ಕನ್ನಡಪ್ರಭ ವಾರ್ತೆ ಕೊಪ್ಪಳ
ಸುಮಾರು ವರ್ಷಗಳಿಂದ ನಡೆಯುತ್ತಿರುವ ಗದಗ-ವಾಡಿ ಹೊಸ ರೈಲು ಮಾರ್ಗದ ಕಾಮಗಾರಿ ಕುಷ್ಟಗಿಯವರೆಗೆ ಮುಗಿದಿದ್ದು, ಕುಷ್ಟಗಿವರೆಗೆ ರೈಲು ಓಡಿಸಲು ಒತ್ತಾಯಿಸಿ, ಬಿಜೆಪಿ ಕಾರ್ಯಕಾರಿಣಿ ಸದಸ್ಯ ಡಾ. ಬಸವರಾಜ ಕ್ಯಾವಟರ್ ಹಾಗೂ ವಿಧಾನಪರಿಷತ್ ಸದಸ್ಯೆ ಹೇಮಲತಾ ನಾಯಕ ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರಿಗೆ ಬೆಂಗಳೂರಿನಲ್ಲಿ ಮನವಿ ಸಲ್ಲಿಸಿದರು.ಗದಗ-ವಾಡಿ ರೈಲ್ವೆ ಕಾಮಗಾರಿಯು ಕುಷ್ಟಗಿಯವರೆಗೆ ಪೂರ್ಣಗೊಂಡಿದೆ. ಅಲ್ಲಿಯವರೆಗೆ ರೈಲು ಓಡಿಸಲು ಮುಂದಾಗಬೇಕು.
ಕುಷ್ಟಗಿ ಭಾಗದ ರೈತರು, ವ್ಯಾಪಾರಿಗಳು, ಸಾರ್ವಜನಿಕರು ಹುಬ್ಬಳ್ಳಿ, ಗದಗ ಜಿಲ್ಲೆಗಳಿಗೆ ದುಬಾರಿ ವೆಚ್ಚ ಮಾಡಿ ಹೋಗಬೇಕಾಗಿದೆ. ರೈಲು ಓಡಿಸುವುದರಿಂದ ಅಲ್ಲಿನ ವ್ಯಾಪಾರಿಗಳಿಗೆ, ರೈತರಿಗೆ, ಸಾರ್ವಜನಿಕರಿಗೆ ಸಾಕಷ್ಟು ಅನುಕೂಲವಾಗಲಿದೆ.ಇನ್ನೂ 2025-26ನೇ ಸಾಲಿನ ಬಜೆಟ್‌ನಲ್ಲಿ ಜಿಲ್ಲೆಯ ಹೊಸ ರೈಲು ಮಾರ್ಗಗಳಾಗಿರುವ ಬಾಗಲಕೋಟೆ ಗಂಗಾವತಿ, ದರೋಜಿ ಗಂಗಾವತಿ, ಆಲಮಟ್ಟಿ ಚಿತ್ರದುರ್ಗ ಈ ರೈಲು ಮಾರ್ಗಗಳಿಗೆ ಅನುದಾನ ಒದಗಿಸಬೇಕು.
ಇದರ ಜತೆಗೆ ಕೊಪ್ಪಳ, ಹುಲಗಿ, ಮುನಿರಬಾದ್ ರೈಲು ನಿಲ್ದಾಣಗಳ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಬೇಕು. ಇನ್ನೂ ರದ್ದಾಗಿರುವ ಬೆಳಗಾವಿ ಹೈದರಾಬಾದ್ ರೈಲನ್ನು ಪುನರಾಂಭ ಮಾಡಬೇಕು. ತಿರುಪತಿ ಕೊಲ್ಲಾಪೂರ ಮಧ್ಯೆ ಗುಂತಕಲ್, ಹೊಸಪೇಟೆ, ಹುಬ್ಬಳ್ಳಿ ಮಾರ್ಗವಾಗಿ ವಂದೇ ಭಾರತ್ ರೈಲು ಪ್ರಾರಂಭಿಸಬೇಕು. ಸಾಮಾಜಿಕ, ಆರ್ಥಿಕ ಪ್ರಗತಿಗಾಗಿ ಕುಷ್ಟಗಿ-ಗೋಕಾಕ, ರಾಯಚೂರು, ಬೆಳಗಾವಿ ಹೊಸ ರೈಲು ಮಾರ್ಗಗಳ ಸರ್ವೇ ಕಾರ್ಯ ಪ್ರಾರಂಭಿಸಬೇಕು ಎಂದು ಕ್ಯಾವಟರ್ ಮನವಿ ಮಾಡಿದ್ದಾರೆ.14ರಂದು ರೈಲ್ವೆ ಮೇಲ್ಸೇತುವೆ ಉದ್ಘಾಟನೆ:ಸಾರ್ವಜನಿಕರ ಅನುಕೂಲಕ್ಕೆ ನಿರ್ಮಾಣಗೊಂಡಿರುವ ರೈಲ್ವೆ ಗೇಟ್ ನಂ. 66ರಲ್ಲಿ (ಕುಷ್ಟಗಿ) ಬಳಿ ನಿರ್ಮಿಸಿರುವ ಮೇಲ್ಸೇತುವೆ ಉದ್ಘಾಟನೆ ಮಾಡಲು ಜ. 14 ರಂದು ದಿನಾಂಕ ನಿಗದಿಯಾಗಿದೆ.ಡಾ. ಬಸವರಾಜ ಕ್ಯಾವಟರ್ ರೈಲ್ವೆ ಮೇಲ್ಸೇತುವೆ ಉದ್ಘಾಟನೆ ಮಾಡಬೇಕು ಎಂದು ಸಚಿವ ವಿ.ಸೋಮಣ್ಣ ಅವರಿಗೆ ಮನವಿ ಸಲ್ಲಿಸಿದರು. ಇದಕ್ಕೆ ಸ್ಪಂದಿಸಿದ ಸಚಿವರು ಮೇಲ್ಸೇತುವೆಯನ್ನು ಉದ್ಘಾಟನೆ ಮಾಡಲು ಒಪ್ಪಿಗೆ ಸೂಚಿಸಿದ್ದಾರೆ. ಸಚಿವರು ತಿಳಿಸಿದಂತೆ ಜ. 14 ರಂದು ದಿನಾಂಕ ನಿಗದಿ ಮಾಡಲಾಗಿದೆ. ಅಂದು ಸಚಿವ ವಿ.ಸೋಮಣ್ಣ ಮೇಲ್ಸೇತುವೆ ಉದ್ಘಾಟನೆ ಮಾಡಲಿದ್ದಾರೆ.