ಗೋಕರ್ಣದಲ್ಲಿ ಸಮುದ್ರ ಸುಳಿಗೆ ಸಿಲುಕಿದ್ದ ವಿದೇಶಿ ಮಹಿಳೆ ರಕ್ಷಣೆ

KannadaprabhaNewsNetwork | Published : Dec 13, 2024 12:45 AM

ಸಾರಾಂಶ

ಫ್ರಾನ್ಸ್‌ನ ಧನ್ಯ(೭೩) ಜೀವಾಪಾಯದಿಂದ ಪಾರಾಗಿ ಬಂದ ಮಹಿಳೆ. ಸಮುದ್ರದಲ್ಲಿ ಈಜಾಡಲು ತೆರಳಿದಾಗ ರಭಸದ ಅಲೆಗೆ ಸಿಲುಕಿದ್ದರು.

ಗೋಕರ್ಣ: ಸಮುದ್ರದ ಸುಳಿಗೆ ಸಿಲುಕಿ ಜೀವಾಪಾಯದಲ್ಲಿದ್ದ ವಿದೇಶಿ ಮಹಿಳೆಯನ್ನು ಜೀವರಕ್ಷಕ ಸಿಬ್ಬಂದಿ ರಕ್ಷಿಸಿದ ಘಟನೆ ಗುರುವಾರ ಸಂಜೆ ನಡೆದಿದೆ. ಫ್ರಾನ್ಸ್‌ನ ಧನ್ಯ(೭೩) ಜೀವಾಪಾಯದಿಂದ ಪಾರಾಗಿ ಬಂದ ಮಹಿಳೆ. ಸಮುದ್ರದಲ್ಲಿ ಈಜಾಡಲು ತೆರಳಿದಾಗ ರಭಸದ ಅಲೆಗೆ ಸಿಲುಕಿದ್ದರು. ಕರ್ತವ್ಯದಲ್ಲಿದ್ದ ಜೀವರಕ್ಷಕ ಸಿಬ್ಬಂದಿಗಳಾದ ನಾಗೇಂದ್ರ ಎಸ್. ಕುರ್ಲೆ, ಪ್ರದೀಪ ಅಂಬಿಗ ಗಮನಿಸಿ ತಕ್ಷಣ ರಕ್ಷಣೆಗೆ ಧಾವಿಸಿದ್ದು, ಇವರಿಗೆ ಮೈಸ್ಟಿಕ್ ವಾಟರ್ ಸ್ಪೋರ್ಟ್ಸ್‌ನ ಸಿಬ್ಬಂದಿ ಜಸ್ಕಿಯೊಂದಿಗೆ ಜತೆಯಾಗಿದ್ದು, ಪ್ರವಾಸಿ ಮಿತ್ರ ಶೇಖರ ಹರಿಕಂತ್ರ ಸಹಾಯದೊಂದಿಗೆ ಮಹಿಳೆಯ ಜೀವ ಉಳಿಸಿದ್ದಾರೆ.

