- ನೂರಾರು ಕ್ರೀಡಾಪಟುಗಳ ಪ್ರತಿಭಟನೆ । ಹಳೇ ಬಿ.ಪಿ. ರಸ್ತೆಯಲ್ಲೇ ಕ್ರಿಕೆಟ್, ಬಾಸ್ಕೆಟ್ ಬಾಲ್, ಫುಟ್ಬಾಲ್ ಆಟವಾಡಿ ಘೋಷಣೆ
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ಕ್ರೀಡೆಗೆ ಮೀಸಲಾದ ಇಲ್ಲಿನ ಹೈಸ್ಕೂಲ್ ಮೈದಾನದಲ್ಲಿ ಪ್ರತಿ ತಿಂಗಳಲ್ಲಿ 3-4 ಮೇಳಗಳಿಗೆ ಜಾಗ ಕೊಟ್ಟು ಕ್ರೀಡಾಭ್ಯಾಸ, ಕ್ರೀಡಾ ಸ್ಪರ್ಧೆಗಳಿಗೆ ತೊಂದರೆ ಮಾಡುತ್ತಿರುವುದನ್ನು ಖಂಡಿಸಿ ನೂರಾರು ಕ್ರೀಡಾಪಟುಗಳು ನಗರದ ಪಾಲಿಕೆ ಮುಂಭಾಗದ ಹಳೇ ಪಿ.ಬಿ. ರಸ್ತೆಯಲ್ಲಿ ಫುಟ್ಬಾಲ್, ಬಾಸ್ಕೆಟ್ ಬಾಲ್, ಕ್ರಿಕೆಟ್ ಆಡುವ ಮೂಲಕ ವಿನೂತನ ಪ್ರತಿಭಟನೆ ನಡೆಸಿದರು.ನಗರದ ಹೈಸ್ಕೂಲ್ ಮೈದಾನದಿಂದ ಮಾರ್ನಿಂಗ್ ಸ್ಟಾರ್ ಫುಟ್ ಬಾಲ್ ಕ್ಲಬ್ ನೇತೃತ್ವದಲ್ಲಿ ವಿವಿಧ ಕ್ರೀಡೆಗಳ ಕ್ರೀಡಾಪಟುಗಳು, ಕ್ರೀಡಾ ಸಂಸ್ಥೆಗಳ ಪದಾಧಿಕಾರಿಗಳು, ಹಿರಿಯ- ಕಿರಿಯ ಕ್ರೀಡಾಪಟುಗಳು ಹೈಸ್ಕೂಲ್ ಮೈದಾನವನ್ನು ಕ್ರೀಡಾ ಚಟುವಟಿಕೆಗಳಿಗಷ್ಟೇ ಮೀಸಲಿಡುವಂತೆ ಒತ್ತಾಯಿಸಿದರು.
ಘೋಷಣೆ ಕೂಗುತ್ತಾ ಉಪ ವಿಭಾಗಾಧಿಕಾರಿ ಕಚೇರಿ ಎದುರಿನ ವೃತ್ತ, ಹಳೇ ಪಿ.ಬಿ. ರಸ್ತೆಯಲ್ಲಿ ಕ್ರೀಡಾಭ್ಯಾಸ ನಡೆಸಿದರು. ಆ ಮೂಲಕ ಹೈಸ್ಕೂಲ್ ಮೈದಾನದ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಿದರು.ಸಾವಿರಾರು ಕ್ರೀಡಾಪಟುಗಳು, ವಾಯು ವಿಹಾರಿಗಳಿಗೆ ಹೈಸ್ಕೂಲ್ ಮೈದಾನ ಆಸರೆಯಾಗಿದೆ. ಈ ಮೈದಾನ ಈಗ ವಾಣಿಜ್ಯ ಉದ್ದೇಶಕ್ಕೆ ಬಳಸುವುದೇ ಹೆಚ್ಚುತ್ತಿದೆ. ದಿನನಿತ್ಯ ಒಂದಿಲ್ಲೊಂದು ಖಾಸಗಿ ಕಾರ್ಯಕ್ರಮ, ವಾಣಿಜ್ಯ ಉದ್ದೇಶ ಕಾರ್ಯಕ್ರಮಗಳಿಗೆ ಹೈಸ್ಕೂಲ್ ಮೈದಾನದಲ್ಲಿ ಅವಕಾಶ ನೀಡುತ್ತಿದ್ದಾರೆ. ಇದರಿಂದ ಕ್ರೀಡಾಪಟುಗಳಿಗೆ, ಕ್ರೀಡಾ ಚಟುವಟಿಕೆಗಳಿಗೆ ತೊಂದರೆಯಾಗಿದೆ ಎಂದು ಕ್ರೀಡಾಪಟುಗಳು ಆಕ್ಷೇಪಿಸಿದರು.
