ಬಳ್ಳಾರಿ: ಪರಿಶಿಷ್ಟರ ಆರ್ಥಿಕ ಸ್ಥಿತಿ ಸುಧಾರಣೆಯಾಗಲು ಅವರ ಪ್ರಮಾಣಕ್ಕನುಸಾರವಾಗಿ ರಾಜ್ಯ ಸರ್ಕಾರ ಆಯವ್ಯಯದಲ್ಲಿ ವಿಶೇಷ ಅನುದಾನ ಮೀಸಲಿಡುತ್ತಿದ್ದು, ಅಧಿಕಾರಿಗಳು ಅವರಿಗಾಗಿಯೇ ಪೂರ್ಣ ಪ್ರಮಾಣದಲ್ಲಿ ವ್ಯಯಿಸಬೇಕು ಎಂದು ಬೆಂಗಳೂರು ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಗಾಗಿ ಸಂಸ್ಥೆಯ (ಐಎಸ್‌ಇಸಿ) ಸಲಹೆಗಾರ ಹಾಗೂ ಮಾಜಿ ಯೋಜನಾ ನಿರ್ದೇಶಕ ಪ್ರೊ.ವಿಜಯೇಂದ್ರ ಬಾಬು ಹೇಳಿದರು.
ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಕುಟುಂಬಗಳ ಯೋಗಕ್ಷೇಮದ ಮೇಲೆ ಎಸ್ಸಿ, ಎಸ್ಪಿ ಮತ್ತು ಟಿಎಸ್ಪಿ ಯೋಜನೆ ಕಾರ್ಯಕ್ರಮಗಳ ಪರಿಣಾಮ ಕುರಿತು ಅಧ್ಯಯನದ ಭಾಗವಾಗಿ ನಗರದ ಜಿಪಂ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಎಸ್ಸಿ-ಎಸ್ಪಿ ಮತ್ತು ಟಿಎಸ್ಪಿ ಪ್ರಗತಿ ಪರಿಶೀಲನೆ ಮತ್ತು ಸಂವಾದ ಸಭೆ ಉದ್ಘಾಟಿಸಿ ಮಾತನಾಡಿದರು.ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳ ವೈಯಕ್ತಿಕ ಅಭಿವೃದ್ಧಿಗಾಗಿ ಅನುಷ್ಠಾನ ಮಾಡುವ ಕಾರ್ಯಕ್ರಮಗಳಿಗೆ ಅನುದಾನ ಹಂಚಿಕೆ ಮಾಡಲಾಗುತ್ತದೆ. ಅವರನ್ನು ಮುನ್ನಲೆಗೆ ತರಲು ಅಧಿಕಾರಿಗಳು ಪ್ರಾಮಾಣಿಕವಾಗಿ ಸೌಲಭ್ಯ ವಿತರಿಸಿ ಅನುದಾನ ವೆಚ್ಚ ಮಾಡಬೇಕು ಎಂದು ತಿಳಿಸಿದರು.
ಅಧಿಕಾರಿಗಳು ತಮ್ಮ ಇಲಾಖೆಗಳಿಂದ ನೀಡುವ ವಿವಿಧ ಸೌಲಭ್ಯ ಹಾಗೂ ಉಪಕರಣಗಳ ಬಗ್ಗೆ ಸಾಕಷ್ಟು ಪ್ರಚಾರ ನೀಡಬೇಕು. ಪರಿಶಿಷ್ಟರ ಸಮುದಾಯದಲ್ಲಿ ಸಾಕ್ಷಾರತಾ ಅರಿವು ಕಡಿಮೆ. ಸೌಲಭ್ಯಗಳ ಮಾಹಿತಿ ತಲುಪುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದ ಅವರು, ಮನೆ ಭೇಟಿ ನೀಡುವ ಮೂಲಕ ಕ್ಷೇತ್ರ ಪ್ರಚಾರ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು.ವಿವಿಧ ಯೋಜನೆಗಳಡಿ ಅರ್ಜಿಗಳನ್ನು ಆಹ್ವಾನಿಸಿ, ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಬೇಕು. ಅರ್ಜಿಗಳನ್ನು ಆಹ್ವಾನಿಸದೇ ಫಲಾನುಭವಿಗಳನ್ನು ಆಯ್ಕೆ ಮಾಡುವುದು ಸೂಕ್ತವಲ್ಲ. ಆಯ್ಕೆ ಪ್ರಕ್ರಿಯೆಯಲ್ಲಿ ಪಾರದರ್ಶಕತೆಯನ್ನು ಪಾಲಿಸಬೇಕು ಎಂದರು.
