ರೇಷ್ಮೆಗೂಡಿನ ತ್ಯಾಜ್ಯದಲ್ಲಿ 2ನೇ ದರ್ಜೆಯ ಉತ್ಪನ್ನ ತಯಾರಿಸಲು ಸಂಶೋಧನೆ: ಡಾ. ಗಿರಿಧರ್ ಪರ್ವತಂ

KannadaprabhaNewsNetwork |  
Published : Mar 04, 2026, 01:15 AM IST
10 | Kannada Prabha

ಸಾರಾಂಶ

ಸಿಲ್ಕ್ ತೆಗೆದು ಬೀಸಾಡುವ ಗೂಡುಗಳನ್ನು ಬಳಸಿ ಬೇರೆ ಬೇರೆ ಉತ್ಪನ್ನ ತಯಾರಿಕೆ ಮಾಡಬಹುದಾಗಿದೆ. ಅವುಗಳನ್ನು ಪುಡಿ ಮಾಡಿ ಫೌಲ್ಟ್ರಿ ಫಾರಂಗೆ ಫೀಡ್ ಮಾಡಲು ನೀಡಲಾಗುತ್ತದೆ. ಈ ಆಹಾರವನ್ನು ಕೋಳಿಗಳಿಗೆ ನೀಡುವುದರಿಂದ ಮೊಟ್ಟೆ ಹೆಚ್ಚು ಉತ್ಪಾದನೆಯಾಗುತ್ತದೆ. ಅಲ್ಲದೆ, ಕೋಳಿ ಬೆಳವಣಿಗೆಯೂ ಉತ್ತಮವಾಗಿರುತ್ತದೆ.

ಕನ್ನಡಪ್ರಭ ವಾರ್ತೆ ಮೈಸೂರು

ರೇಷ್ಮೆಗೂಡಿನ ತ್ಯಾಜ್ಯದಲ್ಲಿ ಎರಡನೇ ದರ್ಜೆಯ ಉತ್ಪನ್ನಗಳನ್ನು ತಯಾರಿಸುವ ನಿಟ್ಟಿನಲ್ಲಿ ಸಂಶೋಧನೆ ಕೈಗೊಳ್ಳಲಾಗಿದೆ ಎಂದು ಸಿ.ಎಫ್‌.ಟಿ.ಆರ್‌.ಐ ನಿರ್ದೇಶಕ ಡಾ. ಗಿರಿಧರ್ ಪರ್ವತಂ ತಿಳಿಸಿದರು.

ನಗರದ ಎಚ್.ಡಿ. ಕೋಟೆ ರಸ್ತೆ ಉದ್ಬೂರು ಗ್ರಾಮದ ಬಳಿಯ ಅನುಗ್ರಹ ಸಮುದಾಯ ಭವನದಲ್ಲಿ ಕೇಂದ್ರ ರೇಷ್ಮೆ ಸಂಶೋಧನೆ ಮತ್ತು ತರಬೇತಿ ಸಂಸ್ಥೆ, ಕೇಂದ್ರ ರೇಷ್ಮೆ ಮಂಡಳಿ ಮತ್ತು ಕರ್ನಾಟಕ ರಾಜ್ಯ ರೇಷ್ಮೆ ಇಲಾಖೆ ಸಹಯೋಗದೊಂದಿಗೆ ಮಂಗಳವಾರ ಆಯೋಜಿಸಿದ್ದ ಸುಸ್ಥಿರ ರೇಷ್ಮೆಗಾಗಿ ಸುಧಾರಿತ ತಂತ್ರಜ್ಞಾನಗಳು ಕುರಿತು ರೇಷ್ಮೆ ಕೃಷಿ ಮೇಳದಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಿಲ್ಕ್ ತೆಗೆದು ಬೀಸಾಡುವ ಗೂಡುಗಳನ್ನು ಬಳಸಿ ಬೇರೆ ಬೇರೆ ಉತ್ಪನ್ನ ತಯಾರಿಕೆ ಮಾಡಬಹುದಾಗಿದೆ. ಅವುಗಳನ್ನು ಪುಡಿ ಮಾಡಿ ಫೌಲ್ಟ್ರಿ ಫಾರಂಗೆ ಫೀಡ್ ಮಾಡಲು ನೀಡಲಾಗುತ್ತದೆ. ಈ ಆಹಾರವನ್ನು ಕೋಳಿಗಳಿಗೆ ನೀಡುವುದರಿಂದ ಮೊಟ್ಟೆ ಹೆಚ್ಚು ಉತ್ಪಾದನೆಯಾಗುತ್ತದೆ. ಅಲ್ಲದೆ, ಕೋಳಿ ಬೆಳವಣಿಗೆಯೂ ಉತ್ತಮವಾಗಿರುತ್ತದೆ ಎಂದರು.