ಇಡೀ ಮೈದಾನ ಹಾಳುಗೆಡವಲಾಗುತ್ತಿದೆ. ಇಡೀ ಐತಿಹಾಸಿಕ ಹೈಸ್ಕೂಲ್ ಮೈದಾನ ಜಾಗವನ್ನೇ ಕಬಳಿಸುವ ದೊಡ್ಡ ಹುನ್ನಾರ ನಡೆದಿದೆ. ಕ್ರೀಡೆಗೆ ಸರ್ಕಾರ ಪ್ರೋತ್ಸಾಹ ನೀಡಬೇಕಿರುವುದು ದೊಡ್ಡ ಜವಾಬ್ದಾರಿಯಾಗಿದೆ. ಮುಂದಿನ ಪೀಳಿಗೆಗೆ ಮೈದಾನ ಉಳಿಸಲು ಉಗ್ರ ಹೋರಾಟ ನಿಶ್ಚಿತ ಎಂದು ಎಚ್ಚರಿಸಿದರು.ಸಂಘಟನೆ ಮುಖಂಡ ಮಂಜುನಾಥ ಕುಕ್ಕುವಾಡ. ಹಿರಿಯ ಕ್ರೀಡಾಪಟುಗಳಾದ ವೀರೇಶ, ಕಾಂತರಾಜ, ನೂರ್ ಅಹಮದ್, ನಯಾಜ್ ಅಹ್ಮದ್, ಯೂಸೂಫ್, ಆನಂದ, ಚಂದ್ರಮೌಳಿ ಸೇರಿದಂತೆ ನೂರಾರು ಕ್ರೀಡಾಪಟುಗಳು, ಕ್ರೀಡಾ ಸಂಸ್ಥೆಗಳ ಪದಾಧಿಕಾರಿಗಳು, ವಾಯು ವಿಹಾರಿಗಳು ಪ್ರತಿಭಟನೆಯಲ್ಲಿದ್ದರು.
- - - -17ಕೆಡಿವಿಜಿ4, 5:ದಾವಣಗೆರೆ ಹೈಸ್ಕೂಲ್ ಮೈದಾನವನ್ನು ಕೇವಲ ಕ್ರೀಡಾ ಉದ್ದೇಶಕ್ಕೆ ಮಾತ್ರ ಮೀಸಲಿಡುವಂತೆ ಎಸಿ ಕಚೇರಿ ವೃತ್ತದ ಎದುರು, ಹಳೇ ಪಿ.ಬಿ. ರಸ್ತೆಯಲ್ಲಿ ಕ್ರೀಡಾಪಟುಗಳು ಫುಟ್‌ಬಾಲ್, ಕ್ರಿಕೆಟ್ ಆಡುವ ಮೂಲಕ ಪ್ರತಿಭಟಿಸಿದರು. -17ಕೆಡಿವಿಜಿ6: ದಾವಣಗೆರೆ ಹೈಸ್ಕೂಲ್ ಮೈದಾನವನ್ನು ಕ್ರೀಡೆಗಷ್ಟೇ ಸೀಮಿತಗೊಳಿಸುವಂತೆ ಒತ್ತಾಯಿಸಿ ನೂರಾರು ಕ್ರೀಡಾಪಟುಗಳು ಭಾನುವಾರ ಬೆಳಗ್ಗೆ ಪ್ರತಿಭಟನೆ ನಡೆಸಿದರು.