ಚಿತ್ರದುರ್ಗ : ಮಹಿಳೆಯರಿಗೆ ಶೇ.50 ರಷ್ಟು ಮೀಸಲಾತಿ ಕಲ್ಪಿಸುವುದು ಅಗತ್ಯ - ಡಾ.ನಾಗಲಕ್ಷ್ಮಿ ಚೌಧರಿ

KannadaprabhaNewsNetwork |  
Published : Feb 06, 2025, 12:18 AM ISTUpdated : Feb 06, 2025, 01:20 PM IST
ಚಿತ್ರದುರ್ಗ ಎರಡನೇ ಪುಟದ ಲೀಡ್     | Kannada Prabha

ಸಾರಾಂಶ

ಚಿತ್ರದುರ್ಗದ ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ನಡೆದ ಉಪನ್ಯಾಸ-ಸಂವಾದವನ್ನು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಉದ್ಘಾಟಿಸಿದರು.

 ಚಿತ್ರದುರ್ಗ : ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಒದಗಿಸದರೆ ಸಾಲದು, ಇದರ ಪ್ರಮಾಣ ಕನಿಷ್ಟ 50 ರಷ್ಟಿರಬೇಕು ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿಚೌಧರಿ ಪ್ರತಿಪಾದನೆ ಮಾಡಿದರು.

ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ಮಹಿಳೆಯರ ಸಬಲೀಕರಣ ಎತ್ತ ಸಾಗಿದೆ ಎಂಬ ವಿಚಾರ ಕುರಿತ ಉಪನ್ಯಾಸ-ಸಂವಾದ ಉದ್ಘಾಟಿಸಿ ಮಾತನಾಡಿದ ಅವರು, ಹೆಣ್ಣು ಮೀಸಲಾತಿ ಬೇಡಬಾರದು ಕಿತ್ತುಕೊಳ್ಳಬೇಕು. ಶೋಷಣೆಯನ್ನು ಮೆಟ್ಟಿ ನಿಲ್ಲಬೇಕಾದರೆ ಮೊದಲು ಹೆಣ್ಣು ಶಿಕ್ಷಣವಂತಳಾಗಿ ಸ್ವಾವಲಂಭಿ ಬದುಕು ಕಟ್ಟಿಕೊಳ್ಳಬೇಕು ಎಂದು ಹೇಳಿದರು.

ಮಹಿಳೆಯ ಪರ ನಿಲ್ಲದ ಯಾವ ಸರ್ಕಾರವೇ ಇರಲಿ, ಚುನಾವಣೆಯಲ್ಲಿ ಮಂಡಿಯೂರಿಸಿ ಮನೆಗೆ ಕಳಿಸುವ ಶಕ್ತಿ ಹೆಣ್ಣಿಗಿದೆ. ಸಿಎಂ ಸಿದ್ದರಾಮಯ್ಯನವರು ನೀಡಿರುವ ಐದು ಉಚಿತ ಗ್ಯಾರಂಟಿಗಳು ಹೆಣ್ಣನ್ನು ಸಬಲೀಕರಣಗೊಳಿಸುತ್ತಿದೆ. ಗೃಹಲಕ್ಷ್ಮಿ ಬಾಳು ಕೊಟ್ಟಿದೆ. ಸರ್ಕಾರದಲ್ಲಿ ಏನೆಲ್ಲಾ ಯೋಜನೆಗಳಿದೆ. ಎಷ್ಟು ಸಬ್ಸಿಡಿ ಸಿಗುತ್ತದೆ. ಜಿಲ್ಲಾಧಿಕಾರಿಯಿಂದ ಹಿಡಿದು ಜಿಲ್ಲಾ ಮಟ್ಟದ ಅಧಿಕಾರಿಗಳು ಯಾರ್ಯಾರಿದ್ದಾರೆನ್ನುವುದನ್ನು ತಿಳಿದುಕೊಳ್ಳಬೇಕು. ಸರ್ಕಾರವೆಂದರೆ ಜನ. ಅಧಿಕಾರಿಗಳೆಂದರೆ ಜನರ ಸೇವಕರು ಎನ್ನುವುದನ್ನು ವಿದ್ಯಾರ್ಥಿಗಳು ಮೊದಲು ತಿಳಿದುಕೊಂಡಿರಬೇಕು ಎಂದರು.

