ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ
ಪ್ರಸ್ತುತ ಪಟ್ಟಣದ ಪುರಸಭೆ ವ್ಯಾಪ್ತಿಯು ೧೦.೭೬ ಚ.ಕಿ.ಮೀ ಇದ್ದು, ಅದನ್ನು ಮುಂದಿನ ಜನಸಂಖ್ಯೆ ಅನುಗುಣವಾಗಿ ೨೭ ಚದರ ಕಿ.ಮೀ ಮಾಡಲು ಸಾಮಾನ್ಯ ಸಭೆಯಲ್ಲಿ ಅನುಮೋದನೆ ನೀಡಲಾಯಿತು. ಪುರಸಭೆ ಸಭಾಂಗಣದಲ್ಲಿ ಅಧ್ಯಕ್ಷೆ ಜಗದೇವಿ ಗುಂಡಳ್ಳಿ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ಈ ನಿರ್ಣಯ ಸೇರಿದಂತೆ ೨೦೧೧ರಿಂದ ೨೦೪೧ರವರೆಗಿನ ಅವಧಿಗೆ ಪುರಸಭೆ ವ್ಯಾಪ್ತಿಯ ಲೇಔಟ್‌ಗಳಿಗೆ ಮಹಾಯೋಜನೆ ಸೇರಿದಂತೆ ವಿವಿಧ ವಿಷಯಗಳಿಗೆ ಅನುಮೋದನೆ ನೀಡಲಾಯಿತು.ಸಭೆಯಲ್ಲಿ ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯ ಸಹಾಯಕ ನಿರ್ದೇಶಕಿ ಸುನೀತಾ ಲಾಡ್ ಅವರು ಪುರಸಭೆ ವ್ಯಾಪ್ತಿಯ ಗಡಿ ವಿಸ್ತರಣೆ ಹಾಗೂ ಮಹಾಯೋಜನೆ, ವಿವಿಧ ವಿನ್ಯಾಸ ನಕ್ಷೆಗಳನ್ನು ಪುರಸಭೆ ಅಧ್ಯಕ್ಷರಿಗೆ, ಉಪಾಧ್ಯಕ್ಷರಿಗೆ, ಸದಸ್ಯರಿಗೆ ತೋರಿಸಿದರು. ವಿವಿಧ ವಿನ್ಯಾಸದ ನಕ್ಷೆಯಲ್ಲಿ ಕೆಲ ಪ್ರದೇಶ ಹೆಸರು ತಿದ್ದುಪಡಿ ಮಾಡುವ ಕುರಿತು ಸದಸ್ಯ ನೀಲಪ್ಪ ನಾಯಕ ಸೇರಿದಂತೆ ಕೆಲ ಸದಸ್ಯರು ಅಧಿಕಾರಿಗಳ ಗಮನಕ್ಕೆ ತಂದರು.
ಪುರಸಭೆ ಸದಸ್ಯ ನೀಲಪ್ಪ ನಾಯಕ ಮಾತನಾಡಿ, ಭೋಜಾ ದಾಖಲಾತಿಗೆ ₹೧ ಲಕ್ಷಕ್ಕೆ ₹೨೦೦ ದರ ಮಾತ್ರ ನಿಗದಿಪಡಿಸುವಂತೆ ಸಲಹೆ ನೀಡಿ, ನಿರಪೇಕ್ಷಣಾ ಪತ್ರ ಸೇರಿದಂತೆ ಇತರೇ ಸೇವಾ ಪ್ರಮಾಣ ಪತ್ರಗಳಿಗೆ ಶುಲ್ಕ ವಿಧಿಸುವಂತೆ ಹೇಳಿದರು. ಸದಸ್ಯ ಪ್ರವೀಣ ಪವಾರ ಮಾತನಾಡಿ, ವಿಂಡ್ ಪವರ್ ಕಂಪನಿಯಿಂದ ಪುರಸಭೆಗೆ ಬರಬೇಕಾದ ತೆರಿಗೆ ಹಣವನ್ನು ವಸೂಲಿ ಮಾಡುವಂತೆ ಹೇಳಿದಾಗ ಮುಖ್ಯಾಧಿಕಾರಿ ಎಚ್.ಎಸ್.ಚಿತ್ತರಗಿ ಈ ಕುರಿತು ಹಣ ಭರಿಸದೇ ಇರುವ ಕಂಪನಿಗಳಿಗೆ ಈಗಾಗಲೇ ನೋಟಿಸ್ ನೀಡಲಾಗಿದೆ. ಮೆಗಾ ಮಾರುಕಟ್ಟೆಯಲ್ಲಿ ವಾಹನ ನಿಲುಗಡೆ ಸ್ಥಳದಲ್ಲಿ ವಾಹನ ನಿಲ್ಲಿಸಲು ಪಾರ್ಕಿಂಗ್ ಶುಲ್ಕ ವಿಧಿಸುವ ಸಲುವಾಗಿ ವಾರ್ಷಿಕ ಹೊರಗುತ್ತಿಗೆ ನೀಡುವ ವಿಷಯ ಮುಖ್ಯಾಧಿಕಾರಿಗಳು ಪ್ರಸ್ತಾಪ ಮಾಡಿದಾಗ ಎಲ್ಲ ಸದಸ್ಯರು ಇದಕ್ಕೆ ಒಪ್ಪಿಗೆ ಸೂಚಿಸಿದರು.೩೬೩ ೨ನೇ ಲೇಔಟ್‌ನಲ್ಲಿ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯಕ್ಕೆ ನಾಗರಿಕ ಸೌಲಭ್ಯ ನಿವೇಶನ ನೀಡಲು ಅನುಮತಿ, ೧೫ನೇ ಹಣಕಾಸು ಮತ್ತು ಎಸ್ಎಫ್‌ಸಿ ಯೋಜನೆಯ ಟೆಂಡರ್ ದರಗಳಿಗೆ ಮಂಜೂರಾತಿ, ಪಟ್ಟಣದಲ್ಲಿ ಇರುವ ಎಂಟು ನೀರು ಶುದ್ಧೀಕರಣ ಘಟಕಗಳನ್ನು ಹೊರಗುತ್ತಿಗೆ ಆಧಾರದ ಮೇಲೆ ನೀಡಲು ಸಭೆ ಅಂಗೀಕಾರ ನೀಡಿತು. ಏಪ್ರಿಲ್, ಮೇ ಮತ್ತು ಜೂನ್ ತಿಂಗಳ ಜಮಾ-ಖರ್ಚು ಓದಿ ದೃಢೀಕರಿಸಲಾಯಿತು.