ಕಡಲ ತೀರದಲ್ಲಿ ಕಾನೂನು ಮೀರಿ ವ್ಯಾಪಾರ: ಆರೋಪ

ಕಾರವಾರ: ಇಲ್ಲಿನ ರವೀಂದ್ರನಾಥ ಟಾಗೋರ ಕಡಲ ತೀರದಲ್ಲಿ ವಿವಿಧ ಮಳಿಗೆಗಳನ್ನು ಹಾಕಲಾಗಿದ್ದು, ಕಾನೂನಿನ ಚೌಕಟ್ಟನ್ನು ಮೀರಿ ವ್ಯಾಪಾರ ವಹಿವಾಟು ನಡೆಸುತ್ತಿದ್ದು, ಈ ಬಗ್ಗೆ ಪರಿಶೀಲನೆ ನಡೆಸಬೇಕು ಎಂದು ನಗರದ ವರ್ತಕರ ಪರವಾಗಿ ರಾಜ್ಯ ಸನಾತನ ಧರ್ಮ ರಕ್ಷಣಾ ವೇದಿಕೆಯ ಅಧ್ಯಕ್ಷ ಡಾ. ಗಜೇಂದ್ರ ನಾಯ್ಕ ಆಗ್ರಹಿಸಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೇಂದ್ರ ಸರಕು ಮತ್ತು ಸೇವಾ ತೆರಿಗೆ ಕಾಯಿದೆ(ಜಿಎಸ್‌ಟಿ) ಸೆಕ್ಷನ್ ೨೪(೨) ಅಡಿಯಲ್ಲಿ ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯು ಮೇಳಗಳನ್ನು ನಡೆಸುವುದು ಕಡ್ಡಾಯವಾಗಿ ಜಿಎಸ್‌ಟಿ ನೋಂದಣಿಯನ್ನು ಪಡೆಯಬೇಕಾಗುತ್ತದೆ. ಹಿಂದೆ ನಡೆದ ಮೇಳದಲ್ಲಿ ಜಿಎಸ್‌ಟಿ ಕಾಯಿದೆಯ ನಿಬಂಧನೆಗಳ ಅನುಸರಣೆಯನ್ನು ಖಚಿತಪಡಿಸಿಕೊಳ್ಳದೆ ಜಿಲ್ಲಾಡಳಿತವು ಮಳಿಗೆಗಳನ್ನು ನಡೆಸಲು ಅನುಮತಿ ನೀಡಿರುವುದು ಕಂಡುಬಂದಿದೆ. ಈ ಲೋಪವು ತೆರಿಗೆ ಕಾನೂನುಗಳ ಉಲ್ಲಂಘನೆಯಾಗಿದೆ ಎಂದರು.ಹಿಂದೆ ಹಾಕಿದ್ದ ಮಳಿಗೆಗಳಲ್ಲಿ ಸ್ವಚ್ಛತೆಯನ್ನು ಕಾಯ್ದುಕೊಂಡಿರಲಿಲ್ಲ. ಸಮುದ್ರ ತೀರದಲ್ಲಿ ಕಸವನ್ನು ಹಾಗೆಯೇ ಬಿಡಲಾಗಿತ್ತು. ಸ್ಥಳೀಯ ನಗರಸಭೆ ಸ್ವಚ್ಛತಾ ಕೆಲಸವನ್ನು ಮಾಡಿಲ್ಲ. ಸ್ವಚ್ಛತೆ ಮಾಡಲು ಶುಲ್ಕ ವಿಧಿಸಲಾಗುತ್ತಿದ್ದು, ಅದನ್ನು ಪಾವತಿಸಲಾಗಿದೆಯೇ ಇಲ್ಲವೇ ಎನ್ನುವ ಅನುಮಾನವಿದೆ.ಅಗ್ನಿಶಾಮಕ ದಳ, ಪೊಲೀಸ್ ಇಲಾಖೆ, ಸಿಎಂಸಿಯಿಂದ ಸಲ್ಲಿಸಿದ ಸೇವೆಗಳಿಗೆ ಸರಿಯಾದ ಶುಲ್ಕವನ್ನು ಸಂಗ್ರಹಿಸಬೇಕು. ಇಂತಹ ಕಾರ್ಯಕ್ರಮಗಳನ್ನು ನಡೆಸಲು ಜಿಲ್ಲಾಡಳಿತವು ಅನುಮತಿ ನೀಡಿ ಕರ ವಸೂಲಿ ಮಾಡಲು ವಿಫಲವಾದರೆ ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗುತ್ತದೆ ಎಂದರು.

ಸುಧೀರ ನಾಯ್ಕ, ಮಹಾಬಲೇಶ್ವರ ಮರಾಠಿ, ಸರ್ಪರಾಜ, ನಾಸೀರ ಖಾನ್, ಪರಶುರಾಮ, ಮನೋಜ ನಾಯ್ಕ, ಸೋಹನ್ ಸಾಳುಂಕೆ, ಚಂದ್ರಕಾಂತ ಹರಿಕಂತ್ರ, ಅಬ್ದುಲ್ ಗಫೂರ ಇದ್ದರು.

Share this article