ಬಳ್ಳಾರಿ: ನಗರದ ಗುರುಕುಲ ವಸತಿ ಶಾಲೆಯ ಬಾಲಕ ಕಬ್ಬಿಣದ ರಾಡ್ ಬಳಸಿ ಕಂಡ ಕಂಡವರ ಮೇಲೆ ಮನಸೋ ಇಚ್ಛೆ ಥಳಿಸಿದ ಘಟನೆಗೆ ಆತ ಮಾನಸಿಕ ಖಿನ್ನತೆಗೆ ಒಳಗಾಗಿದ್ದೇ ಪ್ರಮುಖ ಕಾರಣ ಎಂಬ ಅಂಶ ಬೆಳಕಿಗೆ ಬಂದಿದೆ.
ನಾವು ಹೇಳಿದಂಗ ಕೇಳಬೇಕು ಎಂದು ಬೆದರಿಸುತ್ತಿದ್ದರು. ಹಾಸ್ಟಲ್‌ನಲ್ಲಿ ಊಟ ಸರಿಯಿಲ್ಲ. ಅಲ್ಲಿರಲು ನನ್ನಿಂದ ಆಗುತ್ತಿಲ್ಲ ಎಂದು ಪೋಷಕರ ಬಳಿ ನಾನು ಹೇಳಿದ್ದಾಗ್ಯೂ ಮನೆಯಲ್ಲಿ ಕೇಳಿರಲಿಲ್ಲ. ಇದು ನನಗೆ ತೀವ್ರ ಬೇಸರ ತಂದಿತ್ತು. ಆದಷ್ಟು ಬೇಗ ನಾನು ಹಾಸ್ಟೆಲ್‌ನಿಂದ ಹೊರಗಡೆ ಹೋಗಬೇಕು ಎಂದೇ ಬಯಸುತ್ತಿದ್ದೆ. ಕಳೆದ ಶನಿವಾರ ಸಂಜೆ ಸಹ ಗೆಳೆಯರು ನನ್ನನ್ನು ಕೀಟಲೆ ಮಾಡಿದ್ದರು. ಒಂದೆಡೆ ಪೋಷಕರು ವಸತಿ ಶಾಲೆಯಲ್ಲಿಯೇ ಇರುವಂತೆ ಒತ್ತಡ ಹಾಕುತ್ತಿದ್ದರು. ಮತ್ತೊಂದೆಡೆ ನನಗೆ ಹಾಸ್ಟೆಲ್‌ನಲ್ಲಿದ್ದ ಗೆಳೆಯರು ಕೀಟಲೆ ಮಾಡುತ್ತಿದ್ದರು. ಈ ಎರಡರ ಒತ್ತಡದಿಂದ ನಾನು ಸಾಕಷ್ಟು ರೋಸಿ ಹೋಗಿದ್ದೆ. ಹೀಗಾಗಿಯೇ ನಾನು ತಾಳ್ಮೆ ಕಳೆದುಕೊಂಡು ದಾಳಿ ಮಾಡಿದ್ದೇನೆ ಎಂದು ವಿಚಾರಣೆ ವೇಳೆ ಬಾಲಕ ಹಾಸ್ಟಲ್‌ನಲ್ಲಿ ತನಗಾದ ಸಂಕಟವನ್ನು ಹೇಳಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ. ಹಾಸ್ಟಲ್ ಅವ್ಯವಸ್ಥೆ ಹಾಗೂ ಸಹಪಾಠಿಗಳ ಕೀಟಲೆಯೇ ಬಾಲಕ ತಾಳ್ಮೆ ಕಳೆದುಕೊಂಡು ಕಬ್ಬಿಣದ ರಾಡ್‌ನಿಂದ ಮನಸೋ ಇಚ್ಛೆ ಥಳಿಸಿರಬಹುದು ಎಂದು ಪ್ರಾಥಮಿಕ ವಿಚಾರಣೆಯಿಂದ ತಿಳಿದು ಬಂದಿದೆ. ಬಾಲಕನ ವಿಚಾರಣೆ ಮುಂದುವರಿದಿದ್ದು, ಇಡೀ ಘಟನೆಗೆ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಮೂಲಗಳು ಖಚಿತಪಡಿಸಿವೆ.
