ಭಟ್ಕಳ: ಪಟ್ಟಣದ ತಮ್ಮ ಕಚೇರಿಯಲ್ಲಿ ಭಾನುವಾರ ಸಂಜೆ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್ ವೈದ್ಯ ಜನಸ್ಪಂದನಾ ಸಭೆ ನಡೆಸಿ ಜನರ ಅಹವಾಲು ಕೇಳಿದರು.
ಭಟ್ಕಳ-ಕುಂದಾಪುರ ಬಸ್ಸು ಬೆಳಕೆ ಭಾಗದಲ್ಲಿ ನಿಲ್ಲಿಸದಿರುವ ಬಗ್ಗೆ ಜನರು ದೂರಿದರು. ಹೆಂಜಲೆಯಲ್ಲಿ ಸಭಾಭವನ ನಿರ್ಮಿಸಲು ಅನುದಾನ ಒದಗಿಸುವಂತೆ ಜನರು ಸಚಿವರಲ್ಲಿ ಮನವಿ ಮಾಡಿದರು. ಕುಮಟಾ ಮೀನು ಮಾರುಕಟ್ಟೆ ಹಿಂದುಗಡೆ 100 ಮೀಟರ್ ಜಟ್ಟಿ ನಿರ್ಮಿಸಿಕೋಡುವಂತೆ ಕುಮಟಾದ ಮೀನುಗಾರ ಮಹಿಳೆಯರ ಸಹಕಾರಿ ಸಂಘದ ವತಿಯಿಂದ ಸಚಿವರಿಗೆ ಮನವಿ ನೀಡಿದರು.
ತಾಲೂಕಿನ ಬೆಳ್ಕೆಯ ಹೊನ್ನೆಮಡಿ ಶಾಲೆಗೆ ಅಗತ್ಯ ಇರುವ ತರಗತಿ ಕೊಠಡಿ ಹಾಗೂ ಶಾಲಾ ಕಂಪೌಂಡ ನಿರ್ಮಿಸುವಂತೆ ಸಚಿವರಿಗೆ ಸ್ಥಳೀಯರು ಮನವಿ ಸಲ್ಲಿಸಿದರು. ತೆಂಗಿನಗುಂಡಿ ಪ್ರೌಡಶಾಲೆಯ ಕೊಠಡಿ ದುರಸ್ಥಿ ಹಾಗೂ ಸುಣ್ಣಬಣ್ಣ ಬಳಿಯಲು ಅಗತ್ಯ ನೆರವು ನೀಡುವಂತೆ ಶಾಲಾಭಿವೃದ್ದಿ ಸಮಿತಿಯಿಂದ ಮನವಿ ಸಲ್ಲಿಸಲಾಯಿತು. ಅನಾರೋಗ್ಯ, ಮದುವೆ, ಮನೆ ರಿಪೇರಿ, ಮಕ್ಕಳ ವಿದ್ಯಾಭ್ಯಾಸಕ್ಕಾಗಿ ನೆರವು ಕೋರಿ ಬಂದಂತಹ ಅರ್ಜಿಗಳಿಗೆ ಸ್ಥಳದಲ್ಲಿಯೇ ವೈಯಕ್ತಿಕ ಧನ ಸಹಾಯ ಮಾಡಿದ ಸಚಿವರು ಸರ್ಕಾರದಿಂದಲೂ ಅಗತ್ಯ ನೆರವು ಕೊಡಿಸುವ ಭರವಸೆ ನೀಡಿದರು. ಸಚಿವರು ಸಭೆಯಲ್ಲಿದ್ದ ಕಾರ್ಮಿಕ ಮುಖಂಡರಲ್ಲಿ ಭಟ್ಕಳಕ್ಕೆ ₹58 ಕೋಟಿ ವೆಚ್ಚದಲ್ಲಿ ಕಾರ್ಮಿಕರ ಮಕ್ಕಳ ಶಿಕ್ಷಣಕ್ಕೆ ಅನುಕೂಲಕ್ಕಾಗಿ ವಸತಿ ಶಾಲೆ ಮಂಜೂರಿಸಿಕೊಂಡು ಬಂದಿದೆ. ಸದ್ಯದಲ್ಲೇ ಕಟ್ಟಡ ಕಾಮಗಾರಿ ಆರಂಭವಾಗಲಿದೆ ಎಂದರು.ಈ ಸಂದರ್ಭದಲ್ಲಿ ಸಚಿವರ ಪುತ್ರಿ ಬೀನಾ ವೈದ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ ನಾಯ್ಕ, ಪ್ರಧಾನ ಕಾರ್ಯದರ್ಶಿ ಸುರೇಶ ನಾಯ್ಕ ಮುಂತಾದವರಿದ್ದರು.
ಭಟ್ಕಳದ ಕಚೇರಿಯಲ್ಲಿ ಸಚಿವ ಮಂಕಾಳ ಎಸ್ ವೈದ್ಯ ಜನಸ್ಪಂದನಾ ಸಭೆ ನಡೆಸಿ ಜನರ ಅಹವಾಲು ಕೇಳಿದರು.