ರೇಷ್ಮೆ ನೂಲು ತೆಗೆದ ಬಳಿಕ ಉತ್ಪಾದನೆಯಾಗುವ ತ್ಯಾಜ್ಯದಲ್ಲಿ ಪ್ರೋಟೀನ್, ಕಾರ್ಬೋಹೈಡ್ರೇಡ್, ಖನಿಜಾಂಶದ ಗುಣವಿದೆ. ಹೀಗಾಗಿ, ಸಣ್ಣ ಪ್ರಮಾಣದಲ್ಲಿ ರೇಷ್ಮೆಗೂಡಿನ ತ್ಯಾಜ್ಯವನ್ನು ಮೀನಿನ ಆಹಾರಕ್ಕೆ ಉಪಯೋಗಿಸಲಾಗುತ್ತಿದೆ. ರೇಷ್ಮೆ ಗೂಡಿನಲ್ಲಿ ಶೇ.55 ಪ್ರೋಟೀನ್, ಶೇ.35 ಲಿಕ್ವಿಡ್, ಕಾರ್ಬೋಹೈಡ್ರೇಡ್, ಖನಿಜಾಂಶ ಇರುವುದರಿಂದ ಸೆಕೆಂಡರಿ ಪ್ರಾಡಕ್ಸ್ಟ್ ಉತ್ಪಾದಿಸಲು ಸಿ.ಎಫ್‌.ಟಿ.ಆರ್‌.ಐ, ಸಿ.ಎಸ್‌.ಐ.ಆರ್‌.ಟಿ ಒಡಂಬಡಿಕೆ ಮಾಡಿಕೊಂಡು ಸಂಶೋಧನೆಯಲ್ಲಿ ತೊಡಗಿದೆ ಎಂದು ಅವರು ಹೇಳಿದರು.

ಭಾರತವು ಕೊರತೆ ಇರುವ ಪ್ರಮಾಣದ ರೇಷ್ಮೆಯನ್ನು ಹೊರದೇಶಗಳಿಂದ ಆಮದು ಮಾಡಿಕೊಳ್ಳುವುದನ್ನು ತಪ್ಪಿಸಲು, ರೇಷ್ಮೆ ಕೃಷಿಕರು ನೂತನ ತಂತ್ರಜ್ಞಾನ ಅಳವಡಿಕೆ ಮಾಡಿಕೊಂಡು ಉತ್ಪಾಧನೆ ಹೆಚ್ಚಿಸಬೇಕು. ರೇಷ್ಮೆ ಸಮ್ಮೇಳನದಲ್ಲಿ ತಾಂತ್ರಿಕ ಅಳವಡಿಕೆ, ಜ್ಞಾನ ವರ್ಗಾವಣೆ, ಶಿಕ್ಷಣ, ನಾವಿನ್ಯತೆ ಪ್ರದರ್ಶನ, ನೆಟ್ವರ್ಕಿಂಗ್, ಆರ್ಥಿಕ ಸಬಲೀಕರಣ ಉದ್ದೇಶ ಸಾರುವ ಕಾರ್ಯಕ್ರಮ ರೂಪಿಸಿದ್ದು, ಇಲ್ಲಿ ತಜ್ಞರು ನೀಡಿದ ಸಲಹೆಯನ್ನು ರೇಷ್ಮೆ ಕೃಷಿಯಲ್ಲಿ ಅಳವಡಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.

