ಜೇಡಿ ಮಣ್ಣು ಸಮಸ್ಯೆ ಶೀಘ್ರ ಪರಿಹರಿಸಿ: ವಿ.ನರಸಿಂಹ ಒತ್ತಾಯ

KannadaprabhaNewsNetwork |  
Published : Mar 19, 2025, 12:36 AM IST
ತಹಸೀಲ್ದಾರ್ ಪ್ರದೀಪ್ ಕುರ್ಡೇಕರ್ ಅವರಿಗೆ ಮನವಿ‌ ಸಲ್ಲಿಸಲಾಯಿತು | Kannada Prabha

ಸಾರಾಂಶ

ಮಂಗಳವಾರ ಕುಂದಾಪುರದ ಶಾಸ್ತ್ರೀ ಸರ್ಕಲ್‌ನಲ್ಲಿ ಉಡುಪಿ ಜಿಲ್ಲಾ ಹಂಚು ಕಾರ್ಮಿಕರ ಸಂಘ (ಸಿಐಟಿಯು) ಕುಂದಾಪುರ ವತಿಯಿಂದ ಹಂಚು ಉದ್ಯಮಕ್ಕೆ ಬೇಕಾದ ಜೇಡಿ‌ಮಣ್ಣನ್ನು ತೆಗೆಯುವ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ಪ್ರತಿಭಟನಾ ಸಭೆ ನಡೆಯಿತು.

ಕನ್ನಡಪ್ರಭ ವಾರ್ತೆ ಕುಂದಾಪುರ

ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳಿಂದಾಗಿ ಜೇಡಿಮಣ್ಣು ತೆಗೆಯಲು ನಿರ್ಬಂಧ ಹೇರಲಾಗಿದೆ. ಹಂಚು ಉದ್ಯಮಕ್ಕೆ ಅವಶ್ಯವಿರುವ ಜೇಡಿಮಣ್ಣಿನ ಸಮಸ್ಯೆ ಸರ್ಕಾರ ಶೀಘ್ರವೇ ಪರಿಹಾರ‌ ಮಾಡಬೇಕು ಎಂದು ಉಡುಪಿ ಜಿಲ್ಲಾ ಹೆಂಚು ಕಾರ್ಮಿಕ ಸಂಘದ ಅಧ್ಯಕ್ಷ ವಿ. ನರಸಿಂಹ ಒತ್ತಾಯಿಸಿದ್ದಾರೆ.

ಮಂಗಳವಾರ ನಗರದ ಶಾಸ್ತ್ರೀ ಸರ್ಕಲ್‌ನಲ್ಲಿ ಉಡುಪಿ ಜಿಲ್ಲಾ ಹಂಚು ಕಾರ್ಮಿಕರ ಸಂಘ (ಸಿಐಟಿಯು) ಕುಂದಾಪುರ ವತಿಯಿಂದ ಹಂಚು ಉದ್ಯಮಕ್ಕೆ ಬೇಕಾದ ಜೇಡಿ‌ಮಣ್ಣನ್ನು ತೆಗೆಯುವ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ನಡೆದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.

ಬ್ರಿಟಿಷ್ ಕಾಲದಿಂದಲೂ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಂಚು ಉದ್ಯಮ ಸಾಕಷ್ಟು ಜನರಿಗೆ ಉದ್ಯೋಗವನ್ನು ಕೊಟ್ಟಿದೆ. ದ.ಕ ಜಿಲ್ಲಿಯಲ್ಲಿದ್ದ ಸುಮಾರು 40 ಕಾರ್ಖಾನೆಗಳು ಬಂದ್‌ ಆಗಿ ಇದೀಗ ಬೆರಳೆಣಿಕೆಯ ಕಾರ್ಖಾನೆಗಳು ಕಾರ್ಯಾಚರಿಸುತ್ತಿವೆ. ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ 17 ಕಾರ್ಖಾನೆಗಳಿದ್ದು, ಇದೀಗ ಹತ್ತಕ್ಕೆ ಇಳಿದಿದೆ. ಜೇಡಿಮಣ್ಣಿನ ಸಮಸ್ಯೆಯಿಂದಾಗಿ ಈಗ ಇರುವ ಹತ್ತು ಕಾರ್ಖಾನೆಗಳು ಕೂಡ ಮುಚ್ಚುವಂತಹ ಪರಿಸ್ಥಿತಿ ತಲೆದೋರಿದೆ ಎಂದರು.

