ಗ್ರಾಪಂನಿಂದ ಅಸೆಂಬ್ಲಿವರೆಗೂ ಮಾದಿಗರಿಗೆ ಒಳಮೀಸಲಾತಿ: ಮುನಿಯಪ್ಪ

KannadaprabhaNewsNetwork |  
Published : Sep 14, 2025, 01:04 AM IST
13ಕೆಡಿವಿಜಿ1-ದಾವಣಗೆರೆಯಲ್ಲಿ ಶನಿವಾರ ಜಿಲ್ಲಾ ಮಾದಿಗ ಮಹಾಸಭಾ ಹಮ್ಮಿಕೊಂಡಿದ್ದ ಒಳ ಮೀಸಲಾತಿ ವಿಜಯೋತ್ಸವ ಉದ್ಘಾಟಿಸಿದ ಸಚಿವ ಕೆ.ಎಚ್.ಮುನಿಯಪ್ಪ, ಮಾಜಿ ಸಚಿವ ಎಚ್.ಆಂಜನೇಯ, ಶಾಸಕರಾದ ಡಿ.ಜಿ.ಶಾಂತನಗೌಡ, ಕೆ.ಎಸ್.ಬಸವಂತಪ್ಪ. ................13ಕೆಡಿವಿಜಿ2, 3-ದಾವಣಗೆರೆಯಲ್ಲಿ ಶನಿವಾರ ಜಿಲ್ಲಾ ಮಾದಿಗ ಮಹಾಸಭಾ ಹಮ್ಮಿಕೊಂಡಿದ್ದ ಒಳ ಮೀಸಲಾತಿ ವಿಜಯೋತ್ಸವದಲ್ಲಿ ಸಚಿವ ಕೆ.ಎಚ್.ಮುನಿಯಪ್ಪ, ಮಾಜಿ ಸಚಿವ ಎಚ್.ಆಂಜನೇಯ, ಶಾಸಕರಾದ ಡಿ.ಜಿ.ಶಾಂತನಗೌಡ, ಕೆ.ಎಸ್.ಬಸವಂತಪ್ಪ ಇತರರಿಗೆ ಸನ್ಮಾನಿಸಲಾಯಿತು. | Kannada Prabha

ಸಾರಾಂಶ

ಗ್ರಾಮ ಪಂಚಾಯಿತಿಯಿಂದ ಹಿಡಿದು ವಿಧಾನಸಭೆವರೆಗೂ ಉದ್ಯೋಗ, ಬಡ್ತಿ ಸೇರಿದಂತೆ ವಿವಿಧ ಹಂತದಲ್ಲಿ ಮಾದಿಗರಿಗೆ ಒಳಮೀಸಲಾತಿ ವರ್ಗೀಕರಣ ಅನ್ವಯವಾಗಲಿದೆ. ಇದರಿಂದ ಸಮಾಜಕ್ಕೆ ಹೆಚ್ಚು ಅವಕಾಶ ಸಿಗಲಿದೆ ಎಂದು ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ ಕೆ.ಎಚ್‌.ಮುನಿಯಪ್ಪ ಹೇಳಿದ್ದಾರೆ.

- ದಾವಣಗೆರೆಯಲ್ಲಿ ಜಿಲ್ಲಾ ಮಾದಿಗ ಮಹಾಸಭಾದಿಂದ ಒಳಮೀಸಲಾತಿ ವಿಜಯೋತ್ಸವ ಸಮಾರಂಭ ।

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಗ್ರಾಮ ಪಂಚಾಯಿತಿಯಿಂದ ಹಿಡಿದು ವಿಧಾನಸಭೆವರೆಗೂ ಉದ್ಯೋಗ, ಬಡ್ತಿ ಸೇರಿದಂತೆ ವಿವಿಧ ಹಂತದಲ್ಲಿ ಮಾದಿಗರಿಗೆ ಒಳಮೀಸಲಾತಿ ವರ್ಗೀಕರಣ ಅನ್ವಯವಾಗಲಿದೆ. ಇದರಿಂದ ಸಮಾಜಕ್ಕೆ ಹೆಚ್ಚು ಅವಕಾಶ ಸಿಗಲಿದೆ ಎಂದು ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ ಕೆ.ಎಚ್‌.ಮುನಿಯಪ್ಪ ಹೇಳಿದರು.

