ವಿಜ್ಞಾನ ಪ್ರಶ್ನೆಪತ್ರಿಕೆಯ ರಚನೆಯಲ್ಲಿ ಬದಲಾವಣೆ ಮಾಡಲು ಸರ್ಕಾರಕ್ಕೆ ಮನವಿ

KannadaprabhaNewsNetwork | Published : Oct 11, 2024 11:58 PM

ಸಾರಾಂಶ

ವಿಜ್ಞಾನದ ಗುಣಾತ್ಮಕ ಫಲಿತಾಂಶ ಕೆಳಮುಖವಾಗುತ್ತಿದೆ. ಹೀಗಾಗಿ ಸೂಕ್ತ ಬದಲಾವಣೆ ಅಗತ್ಯವಾಗಿದ್ದು, ಪಠ್ಯಪುಸ್ತಕದಲ್ಲಿ ಭೌತ, ಜೀವ, ರಸಾಯನ ಶಾಸ್ತ್ರಗಳ ವಿಂಗಡನೆ ಇಲ್ಲದಿದ್ದರೂ ಪ್ರಶ್ನೆಪತ್ರಿಕೆಯಲ್ಲಿ ವಿಭಾಗವಾರು ವಿಂಗಡನೆ ಆಗುತ್ತಿದೆ.

ಯಲ್ಲಾಪುರ: ವಿಜ್ಞಾನ ಪ್ರಶ್ನೆ ಪತ್ರಿಕೆಯ ರಚನೆಯಲ್ಲಿ ಸೂಕ್ತ ಬದಲಾವಣೆ ತರುವಂತೆ ಪ್ರೌಢಶಾಲಾ ಪರೀಕ್ಷಾ ಮಂಡಳಿಯ ನಿರ್ದೇಶಕರಿಗೆ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಜಿಲ್ಲಾ ಸಂಘದಿಂದ ಅ. ೯ರಂದು ಡಿಡಿಪಿಐ ಬಸವರಾಜ್ ಪಾರಿ ಮೂಲಕ ಮನವಿ ನೀಡಿ, ಒತ್ತಾಯಿಸಲಾಯಿತು.ವಿಜ್ಞಾನದ ಗುಣಾತ್ಮಕ ಫಲಿತಾಂಶ ಕೆಳಮುಖವಾಗುತ್ತಿದೆ. ಹೀಗಾಗಿ ಸೂಕ್ತ ಬದಲಾವಣೆ ಅಗತ್ಯವಾಗಿದ್ದು, ಪಠ್ಯಪುಸ್ತಕದಲ್ಲಿ ಭೌತ, ಜೀವ, ರಸಾಯನ ಶಾಸ್ತ್ರಗಳ ವಿಂಗಡನೆ ಇಲ್ಲದಿದ್ದರೂ ಪ್ರಶ್ನೆಪತ್ರಿಕೆಯಲ್ಲಿ ವಿಭಾಗವಾರು ವಿಂಗಡನೆ ಆಗುತ್ತಿದೆ. ಭೌತಶಾಸ್ತ್ರ ಪ್ರಥಮವಾಗಿ ಆಯ್ಕೆ ಮಾಡಿರುವುದರಿಂದ ಅಲ್ಲಿನ ಪ್ರಶ್ನೆಗಳ ಕಠಿಣತೆ ಹೆಚ್ಚಿದೆ.