430 ಕೋಟಿ ಅನುದಾನಕ್ಕೆ ವರದಿ:

ರೇಷ್ಮೆ ಇಲಾಖೆಯ ಹೆಚ್ಚುವರಿ ನಿರ್ದೇಶಕ ವೈ.ಟಿ. ತಿಮ್ಮಯ್ಯ ಮಾತನಾಡಿ, ರೇಷ್ಮೆ ಕೃಷಿಕರ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಇಲಾಖೆ ಪ್ರಯತ್ನಿಸುತ್ತಿದೆ. ರಾಷ್ಟ್ರದ ಉತ್ಪಾದನೆಯಲ್ಲಿ ಕರ್ನಾಟಕ ಶೇ.43 ರಷ್ಟು ರೇಷ್ಮೆ ಉತ್ಪಾದಿಸಿ ದೇಶದಲ್ಲಿಯೇ ಮುಂಚೂಣಿಯಲ್ಲಿದೆ ಎಂದರು.

ಕೊರೊನಾ ಸಂದರ್ಭದಲ್ಲಿ 2020ರಲ್ಲಿ ನಮ್ಮ ಇಲಾಖೆ ನೌಕರರು ಕೆಲಸ ಮಾಡಿ, ರೇಷ್ಮೆ ಬೆಳೆಗಾರರ ಹಿತ ಕಾಪಾಡಿದ್ದಾರೆ. ಇಲಾಖೆ ಸಾಕಷ್ಟು ಕಾರ್ಯಕ್ರಮ ಹಮ್ಮಿಕೊಂಡು ಪ್ರತಿ ವರ್ಷ 200 ಕೋಟಿ ರೂ. ಸಹಾಯ ಧನ ವಿತರಣೆ ಮಾಡಲಾಗಿದೆ. ಸಮಗ್ರ ಭೂ ಯೋಜನೆಯಡಿ 430 ಕೋಟಿ ರೂ ನೀಡಲು ವರದಿ ಕೊಡಲಾಗಿದೆ ಎಂದು ಅವರು ಹೇಳಿದರು.

ರೇಷ್ಮೆ ಕೃಷಿ ಸೂಕ್ಷ್ಮವಾದ ಕೃಷಿಯಾಗಿದ್ದು, ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇದೆ. ಈ ಹಿಂದೆ 4299 ಮಂಜೂರಾತಿ ಹುದ್ದೆ ಸೇರಿ 6- 7 ಸಾವಿರ ಮಂದಿ ಕೆಲಸ ಮಾಡುತ್ತಿದ್ದರು. ಇಂದು ಕೇವಲ 1200 ಸಿಬ್ಬಂದಿ ಇದ್ದೇವೆ. ಅದರಲ್ಲಿ 650 ಮಂದಿ ಮಾತ್ರ ತಾಂತ್ರಿಕ ಸಿಬ್ಬಂದಿ ಇದ್ದಾರೆ. ಇವರನ್ನೇ ಇಟ್ಟುಕೊಂಡು ಇಲಾಖೆಯನ್ನು ಮುಂಚೂಣಿಯಲ್ಲಿ ಕೊಂಡೊಯ್ಯವ ಕೆಲಸ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು. ರೇಷ್ಮೆ ಕೃಷಿ ಮೇಳದಲ್ಲಿ ವಸ್ತುಪ್ರದರ್ಶನವನ್ನು ಕೇಂದ್ರ ರೇಷ್ಮೆ ಮಂಡಳಿಯ ಹಣಕಾಸು ನಿರ್ದೇಶಕ ಪಿ.ಎಸ್. ಗಿರೀಶ್ ಉದ್ಘಾಟಿಸಿದರು.