ಅದೇರೀತಿಯಾಗಿ ಒಂದೇ ಫಲಾನುಭವಿಗೆ ಮತ್ತೊಮ್ಮೆ ಸೌಲಭ್ಯ ನೀಡುವಂತಿಲ್ಲ. ಫಲಾನುಭವಿಗಳು ತಮಗೆ ನೀಡಿರುವ ಉಪಕರಣ ಹಾಗೂ ಸೌಲಭ್ಯಗಳನ್ನು ಸ್ವತ: ಉಪಯೋಗಿಸಿಕೊಂಡಿರುವ ಬಗ್ಗೆ ಇಲಾಖಾಧಿಕಾರಿಗಳು ಖಾತ್ರಿಪಡಿಸಿಕೊಳ್ಳಬೇಕು ಎಂದು ತಿಳಿಸಿದರು.ಬಳಕೆಯಾಗದ ಅನುದಾನ ಮರುಹಂಚಿಕೆ
ಎಸ್ಸಿ-ಎಸ್ಪಿ ಮತ್ತು ಟಿಎಸ್ಪಿ ಯೋಜನೆಯಡಿ ಹಂಚಿಕೆ ಮಾಡಿರುವ ಮೊತ್ತವು ಖರ್ಚಾಗದೆ ಉಳಿದ ಸಂದರ್ಭದಲ್ಲಿ ಲೆಕ್ಕ ಪರಿಶೋಧನೆಯಾದ ಬಳಿಕ ಅದರ ಮುಂದಿನ ಹಣಕಾಸು ವರ್ಷಕ್ಕೆ ಸೇರ್ಪಡೆಯಾಗುತ್ತದೆ. ಈ ಅನುದಾನದಲ್ಲಿ 1/3 ಭಾಗ ಸಮಾಜ ಕಲ್ಯಾಣ ಇಲಾಖೆಗೆ ಹಾಗೂ 3/2 ಭಾಗ ಆಯಾ ಇಲಾಖೆಗೆ ಹಂಚಿಕೆಯಾಗುತ್ತದೆ. ಆ ವರ್ಷ ಮೀರಿದ ನಂತರ ಅದನ್ನು ಮುಂದುವರಿಸಲಾಗುವುದಿಲ್ಲ ಎಂದು ಅಧಿಕಾರಿಗಳಿಗೆ ಸ್ಪಷ್ಟಪಡಿಸಿದರು.ಅಧಿಕಾರಿಗಳು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉಪಯೋಜನೆಯಡಿ ಅನುಷ್ಠಾನಗುವ ಕಾರ್ಯಕ್ರಮಗಳನ್ನು ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸಿದಲ್ಲಿ ಶಿಸ್ತುಕ್ರಮ ಅಥವಾ ಕ್ರಿಮಿನಲ್ ಕ್ರಮಕ್ಕೆ ಒಳಪಡುತ್ತಾರೆ ಎಂದು ಎಚ್ಚರಿಸಿದರು.
ಜಿಲ್ಲಾ ಮಟ್ಟದಲ್ಲಿ ವಿವಿಧ ಇಲಾಖೆಗಳಲ್ಲಿ ಎಸ್‌ಸಿಎಸ್‌ಪಿ, ಟಿಎಸ್‌ಪಿ ನೋಡಲ್ ಅಧಿಕಾರಿಗಳನ್ನು ನೇಮಿಸಬೇಕು. ಇದರ ಮೇಲ್ವಿಚಾರಣೆಗೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಮೇಲ್ವಿಚಾರಣಾ ಸಮಿತಿ ರಚಿಸಿ, ಪ್ರಗತಿ ವಿಚಾರಣೆ ನಡೆಸಬೇಕು.ಮುಖ್ಯವಾಗಿ ಎಸ್‌ಸಿಎಸ್‌ಪಿ, ಟಿಎಸ್‌ಪಿ ಯೋಜನೆಯಡಿ ಒದಗಿಸಿದ ಅನುದಾನವನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಮಾತ್ರ ವಿನಿಯೋಗಿಸಬೇಕು ಎಂದರು.
ಇದೇ ವೇಳೆ ವಿವಿಧ ಇಲಾಖಾವಾರು ನೀಡುವ ಸೌಲಭ್ಯಗಳು ಮತ್ತು ಉಪಕರಣಗಳ ಬಗ್ಗೆ ವಿಚಾರಿಸಿ ಮಾಹಿತಿ ಪಡೆದುಕೊಂಡರು.ಈ ಸಂದರ್ಭದಲ್ಲಿ ಬೆಂಗಳೂರು ಐಎಸ್‌ಇಸಿಯ ಮುಖ್ಯಸ್ಥರಾದ ಪ್ರೊ. ಎಸ್.ಮಾಧೇಶ್ವರನ್, ಸಹಾಯಕ ಪ್ರಾಧ್ಯಾಪಕಿ ಬಿ.ಪಿ. ವಾಣಿ, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಮಲ್ಲಿಕಾರ್ಜುನ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ದಿವಾಕರ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.