ವಿದ್ಯಾರ್ಥಿನಿಯರಿಗೆ ಏನಾದರೂ ತೊಂದರೆಯಾದರೆ ರಕ್ಷಣೆಗೆ ಕಾವಲು ಸಮಿತಿಯಿದೆ. ಶಿಕ್ಷಣವೆಂದರೆ ಕೇವಲ ಪುಸ್ತಕ, ಪದವಿಯಲ್ಲ. ಜ್ಞಾನ, ತಾಳ್ಮೆ, ಸೇವೆ, ದೇಶಭಕ್ತಿಯೇ ನಿಜವಾದ ಶಿಕ್ಷಣ. ಹೆಣ್ಣಿಗೆ ಜೀವನದಲ್ಲಿ ಗೌರವ, ಪ್ರೋತ್ಸಾಹ, ಅವಕಾಶ ಸಿಗಬೇಕು. ಯಾರಾದರೂ ದೌರ್ಜನ್ಯ, ದಬ್ಬಾಳಿಕೆ, ಹಲ್ಲೆ, ಲೈಂಗಿಕ ಕಿರುಕುಳ ನೀಡಿದರೆ ಹೆದರುವ ಅಗತ್ಯವಿಲ್ಲ. ಧೈರ್ಯದಿಂದ ಪೊಲೀಸ್ ಠಾಣೆಗೆ ಹೋಗಿ ದೂರು ಸಲ್ಲಿಸಿ. ಶಿಕ್ಷಣ ಪಡೆದು ಹೆಣ್ಣು ಮನೆಯಲ್ಲಿ ಕುಳಿತರೆ ಪ್ರಯೋಜನವಿಲ್ಲ. ಕೆಲಸ ಮಾಡಿ ಹಣ ಸಂಪಾದಿಸಿ ತನ್ನ ಕಾಲ ಮೇಲೆ ತಾನು ನಿಂತಾಗ ಜೀವನದಲ್ಲಿ ಎಂತಹ ಸಮಸ್ಯೆ, ಸವಾಲು ಎದುರಾದರೂ ಮೆಟ್ಟಿ ನಿಲ್ಲಬಹುದು ಎಂದು ಡಾ.ನಾಗಲಕ್ಷ್ಮಿ ಹೇಳಿದರು.ಪ್ರತಿ 5 ಸೆಕೆಂಡಿಗೊಂದು ಸೈಬರ್ ಕ್ರೈಂ ನಡೆಯುತ್ತಿದೆ. ಮೊಬೈಲ್ ಫೋನ್‍ಗಳಿಂದ ಅಪರಾಧಗಳು ಹೆಚ್ಚುತ್ತಿವೆ. ಭಯಪಟ್ಟರೆ ಶೋಷಣೆ ನಿಲ್ಲುವುದಿಲ್ಲ. ಸಮಯ ಬಂದಾಗ ಪ್ರಶ್ನೆ ಮಾಡುವ ಎದೆಗಾರಿಕೆ ಬೆಳೆಸಿಕೊಳ್ಳಿ. ಸ್ವಾವಲಂಭಿಗಳಾಗುವತನಕ ವಿವಾಹವಾಗಬೇಡಿ ಎಂದರು.

