ಶಿರಸಿ: ಶಿರಸಿ ಶೈಕ್ಷಣಿಕ ಜಿಲ್ಲೆಗೆ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಚೇರಿಯನ್ನು ಮಂಜೂರು ಮಾಡುವಂತೆ ಶಿಕ್ಷಣ ಮಧು ಬಂಗಾರಪ್ಪ ಅವರಿಗೆ ಕರ್ನಾಟಕ ರಾಜ್ಯ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಶಿರಸಿ ಘಟಕದಿಂದ ಹಕ್ಕೊತ್ತಾಯ ಮಾಡಲಾಯಿತು.ಜಿಲ್ಲೆಯು ಭೌಗೋಳಿಕವಾಗಿ ಅತ್ಯಂತ ವಿಶಾಲವಾಗಿದ್ದು, ಘಟ್ಟದ ಮೇಲಿನ ತಾಲೂಕುಗಳಾದ ಶಿರಸಿ, ಸಿದ್ದಾಪುರ, ಮುಂಡಗೋಡ, ಯಲ್ಲಾಪುರ, ಹಳಿಯಾಳ, ದಾಂಡೇಲಿ, ಜೋಯಿಡಾ ತಾಲೂಕಿನ ವಿದ್ಯಾರ್ಥಿಗಳು, ಪಾಲಕರು, ಪ್ರಾಂಶುಪಾಲರು, ಉಪನ್ಯಾಸಕರು, ಸಿಬ್ಬಂದಿ ಕಚೇರಿ ಕೆಲಸಕ್ಕೆ ಸುಮಾರು ೧೮೦ ಕಿಮೀ ದೂರವಿರುವ ಕಾರವಾರದ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ ಕಚೇರಿಗೆ ತೆರಳುವುದು ಅತ್ಯಂತ ಕಷ್ಟಕರವಾಗಿರುತ್ತದೆ. ಸಮಯ ಕೂಡ ವ್ಯರ್ಥವಾಗಲಿದೆ.
ಈ ವೇಳೆ ಅಧ್ಯಕ್ಷ ದಿವಾಕರ ನಾಯ್ಕ, ಕಾರ್ಯಾಧ್ಯಕ್ಷ ಜೆ.ಪಿ. ನಾಯ್ಕ, ಪ್ರಧಾನ ಕಾರ್ಯದರ್ಶಿ ನಾಗರಾಜ ನಾಯ್ಕ, ಕೋಶಾಧ್ಯಕ್ಷ ಸುರೇಶ ಬಿ, ಬಾಲಚಂದ್ರ ಭಟ್ಟ, ಡಿ.ಜಿ. ಹೆಗಡೆ, ನರೇಂದ್ರ ನಾಯ್ಕ ಮತ್ತಿತರರು ಇದ್ದರು.29ರಂದು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕುರಿತು ಚಿಂತನ ಮಂಥನ ಸಭೆ
ಕುಮಟಾ: ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪಿಸುವ ಕುರಿತು ಚರ್ಚಿಸಲು ಆಸಕ್ತ ಸಮಾನ ಮನಸ್ಕರ ಚಿಂತನ ಮಂಥನ ಸಭೆಯನ್ನು ಪಟ್ಟಣದ ಲಯನ್ಸ್ ಸಭಾಭವನದಲ್ಲಿ ನ. ೨೯ರಂದು ಸಾಯಂಕಾಲ ೫ಕ್ಕೆ ಆಯೋಜಿಸಲಾಗಿದೆ. ಸಭೆಯಲ್ಲಿ ಆಸಕ್ತರು ಪಾಲ್ಗೊಂಡು ತಮ್ಮ ಸಲಹೆ, ಸೂಚನೆ ನೀಡಬಹುದು ಎಂದು ಡಾ. ಜಿ.ಜಿ. ಹೆಗಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ನಮ್ಮ ಜಿಲ್ಲೆಯವರು ತುರ್ತು ಮತ್ತು ಹೆಚ್ಚಿನ ಚಿಕಿತ್ಸೆಗಾಗಿ ದೂರದ ಪಣಜಿ, ಮಂಗಳೂರು, ಶಿವಮೊಗ್ಗ ಇಲ್ಲವೇ ಹುಬ್ಬಳ್ಳಿಗೆ ಹೋಗುವ ಅನಿವಾರ್ಯತೆ ಮೊದಲಿನಿಂದಲೂ ಇದೆ. ಜಿಲ್ಲೆಯ ಮಧ್ಯವರ್ತಿ ಸ್ಥಳವಾದ ಕುಮಟಾದಲ್ಲಿ ಸರ್ಕಾರದ ೧೧ ಎಕರೆ ಜಾಗ ಇದೆ. ಆದರೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಾತ್ರ ಆಗುತ್ತಿಲ್ಲ. ಇನ್ನೂ ಹೀಗೆ ಕುಳಿತರೆ ಸಮಸ್ಯೆ ಬಗೆಹರಿಯುವುದಿಲ್ಲ.ಸರ್ಕಾರದ ದಾರಿ ಕಾಯುತ್ತಾ ಕೂರದೇ ಸಮಾಜದ ಗಣ್ಯರು, ಮುಖಂಡರು, ಚಿಂತಕರು ಒಂದೆಡೆ ಸೇರಿ ಹೂಡಿಕೆದಾರರನ್ನು ಸಂಪರ್ಕಿಸಿ ಮತ್ತು ಸಿಎಸ್‌ಆರ್ ಫಂಡ್ ಮೂಲಕ ಪರ್ಯಾಯ ಪ್ರಯತ್ನ ಮಾಡಲು ಇದು ಸಕಾಲ. ಇದೊಂದು ಸಾಂಘಿಕ ಪ್ರಯತ್ನವಾಗಿದ್ದು, ಪಕ್ಷಾತೀತ, ಜಾತ್ಯತೀತ ಮತ್ತು ರಾಜಕೀಯ ರಹಿತ ಜನಾಂದೋಲನವಾಗಿದೆ. ಇದಕ್ಕೆ ಯಾವುದೇ ಪದಾಧಿಕಾರಿಗಳು ಇರುವುದಿಲ್ಲ. ಸಾಮೂಹಿಕ ನಾಯಕತ್ವದಡಿ ಜಿಲ್ಲೆಯ ಒಳಿತಿಗೆ ಒಂದು ಹೋರಾಟವಾಗಿದೆ. ಎಲ್ಲರೂ ಮುಕ್ತವಾಗಿ ಭಾಗವಹಿಸಿ ಅನಿಸಿಕೆ ಹಂಚಿಕೊಂಡು, ಮುಂದೇನು ಮಾಡಬೇಕು ಎನ್ನುವುದನ್ನು ಚಿಂತನ- ಮಂಥನ ಸಭೆಯಲ್ಲಿ ಚರ್ಚಿಸೋಣ ಮತ್ತು ಅದನ್ನು ಕಾರ್ಯರೂಪಕ್ಕೆ ತರೋಣ ಎಂದು ಡಾ. ಜಿ.ಜಿ. ಹೆಗಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.