ಕೊಪ್ಪಳ:
ಸರ್ಕಾರವು ಗೊಂಡಬಾಳ ಸಮೀಪದಲ್ಲಿ ಮೆ. ಯುಕೆಇಎಮ್ ಅಗ್ರಿ ಇನ್ಫ್ರಾ ಲಿಮಿಟೆಡ್ ಕಂಪನಿಗೆ ಸಕ್ಕರೆ ಕಾರ್ಖಾನೆ ಸ್ಥಾಪಿಸಲು ಅನುಮತಿ ನೀಡಿದೆ. ಇದೀಗ ಕಂಪನಿ ಗ್ರಾಪಂಗೆ ಎನ್‌ಒಸಿ ಪಡೆಯಲು ಅರ್ಜಿ ಸಲ್ಲಿಸಿದೆ. ಗ್ರಾಪಂನಿಂದ ಸಾರ್ವಜನಿಕರ ಆಕ್ಷೇಪಣೆಗೆ ಅವಕಾಶ ನೀಡಿದೆ. ಆದರೆ, ಈ ಕಾರ್ಖಾನೆ ಸ್ಥಳವು ನಮ್ಮೂರಿನಿಂದ ಕೇವಲ ೫೦-೬೦೦ ಮೀಟರ್ ದೂರದಲ್ಲಿದೆ. ಇದರಿಂದ ಫಲವತ್ತಾದ ಭೂಮಿ, ಏತ ನೀರಾವರಿ ಸೌಲಭ್ಯ ಮತ್ತು ಉತ್ತಮ ಪರಿಸರವೂ ಹಾಳಾಗಲಿದೆ. ಉದ್ದೇಶಿತ ಜಾಗದ ಸಮೀಪದಲ್ಲಿಯೇ ಸರ್ಕಾರಿ ಪ್ರೌಢಶಾಲೆ ಮಂಜೂರಾಗಿದೆ. ಜತೆಗೆ ಮೊರಾರ್ಜಿ ವಸತಿ ಶಾಲೆ ಪ್ರಾರಂಭಿಸಲು ಸರ್ಕಾರವು ಅನುಮೋದನೆ ನೀಡಿದೆ. ಇದರಿಂದ ಮುಂದೆ ವಿದ್ಯಾರ್ಥಿಗಳ ಶೈಕ್ಷಣಿಕ ಮಟ್ಟಕ್ಕೆ ದೊಡ್ಡ ಪೆಟ್ಟು ಬೀಳಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಜೀವನಾಡಿ ತುಂಗಭದ್ರಾ ನದಿ, ಕೊಳವೆ ಬಾವಿಗಳು ಮಾಲಿನ್ಯವಾಗಲಿವೆ. ಈ ಕಾರ್ಖಾನೆ ತುಂಗಾಭದ್ರ ಅಚ್ಚುಕಟ್ಟು ಪ್ರದೇಶದಿಂದ ೨೦೦ ಮೀಟರ್ ಅಂತರದಲ್ಲಿದೆ. ಜನರ ರೋಗ-ರುಜಿನಕ್ಕೂ ದಾರಿಯಾಗಲಿದೆ. ಕೂಡಲೇ ಈ ಕಾರ್ಖಾನೆ ಸ್ಥಾಪನೆ ಪ್ರಕ್ರಿಯೆ ನಿಲ್ಲಿಸಬೇಕು. ಕಾರ್ಖಾನೆಗೆ ಎನ್‌ಒಸಿ ನೀಡಬಾರದು ಎಂದು ಒತ್ತಾಯಿಸಿ ಪಿಡಿಒಗೆ ಆಕ್ಷೇಪಣೆ ಮನವಿ ಸಲ್ಲಿಸಿದರು.ಈ ವೇಳೆ ಪ್ರಭು ಹಳ್ಳಿಕೇರಿ, ಮುತ್ತು, ಬಸವರಾಜ ಸಜ್ಜನ್, ಶಾಂತಕುಮಾರ, ಬಸವರಾಜ ಆರೇರ, ಶರಣಬಸವ ಪಲ್ಲೇದ, ಕಾರ್ತಿಕ ಹೂಗಾರ, ಬಸವರಾಜ, ಚೇತನ, ಮಂಜುನಾಥ ಸೋಂಪುರ, ಮಲ್ಲಪ್ಪ ಗುಗ್ರಿ ಸೇರಿದಂತೆ ಇತರರು ಪಾಲ್ಗೊಂಡಿದ್ದರು.