ಹೊಸದುರ್ಗ ಬ್ರಹ್ಮವಿದ್ಯಾನಗರ ಭಗೀರಥಪೀಠದ ಡಾ.ಪುರುಷೋತ್ತಮಾನಂದಪುರಿ ಸ್ವಾಮೀಜಿ ಆಶೀರ್ವಚನ ನೀಡಿ, ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಮಹಿಳೆಯರ ಶೋಷಣೆ ನಿಲ್ಲುತ್ತಿಲ್ಲ. ಹೆಣ್ಣನ್ನು ತಾಯಿ ಸ್ವರೂಪಿಯಂತೆ ಕಾಣಬೇಕು. ಶೇ.50ರಷ್ಟು ಮೀಸಲಾತಿ ಪಡೆದುಕೊಳ್ಳುವ ಹಕ್ಕು ಹೆಣ್ಣಿಗಿದೆ. ಹೆಣ್ಣು ಮಾರಾಟದ ವಸ್ತುವಾಗುತ್ತಿರುವುದನ್ನು ಗಂಭೀರವಾಗಿ ತೆಗೆದುಕೊಂಡು ತಡೆಯುವ ಹೊಣೆಗಾರಿಕೆ ಎಲ್ಲರ ಮೇಲಿದೆ ಎಂದು ತಿಳಿಸಿದರು.

ನ್ಯಾಯವಾದಿ ಬಿ.ಕೆ.ರಹಮತ್‍ವುಲ್ಲಾ ಮಾತನಾಡಿ, ಬಾಲ್ಯ ವಿವಾಹವಾಗುವುದು ಕಾನೂನಿನಡಿ ಅಪರಾಧ. ಹೆಣ್ಣಿಗೆ 18, ಗಂಡಿಗೆ 21 ವರ್ಷ ವಯಸ್ಸಾಗುವ ಮೊದಲೆ ಮದುವೆ ಮಾಡಬಾರದು. ಒಂದು ವೇಳೆ ವಿವಾಹವಾದರೆ ಪೋಷಕರಿಗೆ ಶಿಕ್ಷೆಯಾಗುತ್ತದೆ ಎನ್ನುವ ಅರಿವು ಪ್ರತಿಯೊಬ್ಬರಲ್ಲಿಯೂ ಇರಬೇಕೆಂದರು.

ಬಾಪೂಜಿ ಸಮೂಹ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಕೆ.ಎಂ.ವೀರೇಶ್ ಅಧ್ಯಕ್ಷತೆ ವಹಿಸಿದ್ದರು. ಸ್ಕೌಟ್ ಅಂಡ್ ಗೈಡ್ಸ್ ಕೇಂದ್ರ ಸ್ಥಾನಿಕ ಆಯುಕ್ತ ಎಂ.ಕೆ.ಅನಂತರೆಡ್ಡಿ, ಗೈಡ್ಸ್ ಜಿಲ್ಲಾ ಆಯುಕ್ತೆ ಸವಿತಾ ಶಿವಕುಮಾರ್, ರುದ್ರಾಣಿ ಗಂಗಾಧರ್ ವೇದಿಕೆಯಲ್ಲಿದ್ದರು. ಸ್ವಾಮಿ ವಿವೇಕಾನಂದ ರಾಜ್ಯ ಪ್ರಶಸ್ತಿ ಪುರಸ್ಕೃತ ಯುವ ವಕೀಲ ಓ.ಪ್ರತಾಪ್‍ಜೋಗಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಪ್ರೊ.ಎಂ.ಆರ್.ಜಯಲಕ್ಷ್ಮಿ ಇದ್ದರು.ಹೋರಾಟಗಾರ ಕರುನಾಡ ವಿಜಯಸೇನೆ ಜಿಲ್ಲಾಧ್ಯಕ್ಷ ಕೆ.ಟಿ.ಶಿವಕುಮಾರ್ ಇವರನ್ನು ಸನ್ಮಾನಿಸಲಾಯಿತು.

PREV

Recommended Stories

ಜಾತಿಗಣತಿ ಈಗ ಕಗ್ಗಂಟು : ತಡರಾತ್ರಿವರೆಗೆ ಸಭೆ
ಸಹಕಾರಿ ತತ್ವದಿಂದ ಕಟ್ಟಕಡೆ ವ್ಯಕ್ತಿಗೂ ಸಹಾಯ