕು. ಶಾಸಕರು ತಕ್ಷಣ ಅಧಿಕಾರಿಗಳ ಸಭೆ ಕರೆದು ಅವರ ಹೆಸರು ಶಾಶ್ವತವಾಗಿ ಉಳಿಯುವಂತೆ ಮಾಡಬೇಕು ಎಂದರು.ತಾಲೂಕು ಭೂ ನ್ಯಾಯ ಮಂಡಳಿ ಸದಸ್ಯ ಬ್ಯಾಲಕೆರೆ ಚಿಕ್ಕರಾಜು ಮಾತನಾಡಿ, ಶಾಸಕ ಬಾಲಕೃಷ್ಣ ತಾಲೂಕಿನ ಹೆಮ್ಮೆಯ ಕವಿ ಡಾ.ಸಿದ್ದಲಿಂಗಯ್ಯ ಹಾಗೂ ಸಾಲುಮರದ ತಿಮ್ಮಕ್ಕನವರ ಹೆಸರನ್ನು ಶಾಶ್ವತಗೊಳಿಸಲು ಮುಂದಾಗಬೇಕು. ಪಟ್ಟಣದಲ್ಲಿ 42 ಕೋಟಿ ವೆಚ್ಚದಲ್ಲಿ ನಿರ್ಮಿಸುತ್ತಿರುವ ಸರ್ಕಾರಿ ಆಸ್ಪತ್ರೆಗೆ ಸಾಲುಮರದ ತಿಮ್ಮಕ್ಕ ಹೆಸರಿಡಬೇಕು. ಹೆರಿಗೆ ಆಸ್ಪತ್ರೆ ನಿರ್ಮಿಸುವುದು ತಿಮ್ಮಕ್ಕನವರ ಆಸೆಯಾಗಿತ್ತು. ಆಸ್ಪತ್ರೆಗೆ ಅವರ ಹೆಸರಿಟ್ಟು ಅವರ ಕೊನೆ ಆಸೆಯನ್ನು ಈಡೇರಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ದಲಿತ ಮುಖಂಡರಾದ ಮಾಡಬಾಳ್ ಜಯರಾಂ, ಗೋಪಾಲ್, ಬೆಂಕಿ ಮಾದೇವ, ಬೆಳ್ಳಿಯಪ್ಪ, ನರಸಿಂಹಮೂರ್ತಿ, ಕೆಂಪಯ್ಯ, ರಾಜಣ್ಣ, ನಾಗರಾಜು, ದಯಾನಂದ್, ನವೀನ್, ಶಶಿಕುಮಾರ್, ಗೋವಿಂದಯ್ಯ, ಲಕ್ಷ್ಮಣಯ್ಯ, ಕೃಷ್ಣಮೂರ್ತಿ ಇತರರು ಉಪಸ್ಥಿತರಿದ್ದರು.
ಮಾಗಡಿ ಪಟ್ಟಣದಲ್ಲಿ ಸಂಬುದ್ಧ ಜನ ಸೇವಾ ಟ್ರಸ್ಟ್ ಹಾಗೂ ಭೀಮ ಪಡೆ ಸಹಯೋಗದಲ್ಲಿ ಪದ್ಮಶ್ರೀ ಪುರಸ್ಕೃತ ಡಾ.ಸಿದ್ದಲಿಂಗಯ್ಯ ಪುಣ್ಯಸ್ಮರಣೆ ಕಾರ್ಯಕ್ರಮ ನಡೆಯಿತು.