ನಗರದ ಪಾಲಿಕೆ ಆವರಣದಲ್ಲಿ ಶನಿವಾರ ಶ್ರೀಮತಿ ರಾಧಮ್ಮ ಚನ್ನಗಿರಿ ರಂಗಪ್ಪ ಬಯಲು ರಂಗಮಂದಿರದಲ್ಲಿ ಜಿಲ್ಲಾ ಮಾದಿಗ ಮಹಾಸಭಾ ಹಮ್ಮಿಕೊಂಡಿದ್ದ ಒಳಮೀಸಲಾತಿ ವಿಜಯೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಒಳಮೀಸಲಾತಿ ವರ್ಗೀಕರಣ ಸೌಲಭ್ಯ ಸಮಾಜ ಬಾಂಧವರು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ಮಾದಿಗ ಸಮುದಾಯಕ್ಕೆ ಶೇ.6 ಮೀಸಲಾತಿ ಸಿಕ್ಕಿತೆಂದು ಮೈಮರೆಯಬೇಡಿ. ಅದೇ ರೀತಿ ರಾಜ್ಯದ ಅಲೆಮಾರಿ ಸಮುದಾಯಗಳಿಗೆ ಒಳಮೀಸಲಾತಿ ನೀಡಿಕೆಯಲ್ಲಿ ನ್ಯಾಯ ಒದಗಿಸಲು ನಮ್ಮ ಸರ್ಕಾರ ಗಂಭೀರ ಚಿಂತನೆ ನಡೆಸಿದೆ. ಶೋಷಿತರಲ್ಲೇ ಶೋಷಿತವಾದ ಅಲೆಮಾರಿಗಳಿಗೆ ನ್ಯಾಯ ಕೊಡುವ ಬಗ್ಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ, ಸಚಿವರಾದ ಡಾ.ಜಿ.ಪರಮೇಶ್ವರ, ಡಾ. ಎಚ್.ಸಿ.ಮಹದೇವಪ್ಪ, ಪ್ರಿಯಾಂಕ ಖರ್ಗೆ, ಶಿವರಾಜ ತಂಗಡಗಿ ಸೇರಿದಂತೆ ನಾವೆಲ್ಲಾ ಗಂಭೀರ ಚರ್ಚೆ ನಡೆಸಿದ್ದೇವೆ ಎಂದು ಹೇಳಿದರು.

ಮೊಸರಲ್ಲಿ ಕಲ್ಲು ಹುಡುಕುವ ಕೆಲಸ:

ಒಳಮೀಸಲಾತಿ ವಿಚಾರದಲ್ಲಿ ವಿಪಕ್ಷಗಳು ಅದರಲ್ಲೂ ಬಿಜೆಪಿ ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದೆ. ಸಾಧ್ಯವಾದರೆ ಸಲಹೆ ಕೊಡಿ. ಆದರೆ, ಸಮುದಾಯಗಳನ್ನು ಜಾರಿ ತಪ್ಪಿಸುವ ಕೆಲಸ ಮಾಡಬೇಡಿ. ನ್ಯಾಯಮೂರ್ತಿ ಸದಾಶಿವ ಆಯೋಗ, ಮಾಧುಸ್ವಾಮಿ ಆಯೋಗ, ನಾಗಮೋಹನ ದಾಸ್, ಹಾವನೂರು ಸೇರಿದಂತೆ ಆಯೋಗಗಳು ಮಾದಿಗರ ಸಂಖ್ಯೆ ರಾಜ್ಯದಲ್ಲಿ ಹೆಚ್ಚಾಗಿರುವ ಬಗ್ಗೆ ವರದಿ ನೀಡಿವೆ. ಸಿಎಂ ಸಿದ್ದರಾಮಯ್ಯ ಸರ್ಕಾರ ಎಸ್‌ಸಿ ಕಮಿಷನ್ ಜಾರಿಗೆ ತೀರ್ಮಾನಿಸಿದೆ. ಆಗಾಗ್ಗೆ ಅದರಲ್ಲಿ ಬದಲಾವಣೆಯೂ ಆಗಲಿದೆ ಎಂದು ಸಚಿವರು ಮಾಹಿತಿ ನೀಡಿದರು.

ಪರಿಶಿಷ್ಟ ಜಾತಿಯ 101 ಜಾತಿಗಳೂ ಸೆ.22ರಿಂದ ಆರಂಭವಾದ ಜಾತಿಗಣತಿಯಲ್ಲಿ ತಮ್ಮ ಜಾತಿ, ಮೂಲ ಜಾತಿಯನ್ನು ಸ್ಪಷ್ಟವಾಗಿ ಬರೆಸಬೇಕು. 12 ಲಕ್ಷ ಜನ ಜಾತಿಗಣತಿಯಲ್ಲಿ ಸರಿಯಾಗಿ ಬರೆಸಿಲ್ಲ. ಈಗ ಜಾತಿಗಣತಿಯಲ್ಲಿ ಬರೆಸಿ. ಶೀಘ್ರದಲ್ಲೇ ಕೇಂದ್ರದಿಂದಲೂ ಜಾತಿಗಣತಿ ಶುರುವಾಗಲಿದೆ. ಬಿಟ್ಟು ಹೋಗಿರುವ 12 ಲಕ್ಷ ಜನರು ಪರಿಶಿಷ್ಟ ಜಾತಿಯ ತಮ್ಮ ಮೂಲ ಜಾತಿಯ ಹೆಸರು ದಾಖಲಿಸಿದರೆ ಮೀಸಲಾತಿ ಪ್ರಮಾಣವೂ ಹೆಚ್ಚಾಗುತ್ತದೆ. ಅದು ಮಾದಿಗ ಇರಬಹುದು, ಅಲೆಮಾರಿ ಅಥವಾ ಬೇರಾವುದೇ ಸೋದರ ಸಮಾಜವಾದರೂ ಆಗಿರಬಹುದು ಎಂದು ಮುನಿಯಪ್ಪ ತಿಳಿಸಿದರು.