ವಾರದೊಳಗೆ ಅವೈಜ್ಞಾನಿಕ‌ ನೀತಿ‌ ಸರಿಪಡಿಸಿ ಜೇಡಿಮಣ್ಣು ತೆಗೆಯಲು ಸರ್ಕಾರ ಅವಕಾಶ‌ ಮಾಡಿಕೊಡಬೇಕು. ಸರ್ಕಾರ ಮಧ್ಯಪ್ರವೇಶ ಮಾಡದಿದ್ದಲ್ಲಿ ಕಾರ್ಖಾನೆಗಳು‌ ಮುಚ್ಚಿ ಕುಂದಾಪುರ ಸರಿಸುಮಾರು 6,000 ಕ್ಕೂ ಮಿಕ್ಕಿ ಕಾರ್ಮಿಕರ ಕುಟುಂಬ ಬೀದಿಗೆ ಬೀಳಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಹಂಚು ಕಾರ್ಮಿಕ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್. ನರಸಿಂಹ ಮಾತನಾಡಿ, ಇದು ಕೇವಲ ಸಾಂಕೇತಿಕ ಪ್ರತಿಭಟನೆ‌. ಕೆಲವೇ ದಿನಗಳಲ್ಲಿ ಬೇಸಿಗೆ ಮುಗಿಯಲಿದೆ. ಮಳೆಗಾಲ ಆರಂಭವಾಗುವ ಮೊದಲು‌ ಸಮಸ್ಯೆ ಪರಿಹಾರ ಆಗದೇ ಇದ್ದರೆ ಮುಂದಿನ ದಿನಗಳಲ್ಲಿ ತೀವ್ರ ಹೋರಾಟ ಕೈಗೊಳ್ಳಲಿದ್ದೇವೆ ಎಂದು ಎಚ್ಚರಿಕೆ ನೀಡಿದರು.

ಶಾಸ್ತ್ರೀವೃತ್ತದಿಂದ ಆರಂಭಗೊಂಡ ಕಾರ್ಮಿಕರ ಬೃಹತ್ ಮೆರವಣಿಗೆ ನಗರದ ಪ್ರಮುಖ ರಸ್ತೆಯಲ್ಲಿ ಸಂಚರಿಸಿ ಪ್ರಜಾಸೌಧಕ್ಕೆ ತೆರಳಿ ತಹಸೀಲ್ದಾರ್ ಪ್ರದೀಪ್ ಕುರ್ಡೇಕರ್ ಅವರಿಗೆ ಮನವಿ‌ ಸಲ್ಲಿಸಲಾಯಿತು. ಬಳಿಕ ಮತ್ತೆ ಮೆರವಣಿಗೆ ಮೂಲಕ ಶಾಸ್ತ್ರೀವೃತ್ತಕ್ಕೆ ಆಗಮಿಸಿ ಅಲ್ಲಿ ಬೃಹತ್ ಪ್ರತಿಭಟನಾ ಸಭೆ ನಡೆಯಿತು.

ಸಿಐಟಿಯು ಜಿಲ್ಲಾ ಅಧ್ಯಕ್ಷ ಕೆ ಶಂಕರ್, ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ, ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಸಿಐಟಿಯು ತಾಲೂಕು ಸಂಚಾಲಕ ಚಂದ್ರಶೇಖರ ವಿ, ಪ್ರಮುಖರಾದ ಸುರೇಂದ್ರ ಎಚ್, ಜಿ ಡಿ ಪಂಜು ಪೂಜಾರಿ, ಪ್ರಕಾಶ್ ಕೋಣಿ, ಚಂದ್ರ ಗ್ರೀನ್ ಲ್ಯಾಂಡ್ ಮೊದಲಾದವರಿದ್ದರು.

PREV

Recommended Stories

ನಾಳೆ ಕರಾವಳಿ, ಮಲೆನಾಡು ಜಿಲ್ಲೆಗಳಿಗೆ ರೆಡ್‌ ಅಲರ್ಟ್‌
ಮೈಸೂರು ದಸರಾ ಆನೆಗಳಿಗೆ 630 ಟನ್‌ ಆಹಾರ!