ಬಳ್ಳಾರಿಯ ತಾಳೂರು ರಸ್ತೆಯಲ್ಲಿರುವ ವಸತಿ ಶಾಲೆಯಲ್ಲಿ ಮಾ. 7ರ ತಡ ರಾತ್ರಿ ವೇಳೆ ನಿಲಯದಲ್ಲಿನ ವಿದ್ಯಾರ್ಥಿಗಳ ನಡುವೆ ನಡೆದ ಗಲಾಟೆಯಲ್ಲಿ ವಿದ್ಯಾರ್ಥಿಯೊಬ್ಬ ತನ್ನ ಸಹಪಾಠಿ ಡಿ. ಹೇಮಂತ್ ಮೇಲೆ ಹಲ್ಲೆ ನಡೆಸಿದ ಪರಿಣಾಮ ಮೃತಪಟ್ಟಿದ್ದು, ಇನ್ನುಳಿದ ಏಳು ವಿದ್ಯಾರ್ಥಿಗಳು, ನಿಲಯದ ವಾರ್ಡನ್ ಗಾಯಗೊಂಡಿದ್ದರು.ಘಟನೆ ಬಳಿಕ ನಾಪತ್ತೆಯಾದ ಆರೋಪಿ ಬಾಲಕನ ಪತ್ತೆಗಾಗಿ ಜಿಲ್ಲಾ ಪೊಲೀಸ್ ಇಲಾಖೆಯಿಂದ ಏಳು ತಂಡಗಳನ್ನು ರಚಿಸಲಾಗಿತ್ತು. ನಗರದ ಗಂಗಪ್ಪ ಜಿನ್ ಬಳಿ ಖಾಸಗಿ ಲೇಔಟ್ ಬಳಿ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕನನ್ನು ಪೊಲೀಸರು ಪತ್ತೆ ಹಚ್ಚಿ ವಶಕ್ಕೆ ಪಡೆದಿದ್ದರು. ಹಾಸ್ಟಲ್‌ನಲ್ಲಿ ವಿದ್ಯಾರ್ಥಿ ದಾಳಿ ಘಟನೆ ನಗರವನ್ನು ಬೆಚ್ಚಿ ಬೀಳಿಸಿತ್ತು. 15 ವರ್ಷದ ಬಾಲಕ ಏಳೆಂಟು ಜನರ ಮೇಲೆ ದಾಳಿಗೆ ಕಾರಣಗಳೇನು? ಎಂಬ ಪ್ರಶ್ನೆ ಮೂಡಿತ್ತಲ್ಲದೆ, ನಗರದಲ್ಲಿ ಡ್ರಗ್ಸ್ ಹಾಗೂ ಗಾಂಜಾ ಬಳಕೆ ಹೆಚ್ಚಾಗುತ್ತಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಬಾಲಕ ಗಾಂಜಾ ಬಳಕೆ ಮಾಡಿ ಈ ಕೃತ್ಯ ಎಸಗಿರಬಹುದೇ ಎಂಬ ಗುಮಾನಿಗಳು ಸಾರ್ವಜನಿಕ ವಲಯದಲ್ಲಿ ಹರಿದಾಡಿದ್ದವು. ಆದರೆ, ಪ್ರಾಥಮಿಕ ತನಿಖೆಯ ಪ್ರಕಾರ ಬಾಲಕ ಮಾನಸಿಕ ಖಿನ್ನತೆಗೆ ಒಳಗಾಗಿ ಈ ಕೃತ್ಯ ಎಸಗಿರಬಹುದು ಎಂದು ಹೇಳಲಾಗುತ್ತಿದ್ದು, ಪೂರ್ಣ ವಿಚಾರಣೆಯ ಬಳಿಕ ಎಲ್ಲವೂ ಗೊತ್ತಾಗಲಿದೆ.