ತಮ್ಮನ್ನೂ ಸರ್ಕಾರಿ ನೌಕರರೆಂದು ಪರಿಗಣಿಸಲು ವಸತಿ ಶಾಲಾ ಶಿಕ್ಷಕರ ಒತ್ತಾಯ

KannadaprabhaNewsNetwork |  
Published : Jun 03, 2025, 12:29 AM IST
2ಎಚ್ಎಸ್ಎನ್18 :  | Kannada Prabha

ಸಾರಾಂಶ

ಅಪಘಾತ ಮತ್ತಿತರ ಸಂದರ್ಭಗಳಲ್ಲಿ ನೆರವಾಗಲು ಜ್ಯೋತಿ ಸಂಜೀವಿನಿ ಆರೋಗ್ಯ ಯೋಜನೆ ವ್ಯಾಪ್ತಿಗೆ ನಮ್ಮನ್ನೂ ಸೇರಿಸಬೇಕು. ನಮ್ಮ ತಿಂಗಳ ಸಂಬಳದಲ್ಲಿ ಬಾಡಿಗೆ ಭತ್ಯೆಯನ್ನು ಕಟಾವಣೆ ಮಾಡಬಾರದು. ಬೇರೆ ವಸತಿ ಶಾಲೆಗಳ ಶಿಕ್ಷಕರಿಗೆ ನೀಡುತ್ತಿರುವಂತೆ ಸಂಪೂರ್ಣ ಸಂಬಳ ಪಾವತಿ ಮಾಡಬೇಕು. ಇತರರಿಗೆ ಕೊಡುತ್ತಿರುವಂತೆಯೇ ನಮಗೂ ಶೇ.೧೦ ರಷ್ಟು ವಿಶೇಷ ಭತ್ಯೆ ನೀಡಬೇಕು.

ಕನ್ನಡಪ್ರಭ ವಾರ್ತೆ ಹಾಸನ

ಸಮಾನ ಸೌಲಭ್ಯದ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ವಸತಿ ಶಾಲಾ ಶಿಕ್ಷಣ ಸಂಸ್ಥೆಗಳ ಸಂಘವು ಸೋಮವಾರದಿಂದ ಡೀಸಿ ಕಚೇರಿ ಎದುರು ತಮ್ಮ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿತು.

ಸಂಘದ ಹಾಗೂ ಶಿಕ್ಷಕ ಮಂಜುನಾಥ್ ಮಾಧ್ಯಮದೊಂದಿಗೆ ಮಾತನಾಡಿ, ಈಗಾಗಲೇ ಅನೇಕ ಬಾರಿ, ಅದರಲ್ಲೂ ಶಾಲೆ ರಜೆ ದಿನಗಳಲ್ಲಿ ಹೋರಾಟ ಮಾಡಿದರೂ ನಮಗೆ ಸ್ಪಂದನೆ ಸಿಕ್ಕಿರುವುದಿಲ್ಲ. ಈ ನಿಟ್ಟಿನಲ್ಲಿ ಡೀಸಿ ಕಚೇರಿಯ ಎದುರು ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ನಡೆಸಲಾಗುತ್ತಿದೆ. ಬೇರೆ ವಸತಿ ಶಾಲೆಗಳ ಶಿಕ್ಷಕರಿಗೆ ಹೋಲಿಸಿದರೆ ನಾವು ಅನೇಕ ಸೌಲಭ್ಯಗಳಿಂದ ವಂಚಿತರಾಗಿದ್ದೇವೆ. ಅವುಗಳನ್ನು ಈಡೇರಿಸಿ ಎಂದು ರಾಜ್ಯಾದ್ಯಂತ ಕ್ರೈಸ್ ಸಂಸ್ಥೆಯಡಿ ಸುಮಾರು ೬೮೦೦ ಮಂದಿ ಇರುವ ಕಾಯಂ ಶಿಕ್ಷಕರು ಕಳೆದ ೧೩ ವರ್ಷಗಳಿಂದ ಹೋರಾಟ ಮಾಡುತ್ತಿದ್ದರೂ ಯಾವುದೇ ಸ್ಪಂದನೆ ಸಿಕ್ಕಿಲ್ಲ ಎಂದರು. ಪರಿಶಿಷ್ಟ ಜಾತಿ, ಪಂಗಡ ಹಾಗೂ ಹಿಂದುಳಿದ ವರ್ಗಗಳ ಬಡ ಪ್ರತಿಭಾವಂತ ಮಕ್ಕಳು ಓದುತ್ತಿರುವ ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಏಕಲವ್ಯ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಮೊದಲಾದ ವಸತಿ ಶಾಲೆಗಳಲ್ಲಿ ಓದುವುದರಿಂದ ಹಿಡಿದು, ಪ್ರತಿಭಾ ಕಾರಂಜಿ ಮೊದಲಾದ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ನಮ್ಮ ಶಾಲೆಗಳ ಮಕ್ಕಳೇ ಉತ್ತಮ ಪ್ರತಿಭೆ ಪ್ರದರ್ಶನ ಮಾಡುತ್ತಿದ್ದಾರೆ. ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ನಮ್ಮ ಶಾಲೆಯ ಮಕ್ಕಳೂ ರಾಜ್ಯಮಟ್ಟದ ರ್‍ಯಾಂಕ್ ಪಡೆಯುತ್ತಿದ್ದಾರೆ. ನಾವು ನೀಡುವ ಗುಣಾತ್ಮಕ ಶಿಕ್ಷಣದಿಂದ ಸರ್ಕಾರಿ ಶಾಲೆಗಳಿಗಿಂತಲೂ ನಮ್ಮ ಶಾಲೆಗಳ ಫಲಿತಾಂಶ ಶೇ.೯೧ ಕ್ಕಿಂತಲೂ ಅಧಿಕ ಇದೆ. ಇದಕ್ಕೆ ನಾವು ೨೪*೭ ಮಾದರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವುದೂ ಕಾರಣ. ಆದರೂ ನಮಗೆ ಕೊಡಬೇಕಾದ ಸೌಲಭ್ಯ ಕೊಡದೆ ತಾರತಮ್ಯ ಮಾಡಲಾಗುತ್ತಿದೆ ಎಂದು ದೂರಿದರು.

ನಾವು ೬ರಿಂದ ೧೦ನೇ ತರಗತಿವರೆಗೂ ಬೋಧನೆ ಮಾಡುತ್ತಿದ್ದೇವೆ. ಗುಣಮಟ್ಟ ಹಾಗೂ ಮೌಲ್ಯಯುತ ಶಿಕ್ಷಣ ನೀಡುತ್ತಿರುವುದರಿಂದ ೫೨ ಸಾವಿರ ಮಕ್ಕಳ ಸಾಮರ್ಥ್ಯದ ವಸತಿ ಶಾಲೆಗಳ ಪ್ರವೇಶಕ್ಕಾಗಿ ಬರೋಬ್ಬರಿ ೨.೭೦ ಲಕ್ಷ ಅರ್ಜಿ ಬಂದಿವೆ. ಒಟ್ಟಾರೆಯಾಗಿ ನಾವು ಸರ್ಕಾರಿ ಶಿಕ್ಷಕರಿಗಿಂತ ಹೆಚ್ಚು ಕೆಲಸ ಮಾಡಿದರೂ,ಅವರಂತೆಯೇ ಸಮಾನವಾದ ಸೌಲಭ್ಯ ಇಲ್ಲವಾಗಿದೆ. ಜಿ.ಕುಮಾರ ನಾಯಕ್ ವರದಿ ಸೌಲಭ್ಯ ನಮಗೆ ಸಿಕ್ಕಿಲ್ಲ ಎಂದು ತಮ್ಮ ಅಳಲು ತೋಡಿಕೊಂಡರು.

