ಕನ್ನಡಪ್ರಭ ವಾರ್ತೆ ಶಹಾಪುರ
ರಾಜ್ಯದಲ್ಲಿ ಭೀಕರ ಬರದ ಕಾರಣ ಲೋಕಸಭಾ ಚುನಾವಣೆ ಕಾರ್ಯಕ್ಕೆ ನಿಯೋಜನೆಗೊಂಡು ಚೆಕ್‌ಪೋಸ್ಟ್ ಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳಿಗೆ ಸೌಕರ್ಯವಿಲ್ಲದೆ ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ. ಎಲ್ಲಾ ಚೆಕ್‌ಪೋಸ್ಟ್ ಗಳಲ್ಲಿ ನೆರಳಿಲ್ಲದೆ ಕಡುಬಿಸಿಲಿನಲ್ಲಿ ಕರ್ತವ್ಯ ನಿರ್ವಹಿಸುವಂತಾಗಿದೆ. ಪ್ರತಿ ಚೆಕ್‌ಪೋಸ್ಟ್ ಗಳಲ್ಲಿ ನೆರಳಿನ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ, ರಾತ್ರಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗಳಿಗೆ ವಾಹನದ ವ್ಯವಸ್ಥೆ ಹಾಗೂ ಪ್ರತಿವಾರ ಶಿಫ್ಟ್ ಬದಲಾವಣೆ ಮಾಡಬೇಕು. ಅಲ್ಲದೆ ಮತಗಟ್ಟೆ ಸಿಬ್ಬಂದಿಗಳಿಗೆ ತಂಪಾದ ಕುಡಿಯುವ ನೀರಿನ ವ್ಯವಸ್ಥೆ, ಇಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗಳ ಗುಣಮಟ್ಟದ ಉಪಹಾರ ಮತ್ತು ಮಧ್ಯಾಹ್ನ ಊಟದ ವ್ಯವಸ್ಥೆ ಮಾಡಬೇಕು. ಮಹಿಳಾ ನೌಕರರಿಗೆ ಕರ್ತವ್ಯ ನಿರ್ವಹಿಸುವ ತಾಲೂಕಿನಲ್ಲಿಯೇ ಚುನಾವಣೆ ಕರ್ತವ್ಯಕ್ಕೆ ನಿಯೋಜಿಸಬೇಕು. ಅಲ್ಲದೆ ಅನಾರೋಗ್ಯ ಪೀಡಿತ ಗರ್ಭಿಣಿ, ಸ್ತ್ರೀಯರು ಅಂಗವಿಕಲರು ಹಾಗೂ ಒಂದು ವರ್ಷದೊಳಗಿನ ಮಕ್ಕಳ ತಾಯಂದಿರು ಹಾಗೂ ನಿವೃತ್ತಿ ಅಂಚಿನಲ್ಲಿರುವ ನೌಕರರನ್ನು ಚುನಾವಣೆ ಕರ್ತವ್ಯದಿಂದ ವಿನಾಯಿತಿ ನೀಡಬೇಕು ಎಂದು ನೌಕರ ಸಂಘದ ತಾಲೂಕ ಅಧ್ಯಕ್ಷ ರಾಯಪ್ಪ ಗೌಡ ಹುಡೇದ್ ಅಧಿಕಾರಿಗಳಿಗೆ ಮನವಿ ಮಾಡಿದರು.
ರಾಜ್ಯ ಪರಿಷತ್ ಸದಸ್ಯ ಶಾಂತರೆಡ್ಡಿ ತುಂಬಿಗಿ, ಕಾರ್ಯದರ್ಶಿ ನಿಂಗಪ್ಪ ಪುರ್ಲೆ, ಖಜಾಂಚಿ ಬಸನಗೌಡ ಬೆಳ್ಳಿ ಕಟ್ಟಿ ಸೇರಿದಂತೆ ಸರಕಾರಿ ನೌಕರರ ಸಂಘದ ಮುಖಂಡರು ಇದ್ದರು.