ಸಭೆಯಲ್ಲಿ ಸದಸ್ಯರಾದ ವಿಜಯಕುಮಾರ ನಾಯಕ, ರಾಜು ಲಮಾಣಿ, ಸದಸ್ಯರಾದ ಅನ್ನಪೂರ್ಣ ಕಲ್ಯಾಣಿ, ಮಹತಾಬಿ ಬಮ್ಮನಳ್ಳಿ, ನಜೀರ ಗಣಿ, ಪ್ರವೀಣ ಪೂಜಾರಿ, ರೇಖಾ ಬೆಕಿನಾಳ, ದೇವೇಂದ್ರ ಚವ್ಹಾಣ, ಗೀತಾ ಬಾಗೇವಾಡಿ, ಪುರಸಭೆ ಅಭಿಯಂತರಾದ ಮಹಾದೇವ ಜಂಬಗಿ, ಸಂತೋಷ ಗಿಡ್ಡಸನ್ನವರ, ವ್ಯವಸ್ಥಾಪಕ ಸುರೇಶ ಬಾಗೇವಾಡಿ, ಆರೋಗ್ಯ ನಿರೀಕ್ಷಕರಾದ ವಿಜಯಕುಮಾರ ವಂದಾಲ, ಮಹೇಶ ಹಿರೇಮಠ, ಲೆಕ್ಕಿಗ ಗುರುರಾಜ ಮಾಗಾವಿ ಸೇರಿದಂತೆ ಇತರರು ಇದ್ದರು.-----
ಬಾಕ್ಸ್... ಸದಸ್ಯರ ಗಮನಕ್ಕೆ ತರದೇ ಸಭೆ: ಹಾರಿವಾಳಪುರಸಭೆ ಅಧ್ಯಕ್ಷರು ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಜುಲೈ11 ರಂದು ಸಭೆ ಕರೆದಾಗ ನಾನು ಸೇರಿದಂತೆ ಬಹುತೇಕ ಸದಸ್ಯರು ಗೈರು ಉಳಿದ ಪರಿಣಾಮ ಸಭೆ ನಡೆಯಲಿಲ್ಲ. ಇಂದು ಸಭೆ ಕರೆದರೂ ಈಗಲೂ ಸಹ ಸದಸ್ಯರ ಗಮನಕ್ಕೆ ಅಧ್ಯಕರು ತಂದಿಲ್ಲ ಎಂದು ಪುರಸಭೆ ಉಪಾಧ್ಯಕ್ಷ ಅಶೋಕ ಹಾರಿವಾಳ ಆರೋಪಿಸಿದರು. ಸಚಿವ ಶಿವಾನಂದ ಪಾಟೀಲ ಈ ರೀತಿಯಾಗದಂತೆ ನೋಡಿಕೊಳ್ಳಬೇಕೆಂದು ಸೂಚಿಸಿದರೂ ಮತ್ತೆ ಅಧ್ಯಕ್ಷರು ಹೀಗೆ ಮಾಡಿದ್ದಾರೆ. ಇದನ್ನು ಸಚಿವರ ಗಮನಕ್ಕೆ ತರುತ್ತೇನೆ ಎಂದು ಅಶೋಕ ಹಾರಿವಾಳ ಹೇಳಿದಾಗ, ಕೆಲಹೊತ್ತು ಅಧ್ಯಕ್ಷರ ಹಾಗೂ ಉಪಾಧ್ಯಕ್ಷರ ನಡುವೆ ವಾಗ್ವಾದ ನಡೆಯಿತು. ಹಿರಿಯ ಸದಸ್ಯ ನೀಲಪ್ಪ ನಾಯಕ ಅಧ್ಯಕ್ಷ, ಉಪಾಧ್ಯಕ್ಷ ಎರಡೂ ಸ್ಥಾನಗಳಿಗೂ ಗೌರವ ಇದೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸಭೆ ನಡೆಸಬೇಕೆಂದಾಗ ಸಭೆ ಮುಂದುವರಿತು.