ನಮ್ಮನ್ನೂ ಸರ್ಕಾರಿ ನೌಕರರೆಂದು ಪರಿಗಣಿಸುವಂತಾಗಲು ನಿರ್ದೇಶನಾಲಯ ರಚನೆ ಮಾಡಬೇಕು. ಇಲ್ಲವಾದರೆ ಆಯಾಯ ಇಲಾಖೆಗಳ ವ್ಯಾಪ್ತಿಗೆ ನಮ್ಮ ಶಾಲೆಗಳನ್ನು ವಿಲೀನ ಮಾಡಬೇಕು ಎಂದು ಒತ್ತಾಯಿಸಿದರು.

ಅಪಘಾತ ಮತ್ತಿತರ ಸಂದರ್ಭಗಳಲ್ಲಿ ನೆರವಾಗಲು ಜ್ಯೋತಿ ಸಂಜೀವಿನಿ ಆರೋಗ್ಯ ಯೋಜನೆ ವ್ಯಾಪ್ತಿಗೆ ನಮ್ಮನ್ನೂ ಸೇರಿಸಬೇಕು. ನಮ್ಮ ತಿಂಗಳ ಸಂಬಳದಲ್ಲಿ ಬಾಡಿಗೆ ಭತ್ಯೆಯನ್ನು ಕಟಾವಣೆ ಮಾಡಬಾರದು. ಬೇರೆ ವಸತಿ ಶಾಲೆಗಳ ಶಿಕ್ಷಕರಿಗೆ ನೀಡುತ್ತಿರುವಂತೆ ಸಂಪೂರ್ಣ ಸಂಬಳ ಪಾವತಿ ಮಾಡಬೇಕು. ಇತರರಿಗೆ ಕೊಡುತ್ತಿರುವಂತೆಯೇ ನಮಗೂ ಶೇ.೧೦ ರಷ್ಟು ವಿಶೇಷ ಭತ್ಯೆ ನೀಡಬೇಕು ಎಂದು ಆಗ್ರಹಿಸಿದರು.

ಹಾಗೆಯೇ ಕರ್ನಾಟಕ ಆರೋಗ್ಯ ಸಂಜೀವಿನಿ ಸೌಲಭ್ಯ , ಮರಣ- ನಿವೃತ್ತಿ ಉಪಧನ(ಡಿಸಿಆರ್‌ಜಿ) ನಮಗೂ ಸಿಗಬೇಕು ಎಂದು ಮನವಿ ಮಾಡಿದರು.

ಪ್ರತಿಭಟನೆಯಲ್ಲಿ ಕರ್ನಾಟಕ ವಸತಿ ಶಾಲಾ ಶಿಕ್ಷಣ ಸಂಸ್ಥೆಗಳ ಸಂಘದ ಜಿಲ್ಲಾಧ್ಯಕ್ಷೆ ಸಿ.ಎನ್.ಉಷಾ, ಸಂಘದ ಅಧಿಕಾರಿಗಳಾದ ಶಂಕರ್, ನೇಹಾಲ್, ಕೀರ್ತಿ, ಶಿಲ್ಪಾ, ಧಯಾನಂದ್ ಇತರರು ಉಪಸ್ಥಿತರಿದ್ದರು.

PREV

Recommended Stories

ನನ್ನ ಬಗ್ಗೆ ಮಾತನಾಡುವವರಿಗೆ ಸಿಗಂದೂರು ಚೌಡೇಶ್ವರಿ ತಕ್ಕ ಬುದ್ಧಿ ಕಲಿಸಲಿದ್ದಾಳೆ : ಮಧು ಬಂಗಾರಪ್ಪ
ಡಾ.ಪ್ರಭಾಕರ್‌ ಕೋರೆ 78ನೇ ಜನ್ಮದಿನ ಅರ್ಥಪೂರ್ಣ ಆಚರಣೆ