ಬಸವರಾಜ ಬೊಮ್ಮಾಯಿ, ಗೋವಿಂದ ಕಾರಜೋಳ ಬಿಜೆಪಿ ಸರ್ಕಾರವಿದ್ದಾಗಲೇ ಒಳಮೀಸಲಾತಿಗೆ ಶಿಫಾರಸು ಮಾಡಿದ್ದಾರೆ. ಆದರೆ, ಇಂದು ಅದೇ ಬಿಜೆಪಿ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ. ಸಿಎಂ ಸಿದ್ದರಾಮಯ್ಯ ತಿಪ್ಪೆ ಸಾರಿಸುವ ಕೆಲಸ ಮಾಡುತ್ತಿದ್ದಾರೆಂಬುದಾಗಿ ಆರೋಪಿಸುತ್ತಿದೆ. ನೀವು ಸದಾಶಿವ ಆಯೋಗದ ವರದಿ ತಿರಸ್ಕರಿಸಿದ್ದೀರಿ. ಸಂಘಟನೆಗಳು ಆಯೋಗದ ವರದಿ ಜಾರಿಗೆ ಹೋರಾಡಿದವು. ಆದರೆ, ನೀವು ತಿರಸ್ಕರಿಸಿ, ವರದಿ ಮೂಲೆಗೆ ತಳ್ಳಿದಿರಿ. ಆದರೆ, ಅದನ್ನು ತೆಗೆದುಕೊಂಡೇ ಕಾಂಗ್ರೆಸ್ ಸರ್ಕಾರ ಒಳಮೀಸಲಾತಿ ಜಾರಿ ಮಾಡಿದೆ. ಶೋಷಿತರಿಗೆ ಒಳಮೀಸಲಾತಿ ಜಾರಿ ಮೂಲಕ ಸಾಮಾಜಿಕ ನ್ಯಾಯ ಒದಗಿಸಲು ಕಾಂಗ್ರೆಸ್ ಬದ್ಧತೆ ಮೆರೆದಿದೆ ಎಂದು ಹೇಳಿದರು.

ಮಾಜಿ ಸಚಿವ ಎಚ್.ಆಂಜನೇಯ ಮಾತನಾಡಿ, ಮೂರೂವರೆ ದಶಕದ ಸುದೀರ್ಘ ಹೋರಾಟದ ಫಲವಾಗಿ ಒಳಮೀಸಲಾತಿ ಸಿಕ್ಕಿದೆ. ಬಾಬು ಜಗಜೀವನರಾಂ ನಂತರ ರಾಷ್ಟ್ರದ ಎಡಗೈ ಸಮುದಾಯದ ನಾಯಕರಾಗಿದ್ದ ಕೆ.ಎಚ್. ಮುನಿಯಪ್ಪ ರಾಷ್ಟ್ರಮಟ್ಟದ ರಾಜಕಾರಣದಲ್ಲಿ ಗುರುತಿಸಿಕೊಂಡಿದ್ದರೂ, ರಾಜ್ಯ ರಾಜಕಾರಣಕ್ಕೆ ಪ್ರವೇಶಿಸಿದ್ದು ಒಳಮೀಸಲಾತಿ ಸಿಗಲು ಮಹತ್ವದ ಪಾತ್ರ ವಹಿಸಿತು. ಸಾಮಾಜಿಕ ನ್ಯಾಯದ ಹರಿಕಾರ, ಹಿಂದುಳಿದ ವರ್ಗಗಳ ಚಾಂಪಿಯನ್ ಸಿದ್ದರಾಮಯ್ಯ ಹಾಗೂ ರಾಜ್ಯ ಸರ್ಕಾರ ಒಳ ಮೀಸಲಾತಿ ಜಾರಿಗೊಳಿಸಿದ್ದಕ್ಕೆ ಇಡೀ ಸಮುದಾಯದ ಪರವಾಗಿ ಅಭಿನಂದಿಸುತ್ತೇವೆ ಎಂದರು.

