- ₹200 ಕೋಟಿ ಬಾಕಿ ಪಾವತಿಸಿ: ಜಿಲ್ಲಾ ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳ ಒಕ್ಕೂಟ ಆಗ್ರಹ - - -
ಹತ್ತನೇ ತರಗತಿ ಪರೀಕ್ಷೆ ಸಮೀಪಿಸುತ್ತಿದ್ದು, ಮಕ್ಕಳಿಗೆ ತೊಂದರೆ ಆಗದಂತೆ ರಾಜ್ಯದ ಖಾಸಗಿ ಶಾಲೆಗಳ ಮಾನ್ಯತೆ ನವೀಕರಣ ಗೊಂದಲ ಇತ್ಯರ್ಥಪಡಿಸುವಂತೆ ಜಿಲ್ಲಾ ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳ ಒಕ್ಕೂಟವು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದೆ.
ನಗರದಲ್ಲಿ ಮಂಗಳವಾರ ಒಕ್ಕೂಟದ ಅಧ್ಯಕ್ಷ ಎಂ.ಎಸ್. ಸಂತೋಷಕುಮಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶಿಕ್ಷಣ ಇಲಾಖೆ, ರಾಜ್ಯ ಸರ್ಕಾರ ಪ್ರತಿವರ್ಷ ಮಾನ್ಯತೆ ನವೀಕರಣದ ನಿಯಮಗಳನ್ನು ಜಾರಿಗೆ ತರುವ ಮೂಲಕ ಖಾಸಗಿ ಶಾಲೆಗಳಿಗೆ ಇನ್ನಿಲ್ಲದ ತೊಂದರೆ ನೀಡುತ್ತಿರುವುದು ಮೊದಲು ನಿಲ್ಲಬೇಕು ಎಂದರು.ಸಹ ಕಾರ್ಯದರ್ಶಿ, ಜಿಪಂ ಮಾಜಿ ಅಧ್ಯಕ್ಷೆ ಸಹನಾ ರವಿ ಮಾತನಾಡಿ, ಸರ್ಕಾರ ನಿಯಮಗಳನ್ನು ಮಾಡುವುದಕ್ಕೆ ಅಭ್ಯಂತರವಿಲ್ಲ. ಆದರೆ, ಕೈಗೊಳ್ಳಲು ಆಗದಂತಹ ಕಟ್ಟುಪಾಡಿನ ನಿಯಮಗಳನ್ನು ಹೇರಿದರೆ ಖಾಸಗಿ ಶಾಲೆಗಳು ಎಲ್ಲಿಗೆ ಹೋಗಬೇಕು, ಏನು ಮಾಡಬೇಕು? ಸರ್ಕಾರಿ ನಿಯಮಗಳ ಪೂರೈಸದ ಕಾರಣಕ್ಕೆ ಇದುವರೆಗೆ ಯಾವುದೇ ಶಾಲೆಗಳ ಮಾನ್ಯತೆ ನವೀಕರಣಗೊಂಡಿಲ್ಲ. ಸುಮಾರು 2 ಲಕ್ಷಕ್ಕೂ ಅಧಿಕ ಮಕ್ಕಳು ಆತಂಕಗೊಂಡಿದ್ದಾರೆ. ಪಾಲಕರಿಗೆ ಖಾಸಗಿ ಶಾಲೆಗಳು ಉತ್ತರಿಸುವುದೇ ಕಷ್ಟವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಖಜಾಂಚಿ ಎಚ್.ಜೆ. ಮೈನುದ್ದೀನ್ ಮಾತನಾಡಿ, ಸದನ ಸಮಿತಿ ಕೈಗೊಂಡ ಪ್ರಕ್ರಿಯೆಗಳನ್ನು ಖಾಸಗಿ ಶಾಲೆಗಳ ಗಮನಕ್ಕೂ ತರಬೇತು. ಮಾನ್ಯತೆ ನವೀಕರಣಕ್ಕೆ ಕಾಲಾವಕಾಶ ಕಡಿಮೆ ಇದೆ. ಹಿಂದಿನ ವರ್ಷದ ನವೀಕರಣವನ್ನೇ ಈಗ ಮುಂದುವರಿಸಬೇಕು. ನವೀಕರಣ ಸಾಧ್ಯವಾಗದ ಕಾರಣ ಕಳೆದ ಸಾಲಿನ ಶಿಕ್ಷಣ ಹಕ್ಕು ಕಾಯ್ದೆಯ ಸುಮಾರು ₹200 ಕೋಟಿ ರಾಜ್ಯದ ಖಾಸಗಿ ಶಾಲೆಗಳಿಗೆ ಪಾವತಿಯಾಗಿಲ್ಲ. ಹಾಗಾಗಿ, ಸದನ ಸಮಿತಿ ತ್ವರಿತವಾಗಿ ವರದಿ ನೀಡಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಸಹ ಕಾರ್ಯದರ್ಶಿ, ಜಿಪಂ ಮಾಜಿ ಅಧ್ಯಕ್ಷೆ ಸಹನಾ ರವಿ, ಬಿ.ಕೆ. ಪೃಥ್ವಿರಾಜ ಬಾದಾಮಿ, ಸೈಯದ್ ಮನಫುಶ್ ಇತರರು ಇದ್ದರು.
-10ಕೆಡಿವಿಜಿ3.ಜೆಪಿಜಿ: