ಸೌಹಾರ್ದತೆಯಿಂದ ಹೇಮಾವತಿ ವಿವಾದ ಬಗೆಹರಿಸಿಕೊಳ್ಳಿ: ಸಂಸದ

KannadaprabhaNewsNetwork |  
Published : Jun 13, 2025, 03:22 AM IST
12ಕೆಆರ್ ಎಂಎನ್ 2.ಜೆಪಿಜಿರಾಮನಗರದ ಆರ್ ವಿಸಿಎಸ್ ಕಲ್ಯಾಣ ಮಂಟಪದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಂಸದ ಡಾ.ಸಿ.ಎನ್.ಮಂಜುನಾಥ್ ಮಾತನಾಡಿದರು. | Kannada Prabha

ಸಾರಾಂಶ

ತುಮಕೂರು ಮತ್ತು ಮಾಗಡಿ ತಾಲೂಕಿನ ಜನರು ಬೇರೆ ದೇಶದವರಲ್ಲ. ಅಕ್ಕಪಕ್ಕ ಜಿಲ್ಲೆಯವರು. ಮಾಗಡಿ ಭಾಗದ ಜನರು ಕುಡಿಯುವ ನೀರನ್ನು ಕೇಳುತ್ತಿದ್ದಾರೆ ತಪ್ಪಿಲ್ಲ.

