ಸಮೃದ್ಧ ರಾಷ್ಟ್ರ ನಿರ್ಮಾಣಕ್ಕೆ ಸಂಕಲ್ಪ ಮಾಡಿ

KannadaprabhaNewsNetwork | Published : Aug 16, 2024 12:45 AM

ಸಾರಾಂಶ

ತಮ್ಮ ಸಂದೇಶದಲ್ಲಿ ಸೈನಿಕರ ಕೊಡುಗೆ ಸ್ಮರಿಸಿದ ತಹಸೀಲ್ದಾರ, ವೀರಯೋಧರು ಸ್ಥಿತಪ್ರಜ್ಞತೆಯಿಂದ ರಾಷ್ಟ್ರದ ಗಡಿ ಕಾಯುತ್ತಿರುವ ಸಮಸ್ತ ಯೋಧರಿಗೆ ಗೌರವಪೂರ್ವಕ ಸಂದೇಶ ಸಲ್ಲಿಸುವೆ

ಶಿರಹಟ್ಟಿ: ಜಾತಿ, ಧರ್ಮ, ಭಾಷೆ ಮೀರಿ ಸುಖ,ಶಾಂತಿ ಹಾಗೂ ಸಮೃದ್ಧ ರಾಷ್ಟ್ರ ನಿರ್ಮಾಣಕ್ಕಾಗಿ ನಾವೆಲ್ಲರೂ ಸಂಕಲ್ಪ ಮಾಡೋಣ ಎಂದು ತಹಸೀಲ್ದಾರ್‌ ಅನಿಲ ಕೆ.ಬಡಿಗೇರ ಹೇಳಿದರು.

ಗುರುವಾರ ಪಟ್ಟಣದ ಎಸ್.ಎಂ.ಡಬಾಲಿ ತಾಲೂಕು ಕ್ರೀಡಾಂಗಣದಲ್ಲಿ ತಾಲೂಕಾಡಳಿತದ ವತಿಯಿಂದ ನೆರವೇರಿಸಲ್ಪಟ್ಟ ೭೮ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ಧ್ವಜವಂದನೆ ಸ್ವೀಕರಿಸಿ ಮಾತನಾಡಿದರು.

ಭಾರತೀಯರ ಉದಾರತೆ ಅರಿತಿದ್ದ ಆಂಗ್ಲರು ತಮ್ಮ ಕುಟೀಲ ನೀತಿಯ ಒಳಸಂಚಿನಿಂದ ಧರ್ಮ, ಸಂಸ್ಕೃತಿ, ಭಾಷೆಯ ಆಧಾರದ ಮೇಲೆ ಭಾರತೀಯರನ್ನು ವಿಘಟಿಸಿದರು. ಪರಿಸರ ಸಂರಕ್ಷಣೆ, ಸ್ವಚ್ಛತೆ, ಪ್ರಕೃತಿ ಸಂಪತ್ತು ಕಾಯುವುದು ನಮ್ಮ ಆದ್ಯ ಕರ್ತವ್ಯವಾಗಬೇಕು. ಈ ನಿಟ್ಟಿನಲ್ಲಿ ಎಲ್ಲರೂ ಸಾಗಬೇಕು ಎಂದು ಕರೆ ಕೊಟ್ಟರು.

ವೀರಯೋಧರ ಸ್ಮರಣೆ:ತಮ್ಮ ಸಂದೇಶದಲ್ಲಿ ಸೈನಿಕರ ಕೊಡುಗೆ ಸ್ಮರಿಸಿದ ತಹಸೀಲ್ದಾರ, ವೀರಯೋಧರು ಸ್ಥಿತಪ್ರಜ್ಞತೆಯಿಂದ ರಾಷ್ಟ್ರದ ಗಡಿ ಕಾಯುತ್ತಿರುವ ಸಮಸ್ತ ಯೋಧರಿಗೆ ಗೌರವಪೂರ್ವಕ ಸಂದೇಶ ಸಲ್ಲಿಸುವೆ ಎಂದರು.

ಬಡತನದಲ್ಲಿರುವ ರಾಷ್ಟ್ರವನ್ನು ಬಲಿಷ್ಟ ರಾಷ್ಟ್ರವನ್ನಾಗಿ ಮಾಡಲು ವೈಜ್ಞಾನಿಕವಾಗಿ ಹೊಸ ತಂತ್ರಜ್ಞಾನ ಕಂಡು ಹಿಡಿಯುವ ಮೂಲಕ ದೇಶಕ್ಕೆ ಅನೇಕ ಮಹನೀಯರು ತಮ್ಮ ಕೊಡುಗೆ ನೀಡಿದ್ದಾರೆ. ದೇಶದ ಸ್ವಾತಂತ್ರ್ಯಕ್ಕಾಗಿ ಆತ್ಮಾರ್ಪಣೆ ಮಾಡಿದ ಆತ್ಮಗಳ ಸಂತೃಪ್ತಿಗಾಗಿ ನಿಸ್ವಾರ್ಥತೆಯಿಂದ ನಡೆದಾಗ ಮಾತ್ರ ಬೆಂಬಲ ಬರಲು ಸಾಧ್ಯ ಎಂದರು.

ಶಾಸಕ ಚಂದ್ರು ಲಮಾಣಿ ಅಧ್ಯಕ್ಷತೆ ವಹಿಸಿದ್ದರು. ಸಿಪಿಐ ನಾಗರಾಜ ಮಾಡಳ್ಳಿ, ಕ್ಷೇತ್ರ ಶಿಕ್ಷಣಾಧಿಕಾರಿ ಎಚ್. ನಾಣಕೀ ನಾಯಕ, ತಾಪಂ ಕಾರ್ಯನಿವಾಹಕ ಅಧಿಕಾರಿ ಎಸ್.ಎಸ್. ಕಲ್ಮನಿ, ಪಪಂ ಮುಖ್ಯಾಧಿಕಾರಿ ಸಿದ್ದರಾಯ ಕಟ್ಟಿಮನಿ, ಕೃಷಿ ಇಲಾಖೆಯ ರೇವಣೆಪ್ಪ ಮನಗೂಳಿ, ಅರಣ್ಯ ಇಲಾಖೆಯ ಕೌಸಿಕ ದಳವಾಯಿ, ರಾಮಪ್ಪ ಪೂಜಾರ ವೇದಿಕೆ ಮೇಲೆ ಇದ್ದರು.

ಮುಖಂಡರಾದ ಎಂ.ಕೆ.ಲಮಾಣಿ, ಕಂದಾಯ ನಿರೀಕ್ಷಕ ಬಸರಾಜ ಕಾತರಾಳ, ನಾಗರಾಜ ಲಕ್ಕುಮಡಿ, ಜಾನು ಲಮಾಣಿ, ಹೊನ್ನಪ್ಪ ಶಿರಹಟ್ಟಿ, ಫಕ್ಕೀರೇಶ ರಟ್ಟಿಹಳ್ಳಿ, ಹಸರತ ಢಾಲಾಯತ, ಗೂಳಪ್ಪ ಕರಿಗಾರ, ಎಚ್.ಆರ್. ಬೆನಹಾಳ, ಅಶೋಕ ವರವಿ, ಅಕಬರ ಯಾದಗಿರಿ, ಶೀನು ಬಾರಬರ, ನಂದಾ ಪಲ್ಲೇದ, ಎಚ್.ಎಂ. ದೇವಗೀರಿ ಇತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.

Share this article