ಇದೇ ವೇಳೆ 4 ಒಡಂಬಡಿಕೆಗಳಿಗೆ ಸಹಿ ಹಾಕಲಾಯಿತು. ಯೂಟ್ಯೂಬ್ ಚಾನೆಲ್‌ ಗೆ ಚಾಲನೆ ನೀಡಲಾಯಿತು. ಪ್ರಗತಿಪರ ರೈತರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. 16 ರೇಷ್ಮೆ ಪಾಲುದಾರ ಸಂಸ್ಥೆಗಳು ಭಾಗವಹಿಸಿದ್ದವು. 1500 ರೈತರು, ವಿಜ್ಞಾನಿಗಳು, ಅಧಿಕಾರಿಗಳು, ಯೋಜನೆಯ ಸಹಾಯಕರು ಭಾಗವಹಿಸಿದ್ದರು.

ಕೇಂದ್ರ ರೇಷ್ಮೆ ಮಂಡಳಿ ಸದಸ್ಯ ಬಿ.ಎಸ್. ನಂಜುಂಡಸ್ವಾಮಿ, ಕೇಂದ್ರ ರೇಷ್ಮೆ ಸಂಶೋಧನೆ ಮತ್ತು ತರಬೇತಿ ಸಂಸ್ಥೆಯ ನಿರ್ದೇಶಕಿ ಡಾ.ಪಿ. ದೀಪಾ ಮೊದಲಾದವರು ಇದ್ದರು.

ಕೇಂದ್ರ ರೇಷ್ಮೆ ಸಂಶೋಧನೆ ಮತ್ತು ತರಬೇತಿ ಸಂಸ್ಥೆಯು ರೈತರಿಗಾಗಿ ಹಲವಾರು ತಂತ್ರಜ್ಞಾನಗಳನ್ನು ಸಂಶೋಧಿಸಿದೆ. ಇಂದು ಉತ್ತಮವಾದ ರೇಷ್ಮೆ ಗೂಡು ಸಿಗುತ್ತಿಲ್ಲ, ಗೂಡಿಗೆ ತುಂಬಾ ಬೇಡಿಕೆ ಇದೆ. ಹೀಗಾಗಿ, ರೈತರು ರೇಷ್ಮೆ ಬೆಳೆ ಬೆಳೆಯಬೇಕು. ರೇಷ್ಮೆ ಮನೆಗೆ ಮತ್ತು ಯಂತ್ರಗಳಿಗೆ ನೀಡುವ ಸಹಾಯಧನ ಹೆಚ್ಚಿಸಲು ಚರ್ಚೆಯಲ್ಲಿದೆ.

- ಪಿ.ಎಸ್. ಗಿರೀಶ್, ನಿರ್ದೇಶಕ, ಹಣಕಾಸು, ಕೇಂದ್ರ ರೇಷ್ಮೆ ಮಂಡಳಿಬೇರೆ ಬೆಳೆಗಳಿಗೆ ಹೋಲಿಸಿದರೆ ರೇಷ್ಮೆ ತುಂಬಾ ಸುಲಭ ಮತ್ತು ಲಾಭದಾಯಕ. ನಮ್ಮ ಸಂಸ್ಥೆಯು ಸದಾ ರೈತರಿಗೆ ಬೆನ್ನೆಲುಬಾಗಿ ನಿಂತು ತಾಂತ್ರಿಕತೆಗಳ ಆವಿಷ್ಕಾರ ಮತ್ತು ಅವುಗಳನ್ನು ರೈತರಿಗೆ ಮುಟ್ಟಿಸುವ ಕಾರ್ಯ ಮಾಡುತ್ತಿದೆ.

- ಡಾ.ಪಿ. ದೀಪಾ, ನಿರ್ದೇಶಕಿ, ಕೇಂದ್ರ ರೇಷ್ಮೆ ಸಂಶೋಧನೆ ಮತ್ತು ತರಬೇತಿ ಸಂಸ್ಥೆ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಜೆಟ್‌ನಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ನಿರೀಕ್ಷೆಗಳೇನು?
ಕೇಂದ್ರ ಸರ್ಕಾರದ 4 ಕಾರ್ಮಿಕ ಸಂಹಿತೆಗಳನ್ನು ಹಿಂಪಡೆಯಲು ಆಗ್ರಹಿಸಿ ಸಿಐಟಿಯು ಪ್ರತಿಭಟನೆ