ಕನ್ನಡಪ್ರಭ ವಾರ್ತೆ ರಾಮನಗರ ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಫೀಡರ್ ಯೋಜನೆ ವಿವಾದವನ್ನು ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳು ತುಮಕೂರು ಹಾಗೂ ಬೆಂಗಳೂರು ದಕ್ಷಿಣ ಜಿಲ್ಲೆಗಳ ಜನಪ್ರತಿನಿಧಿಗಳು, ರೈತ ಮುಖಂಡರ ಸಭೆ ನಡೆಸಿ ಸೌಹಾರ್ದತೆಯಿಂದ ಬಗೆಹರಿಸುವುದೊಂದೇ ಉಳಿದಿರುವ ಪರಿಹಾರ ಎಂದು ಸಂಸದ ಡಾ.ಸಿ.ಎನ್ .ಮಂಜುನಾಥ್ ತಿಳಿಸಿದರು.ನಗರದ ಆರ್‌ವಿಸಿಎಸ್ ಕಲ್ಯಾಣ ಮಂಟಪದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಭಯ ಜಿಲ್ಲೆಗಳ ಜನರಿಗೆ ಅನ್ಯಾಯವಾಗದಂತೆ ಮುಖ್ಯಮಂತ್ರಿಗಳು ಕೂಡಲೇ ನೀರಾವರಿ ತಜ್ಞರನ್ನು ಒಳಗೊಂಡಂತೆ ಜನಪ್ರತಿನಿಧಿಗಳು ಮತ್ತು ರೈತ ಮುಖಂಡರ ಸಭೆ ಕರೆದು ಸಾಧಕ ಬಾಧಕಗಳ ಬಗ್ಗೆ ಅವಲೋಕಿಸಿ ಸರ್ಕಾರ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು ಎಂದರು.ತುಮಕೂರು ಮತ್ತು ಮಾಗಡಿ ತಾಲೂಕಿನ ಜನರು ಬೇರೆ ದೇಶದವರಲ್ಲ. ಅಕ್ಕಪಕ್ಕ ಜಿಲ್ಲೆಯವರು. ಮಾಗಡಿ ಭಾಗದ ಜನರು ಕುಡಿಯುವ ನೀರನ್ನು ಕೇಳುತ್ತಿದ್ದಾರೆ ತಪ್ಪಿಲ್ಲ. ಹಾಗಂತ ಗುಬ್ಬಿ, ತುರುವೇಕೆರೆ, ಕುಣಿಗಲ್ ಭಾಗದ ಜನರಿಗೂ ಅನ್ಯಾಯವಾಗಬಾರದು. ಆ ರೀತಿ ಸೌಹಾರ್ದತೆಯಿಂದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಿದೆ ಎಂದು ಹೇಳಿದರು.ಉಭಯ ಜಿಲ್ಲೆಗಳ ನಾಯಕರ ಟೀಕೆಗಳು ಸಮಸ್ಯೆಗೆ ಪರಿಹಾರ ಅಲ್ಲ. ಸುಮ್ಮನೆ ಭಾವನಾತ್ಮಕವಾಗಿ ಮಾತುಗಳನ್ನಾಡಿದರೆ ಪ್ರಯೋಜನ ಆಗುವುದಿಲ್ಲ. ಈ ಯೋಜನೆ ಜಾರಿಯಾಗಲು ಬಿಡುವುದಿಲ್ಲ ಎನ್ನುತ್ತಿರುವ ಬಿಜೆಪಿ ರಾಜ್ಯಾಧ್ಯಕ್ಷರನ್ನು ಭೇಟಿಯಾಗಿ ವಾಸ್ತವ ಸ್ಥಿತಿಯನ್ನು ಮನವರಿಕೆ ಮಾಡಿಕೊಡುತ್ತೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ಈ ಎಕ್ಸ್‌ಪ್ರೆಸ್ ಕೆನಾಲ್‌ನಲ್ಲಿ 70ನೇ ಕಿ.ಮೀನಲ್ಲಿ ಡೈವರ್ಷನ್ ಮಾಡಲಾಗುತ್ತಿದೆ. ಹೀಗಾಗಿ ಸಾಂಪ್ರದಾಯಿಕ ಕಾಲುವೆಗಳಲ್ಲಿ ನೀರು ಹರಿದರೆ ಸೋರಿಕೆಯಾಗುತ್ತದೆ. ಆದ್ದರಿಂದ ಪೈಪ್‌ಗಳನ್ನು ಅಳವಡಿಸುವುದರಿಂದ ನೀರು ಮಾಗಡಿಯ ಕೊನೆ ಭಾಗಕ್ಕೆ ತಲುಪುತ್ತದೆ ಎಂದು ಮಂಜುನಾಥ್ ಹೇಳಿದರು.ಟೌನ್‌ಶಿಪ್ ಯೋಜನೆ ಕೈಬಿಡಲಿ:ಬಿಡದಿ ಟೌನ್‌ಶಿಪ್ ಯೋಜನೆಗೆ ಭೂ ಸ್ವಾಧೀನ ಮಾಡಿಕೊಳ್ಳಲು ರೈತರಿಗೆ ನೋಟಿಸ್ ಕೊಡುತ್ತಿರುವುದು ಗಮನಕ್ಕೆ ಬಂದಿದೆ. ನಾನು ಮತ್ತು ಮಾಜಿ ಪ್ರಧಾನಿ ದೇವೇಗೌಡರು ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಟೌನ್‌ಶಿಪ್ ಯೋಜನೆ ಕೈಬಿಡುವಂತೆ ಮನವಿ ಮಾಡಿದ್ದೇವೆ. ಇದರಿಂದ ರೈತರಿಗೆ ಅನುಕೂಲವಾಗಲಿದೆ ಎಂದರು.