ಕನ್ನಡಪ್ರಭ ವಾರ್ತೆ ಮಳವಳ್ಳಿ
ಹಚ್ಚ ಹಸಿರಿನ ಸುಂದರ ಬೆಟ್ಟ, ಗುಡ್ಡಗಳು ಇರುವ, ನದಿಗಳು ಹರಿಯುವ, ಸಾಧು-ಸಂತರು-ದಾಸರು- ಶಿವಶರಣರು-ಕವಿಗಳಿಂದ ಕಂಗೊಳಿಸುತ್ತಿರುವ ಕನ್ನಡ ನಾಡಿನಲ್ಲಿ ಕನ್ನಡ ಭಾಷೆಯನ್ನು ಬಲಿಷ್ಠಗೊಳಿಸಲು ನಾವೆಲ್ಲರೂ ಸಂಕಲ್ಪ ಮಾಡಬೇಕಿದೆ ಎಂದು ಶಾಸಕ ಪಿ.ಎಂ ನರೇಂದ್ರಸ್ವಾಮಿ ಕರೆ ನೀಡಿದರು.ಪಟ್ಟಣದ ಭಕ್ತ ಕನಕದಾಸ ಕ್ರೀಡಾಂಗಣದಲ್ಲಿ ಶುಕ್ರವಾರ ತಾಲೂಕು ಆಡಳಿತ ಆಯೋಜಿಸಿದ್ದ 69ನೇ ಕನ್ನಡ ರಾಜೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿ, ಯುವ ಪೀಳಿಗೆಗೆ ಕನ್ನಡ ನಾಡಿನ ಇತಿಹಾಸ, ಸಂಸ್ಕೃತ, ಕಲೆ, ಭಾಷೆ ಬಗ್ಗೆ ಅರಿವು ಮೂಡಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದರು.
ಏಕೀಕರಣದ ವರದಿಯನ್ನು ಅಂದಿನ ಮುಖ್ಯಮಂತ್ರಿ ದಿ.ದೇವರಾಜ ಅರಸು ಕರ್ನಾಟಕ ಎಂಬ ಹೆಸರಿಗೆ ಮುನ್ನುಡಿ ಬರೆದರು. ಪ್ರಸ್ತುತ ವಿಜೃಂಭಣೆಯಿಂದ ರಾಜೋತ್ಸವ ಆಚರಿಸುತ್ತಿದ್ದೇವೆ. ರಾಷ್ಟ್ರದ 22 ಭಾಷೆಗಳಲ್ಲಿ ಶ್ರೇಷ್ಠವಾದ ಕನ್ನಡ ಭಾಷೆ ಬೆಳವಣಿಗೆಗೆ ಎಲ್ಲರ ಸಹಕಾರ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.ಕನ್ನಡ ನಾಡು, ವೈಶಿಷ್ಟ, ಶ್ರೀಗಂಧ ನಾಡು, ಶಿಲ್ಪ ಕಲೆಯ ಬೀಡು, ಸಂಸ್ಕೃತಿ ತವರೂರು ನಮ್ಮ ಕರ್ನಾಟಕ ಸಾಕಷ್ಟು ವಿಶಿಷ್ಟತೆಗಳಿಂದ ಕೂಡಿದೆ. ಕನ್ನಡಕ್ಕೆ ಮೆರಗು ತಂದುಕೊಡುವ ನಿಟ್ಟಿನಲ್ಲಿ ಹೆಚ್ಚು ಜ್ಞಾನಪೀಠ ಪ್ರಶಸ್ತಿ ನೀಡಿದ್ದಂಥ ಸಮೃದ್ಧ ರಾಜ್ಯ ನಮ್ಮದು. ರಾಷ್ಟ್ರಕವಿ ಕುವೆಂಪು, ವರಕವಿ ಬೇಂದ್ರೆ ಸೇರಿದಂತೆ ದೊಡ್ಡ ಕವಿಗಳನ್ನು ಹೊಂದಿರುವ ಕನ್ನಡ ಭಾಷೆ ತನ್ನದೇ ಆದ ಶ್ರೀಮಂತಿಯನ್ನು ಹೊಂದಿದೆ ಎಂದರು.
ತಹಸೀಲ್ದಾರ್ ಬಿ.ವಿ.ಕುಮಾರ್ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಕನ್ನಡ ಬರೀ ಭಾಷೆಯಲ್ಲ. ಅದು ನಮ್ಮ ಉಸಿರು, ಬದುಕಾಗಿದೆ, ಕರ್ನಾಟಕ ತನ್ನದೇ ಆದ ಶ್ರೀಮಂತ ಪರಂಪರೆ, ಸಂಸ್ಕೃತಿ, ಇತಿಹಾಸ ಹೊಂದಿರುವ ನಾಡು, ಕಲೆ, ಸಾಹಿತ್ಯಕ್ಕೆ ತವರೂರು ನಮ್ಮದು, ಚದುರಿ ಹೋಗಿದ್ದ ಕನ್ನಡ ಭಾಷಿಗರು ಹಲವರು ಹೋರಾಟದ ಫಲವಾಗಿ ಒಟ್ಟುಗೂಡಿಸಿ ಕರ್ನಾಟಕ ರಾಜ್ಯವನ್ನು ರೂಪಿಸಲಾಯಿತು ಎಂದರು.ಇದೇ ವೇಳೆ ವಿವಿಧ ಕ್ಷೇತ್ರಗಳ ಸಾಧನೆ ಮಾಡಿದ ಸಾಧಕರಿಗೆ ಕನ್ನಡ ರಾಜೋತ್ಸವ ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು. ಪೊಲೀಸ್ ಇಲಾಖೆ ಸೇರಿದಂತೆ ವಿವಿಧ ಶಾಲೆಗಳ ಮಕ್ಕಳು ನಡೆಸಿದ ಪಥ ಸಂಚಲನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದರು. ಹಿರಿಯರಿಗೆ ಉಚಿತವಾಗಿ ಕನ್ನಡಕವನ್ನು ವಿತರಿಸಲಾಯಿತು.
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಜಿಲ್ಲಾ ಅಧ್ಯಕ್ಷ ಚಿಕ್ಕಲಿಂಗಯ್ಯ, ಪುರಸಭೆ ಅಧ್ಯಕ್ಷ ಪುಟ್ಟಸ್ವಾಮಿ, ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಎನ್.ಕೃಷ್ಣ, ತಾಪಂ ಇಒ ಎಚ್.ಜಿ.ಶ್ರೀನಿವಾಸ್, ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಈ.ಉಮಾ, ಪುರಸಭೆ ಮುಖ್ಯಾಧಿಕಾರಿ ಎಂ.ಸಿ.ನಾಗರತ್ನ, ಸದಸ್ಯರಾದ, ಇಂದ್ರಮ್ಮ ದೊಡ್ಡಯ್ಯ, ