ಗದಗ: ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಡೊನೇಷನ್ ಹಾವಳಿ ಹೆಚ್ಚಾಗಿದ್ದು, ಕೂಡಲೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ರಾಜ್ಯ ದಲಿತ ವಿದ್ಯಾರ್ಥಿ ಪರಿಷತ್ ಜಿಲ್ಲಾ ಘಟಕದಿಂದ ಜಿಲ್ಲಾಧಿಕಾರಿಗಳ ಕಚೇರಿ ಸಿಬ್ಬಂದಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಹಾಗೂ ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಲಾಯಿತು.
ಪ್ರಸ್ತುತ ದಿನಮಾನದಲ್ಲಿ ಶಿಕ್ಷಣ ಉಳ್ಳವರ ಪಾಲಾಗಿದೆ, ಬಡವರು ಕೂಲಿ ಕಾರ್ಮಿಕರ ಮಕ್ಕಳು ಗುಣ ಮಟ್ಟದ ಶಿಕ್ಷಣ ಪಡೆದುಕೊಳ್ಳುವುದು ಬಹಳ ಕಷ್ಟಕರವಾಗಿದೆ. ಅಷ್ಟೇ ಅಲ್ಲದೇ ಪ್ರತಿಷ್ಟಿತ ವಿದ್ಯಾ ಸಂಸ್ಥೆಗಳಲ್ಲಿ ಎಸ್ಸಿ,ಎಸ್ಟಿ ವಿದ್ಯಾರ್ಥಿಗಳಿಗೆ ಮೀಸಲಾತಿಯನ್ವಯ ಪ್ರವೇಶಾತಿ ನೀಡಬೇಕೆಂಬ ಸರ್ಕಾರದ ಆದೇಶವಿದೆ. ಆದರೆ ಕೆಲವು ಸಂಸ್ಥೆಗಳು ಸರ್ಕಾರದ ಆದೇಶ ಪಾಲಿಸದೇ ಬೇಕಾಬಿಟ್ಟಿಯಾಗಿ ಸಾಮಾನ್ಯ ಕೋಟಾದಡಿಯಲ್ಲಿ ದುಡ್ಡು ಕೊಟ್ಟ ವಿದ್ಯಾರ್ಥಿಗಳ ಪ್ರವೇಶ ಮಾಡಿಕೊಳ್ಳುತ್ತಿವೆ. ಹೀಗೆ ಮುಂದುವರಿದರೆ ಬಡ ವಿದ್ಯಾರ್ಥಿಗಳು ಶೈಕ್ಷಣಿಕ ಕ್ಷೇತ್ರದಿಂದ ದೂರ ಉಳಿಯುವ ಆತಂಕ ಮೂಡಿದೆ ಕೂಡಲೆ ಸರ್ಕಾರ ಎಚ್ಚೆತ್ತು ಶಿಕ್ಷಣ ಕ್ಷೇತ್ರವನ್ನು ವ್ಯಾಪಾರೀಕರಣ ಮಾಡಿಕೊಂಡ ಖಾಸಗಿ ಶಿಕ್ಷಣ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಒಂದು ವೇಳೆ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸದೇ ಡೊನೇಷನ್ ದಂಧೆಗಿಳಿದ ಖಾಸಗಿ ಶಿಕ್ಷಣ ಸಂಸ್ಥೆಗಳ ವಿರುದ್ಧ ಕ್ರಮಕೈಗೊಳ್ಳದೇ ಹೋದರೆ ಜಿಲ್ಲೆಯಾದ್ಯಂತ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ವಿಭಾಗ ಮಟ್ಟದ ಎಸ್ಸಿ,ಎಸ್ಟಿ ದೌರ್ಜನ್ಯ ನಿಯಂತ್ರಣ ಸಮಿತಿ ಸದಸ್ಯ ಬಸವರಾಜ ಮುಳ್ಳಾಳ, ಜಿಲ್ಲಾ ಉಪಾಧ್ಯಕ್ಷ ಲಕ್ಷ್ಮಣ ಪೂಜಾರ, ಗುಡದಪ್ಪ ತಳಗೇರಿ, ರಮೇಶ ನಂದಿ, ಅಭಿಷೇಕ ಕೊಪ್ಪದ, ವಿನೋದ ಹಡಗಲಿ, ಗವಿಸಿದ್ದಪ್ಪ ವಿಭೂತಿ, ರಮೇಶ ಸಂಗಳದ, ಪ್ರಹ್ಲಾದ ಭಜಂತ್ರಿ ಇದ್ದರು.