ಬೆಂಗಳೂರು ಸುತ್ತಮುತ್ತ ಅಪಾರ್ಟ್‌ಮೆಂಟ್‌ಗಳು ಸೇರಿದಂತೆ ಸುಮಾರು 2.50 ಲಕ್ಷ ಮನೆಗಳು ಖಾಲಿ ಇವೆ. ಕೈಗಾರಿಕಾ ಪಾರ್ಕ್‌ಗಳು ಖಾಲಿ ಇವೆ. ಮೊದಲು ಆ ಮನೆಗಳನ್ನು ಕೊಡುವ ಕೆಲಸ ಮಾಡಲಿ. ಬಿಡದಿ ಟೌನ್ ಶಿಪ್ ಹೆಸರಿನಲ್ಲಿ 9 ಸಾವಿರ ಎಕರೆಯಲ್ಲಿ 7 ಸಾವಿರ ಎಕರೆ ಕೃಷಿ ಜಮೀನನ್ನು ಹಾಳು ಮಾಡುವುದು ಸರಿಯಲ್ಲ. ಇದರಿಂದ ಮುಂದಿನ ಪೀಳಿಗೆ ಮೇಲೆ ಪರಿಣಾಮ ಬೀರುತ್ತದೆ. ಟೌನ್ ಶಿಪ್ ಕೈಬಿಟ್ಟು ಕೃಷಿ ಜಮೀನು ಉಳಿಸಿಕೊಳ್ಳುವುದು ಸೂಕ್ತ ಎಂದು ಮಂಜುನಾಥ್ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಎನ್.ಮಹೇಶ್, ಬಿಜೆಪಿ ಜಿಲ್ಲಾಧ್ಯಕ್ಷ ಆನಂದಸ್ವಾಮಿ, ಮುಖಂಡರಾದ ಗೌತಮ್ ಗೌಡ, ಪ್ರಸಾದ್ ಗೌಡ, ಜೆಡಿಎಸ್ ತಾಲೂಕು ಅಧ್ಯಕ್ಷ ಸಬ್ಬಕೆರೆ ಶಿವಲಿಂಗಯ್ಯ, ದಿಶಾ ಸಮಿತಿ ಸದಸ್ಯ ನರಸಿಂಹಮೂರ್ತಿ ಇದ್ದರು.ಬಾಕ್ಸ್‌------ಎಚ್‌ಡಿಡಿ - ಎಚ್‌ಡಿಕೆ ಫೋಟೋ ಮಾಯಾ !ರಾಮನಗರ:ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ 11 ವರ್ಷಗಳ ಸಾಧನೆಯ ಸಂಭ್ರಮದಲ್ಲಿ ಬಿಜೆಪಿ ಮೈತ್ರಿ ಧರ್ಮ ಪಾಲನೆ ಮಾಡುವುದನ್ನು ಮರೆತಿದೆ.ಕೇಂದ್ರ ಸರ್ಕಾರದ 11 ವರ್ಷಗಳ ಸಾಧನೆಯ ಪ್ರದರ್ಶಿನಿ ಕಾರ್ಯಕ್ರಮ ಹಾಗೂ ಕಾರ್ಯಕರ್ತರ ಸಭೆಯ ಬ್ಯಾನರ್ ಗಳಲ್ಲಿ ಮಾಜಿ ಪ್ರಧಾನಿ ದೇವೇಗೌಡ ಮತ್ತು ಕೇಂದ್ರ ಸಚಿವ ಕುಮಾರಸ್ವಾಮಿರವರ ಭಾವಚಿತ್ರಗಳನ್ನು ಮುದ್ರಿಸದಿರುವುದು ಜೆಡಿಎಸ್ ನಾಯಕರನ್ನು ಮುಜುಗರ ತಂದೊಡ್ಡಿತು.ಈ ಎರಡು ಬ್ಯಾನರ್ ಗಳಲ್ಲಿ ಪ್ರಧಾನಿ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ವಿರೋಧ ಪಕ್ಷದ ನಾಯಕ ಆರ್.ಅಶೋಕ್ , ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರರವರ ಭಾವಚಿತ್ರಗಳು ಮಾತ್ರ ಇವೆ.ಈ ವಿಚಾರವಾಗಿ ಪತ್ರಕರ್ತರು ಕೇಳಿದ ಪ್ರಶ್ನೆಗೆ ಸಂಸದ ಡಾ.ಸಿ.ಎನ್.ಮಂಜುನಾಥ್ ರವರು ಬ್ಯಾನರ್‌ಗಳಲ್ಲಿ ದೇವೇಗೌಡ ಮತ್ತು ಕುಮಾರಸ್ವಾಮಿರವರ ಫೋಟೋ ಹಾಕಿದ್ದೇವಲ್ಲ ಎಂದು ಬ್ಯಾನರ್ ನತ್ತ ನೋಡಿ ಒಂದು ಕ್ಷಣ ತಬ್ಬಿಬ್ಬಾದರು.

12ಕೆಆರ್ ಎಂಎನ್ 2.ಜೆಪಿಜಿರಾಮನಗರದ ಆರ್ ವಿಸಿಎಸ್ ಕಲ್ಯಾಣ ಮಂಟಪದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಂಸದ ಡಾ.ಸಿ.ಎನ್.ಮಂಜುನಾಥ್ ಮಾತನಾಡಿದರು.

PREV

Recommended Stories

ಮಾಲೇಗಾಂವ ಸ್ಫೋಟ ತೀರ್ಪು; ಸಂಭ್ರಮಾಚರಣೆ
ಧರ್ಮಸ್ಥಳ ಕ್ಷೇತ್ರದ ಹೆಸರು ಕೆಡಿಸಲು ಷಡ್ಯಂತ್ರ: ಪ್ರಮೋದ ಮುತಾಲಿಕ