ನೀಲನಕ್ಷೆಯಲ್ಲಿ ಘಟಕಗಳ ಬದಲಾಗಿ ಮುಖ್ಯಾಂಶಗಳಿಗೆ ಆದ್ಯತೆ ನೀಡುತ್ತಿರುವುದು, ಕೌಶಲದಲ್ಲಿ ಚಿತ್ರ ಬಿಡಿಸುವ ಪ್ರಶ್ನೆಗಳ ಬದಲಾಗಿ ಚಿತ್ರಗಳಾಧಾರಿತ ಪ್ರಶ್ನೆ ಹೆಚ್ಚುತ್ತಿರುವುದು, ಸಿಬಿಎಸ್ ಮಾದರಿ ಪ್ರಶ್ನೆಗಳನ್ನೇ ಇಲ್ಲಿ ಕೇಳುತ್ತಿರುವುದರಿಂದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಮಾನಸಿಕತೆ ಕುಸಿದಿದೆ ಎಂಬ ಹಲವು ವಿಷಯಗಳನ್ನೂ ಸೇರಿದಂತೆ ೧೫ಕ್ಕೂ ಅಧಿಕ ಉದಾಹರಣೆ ಹಾಗೂ ಬದಲಾವಣೆ ಸಲಹೆಗಳನ್ನು ಮನವಿಯಲ್ಲಿ ವಿವರಿಸಲಾಗಿದೆ.ಈ ಸಂದರ್ಭದಲ್ಲಿ ಅಧ್ಯಕ್ಷ ಅಜಯ ನಾಯಕ, ಕಾರ್ಯದರ್ಶಿ ಆರ್.ಆರ್. ಶೇಟ್, ಪ್ರಮುಖರಾದ ಶೈಕ್ಷಣಿಕ ಜಿಲ್ಲಾ ವಿಜ್ಞಾನ ಬಳಗದ ಅಧ್ಯಕ್ಷ ರಾಜಶೇಖರ್ ಎಂ., ಕಾರ್ಯದರ್ಶಿ ರೀನಾ ನಾಯಕ್ ಹಾಗೂ ಶಿರಸಿ, ಸಿದ್ದಾಪುರ, ಯಲ್ಲಾಪುರ, ಮುಂಡಗೋಡ್, ಹಳಿಯಾಳ, ಜೋಯಿಡಾ ತಾಲೂಕುಗಳ ವಿಜ್ಞಾನ ಬಳಗದ ಅಧ್ಯಕ್ಷರು, ಶಿಕ್ಷಕರಾದ ಸದಾನಂದ ದಬಗಾರ, ಧರ್ಮಾನಂದ, ಗಣೇಶ ಪಟಗಾರ, ಕವಿತಾ ಶೆಟ್, ಜಯಲಕ್ಷ್ಮಿ ಗುನಗಾ, ನಾಗರಾಜ ಪಂಡಿತ್, ನಯನಾ ಭಂಡಾರಿ, ಜಯಲಕ್ಷ್ಮಿ ಹೆಗಡೆ, ಹನುಮಂತಪ್ಪ ಎಸ್.ಆರ್., ಸದಾನಂದ ಡಿ. ವಾಣಿ ಹೆಗಡೆ, ಪ್ರಿಯಾ ಗೌಡ, ಸುಬ್ರಹ್ಮಣ್ಯ ಗೌಡ, ಶೈಲೇಂದ್ರ ಎಂ.ಎಚ್. ಸೇರಿದಂತೆ ಅನೇಕ ವಿಜ್ಞಾನ ಶಿಕ್ಷಕರು ಉಪಸ್ಥಿತರಿದ್ದರು.ಮುರುಡೇಶ್ವರ- ತಿರುಪತಿ ರೈಲು ಸಂಚಾರಕ್ಕೆ ಹರ್ಷ

ಭಟ್ಕಳ: ಮುರುಡೇಶ್ವರ- ತಿರುಪತಿ ರೈಲು ಓಡಾಟ ಆರಂಭಿಸುತ್ತಿರುವುದಕ್ಕೆ ಹರ್ಷ ವ್ಯಕ್ತಪಡಿಸಿರುವ ಮುರುಡೇಶ್ವರ ನಾಗರಿಕ ಸೇವಾ ಸಮಿತಿಯ ಅಧ್ಯಕ್ಷ ಎಸ್.ಎಸ್. ಕಾಮತ್ ಅವರು ಅ. 12ರಂದು ಮಧ್ಯಾಹ್ನ 3 ಗಂಟೆಗೆ ರೈಲಿನ ಪ್ರಾರಂಭೋತ್ಸವ ನಡೆಯಲಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮುರುಡೇಶ್ವರ- ತಿರುಪತಿ ರೈಲು ಸಂಚಾರ ಆರಂಭಗೊಂಡಿರುವುದರಿಂದ ಭಟ್ಕಳ ತಾಲೂಕಿನ ಜನರಿಗೆ ತಿರುಪತಿಗೆ ಹೋಗಿ ಬರಲು ಬಹಳಷ್ಟು ಅನುಕೂಲವಾಗಿದೆ. ಇದರಿಂದ ಮುರುಡೇಶ್ವರದ ಪ್ರವಾಸೋದ್ಯಮವೂ ಬೆಳೆಯಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Share this article