ಶಾಸಕ ಡಿ.ಡಿ.ಶಾಂತನಗೌಡ ಸಮಾರಂಭ ಉದ್ಘಾಟಿಸಿದರು. ರಾಜ್ಯಸಭೆ ಮಾಜಿ ಸದಸ್ಯ ಎಲ್.ಹನುಮಂತಯ್ಯ, ಶಾಸಕರಾದ ಕೆ.ಎಸ್. ಬಸವಂತಪ್ಪ, ಮಾಜಿ ಸಂಸದ ಚಂದ್ರಪ್ಪ, ಮೈಸೂರು ಮುಕ್ತ ವಿವಿ ಪರೀಕ್ಷಾಂಗ ಕುಲಪತಿ ಡಾ. ಎಚ್.ವಿಶ್ವನಾಥ, ಹಿರಿಯ ನಾಯಕರಾದ ಬಿ.ಎಚ್. ವೀರಭದ್ರಪ್ಪ, ಎಲ್.ಎಂ. ಹನುಮಂತಪ್ಪ, ನಿವೃತ್ತ ಎಸ್‌ಪಿ ರವಿನಾರಾಯಣ, ಹೆಗ್ಗೆರೆ ರಂಗಪ್ಪ, ಸಿ.ಬಸವರಾಜ, ಕೆ.ಎಸ್. ಗೋವಿಂದರಾಜ, ಕುಂದುವಾಡ ಮಂಜುನಾಥ, ಎಲ್.ಡಿ.ಗೋಣೆಪ್ಪ, ಹರಿಹರ ಎಚ್.ಮಲ್ಲೇಶ, ಹನುಮಂತಪ್ಪ, ಎಸ್.ಮಲ್ಲಿಕಾರ್ಜುನ, ಶಾಂತಿ ನಗರ ಮಂಜುನಾಥ, ಲಿಂಗರಾಜ ಗಾಂಧಿ ನಗರ, ಕಡತಿ ಅಂಜಿನಪ್ಪ, ರವಿವರ್ಮ, ಉದಯಕುಮಾರ, ರಾಕೇಶ ಗಾಂಧಿ ನಗರ, ಎಲ್.ಎಚ್.ಸಾಗರ, ನಿರಂಜನ, ಶಾಮನೂರು ಅಂಜಿನಪ್ಪ, ರಂಗಸ್ವಾಮಿ, ಶಿವಮೂರ್ತಿ, ಮಾನಸ ತಿಪ್ಪೇಶ ಇತರರು ಇದ್ದರು.

- - -

-13ಕೆಡಿವಿಜಿ1: ದಾವಣಗೆರೆಯಲ್ಲಿ ಶನಿವಾರ ಜಿಲ್ಲಾ ಮಾದಿಗ ಮಹಾಸಭಾ ಹಮ್ಮಿಕೊಂಡಿದ್ದ ಒಳಮೀಸಲಾತಿ ವಿಜಯೋತ್ಸವ ಕಾರ್ಯಕ್ರಮವನ್ನು ಶಾಸಕ ಡಿ.ಜಿ.ಶಾಂತನಗೌಡ ಉದ್ಘಾಟಿಸಿದರು. ಸಚಿವ ಕೆ.ಎಚ್.ಮುನಿಯಪ್ಪ, ಮಾಜಿ ಸಚಿವ ಎಚ್.ಆಂಜನೇಯ,, ಕೆ.ಎಸ್.ಬಸವಂತಪ್ಪ ಇತರರು ಇದ್ದರು.-13ಕೆಡಿವಿಜಿ2, 3: ದಾವಣಗೆರೆಯಲ್ಲಿ ಶನಿವಾರ ಜಿಲ್ಲಾ ಮಾದಿಗ ಮಹಾಸಭಾ ಹಮ್ಮಿಕೊಂಡಿದ್ದ ಒಳ ಮೀಸಲಾತಿ ವಿಜಯೋತ್ಸವದಲ್ಲಿ ಸಚಿವ ಕೆ.ಎಚ್.ಮುನಿಯಪ್ಪ, ಮಾಜಿ ಸಚಿವ ಎಚ್.ಆಂಜನೇಯ, ಶಾಸಕರಾದ ಡಿ.ಜಿ.ಶಾಂತನಗೌಡ, ಕೆ.ಎಸ್.ಬಸವಂತಪ್ಪ ಇತರರನ್ನು ಸನ್ಮಾನಿಸಲಾಯಿತು.

PREV

Recommended Stories

ದಸರಾ ಹಬ್ಬ ಅದ್ಧೂರಿ ಆಚರಣೆಗೆ ಎಲ್ಲರೂ ಸಹಕರಿಸಿ: ಏಗಪ್ಪ ಸವದಿ
ಬಿಡಿಸಿಸಿ ಬ್ಯಾಂಕ್‌ ಹಿತರಕ್ಷಣೆಗೆ ನಾವು ಬದ್ಧ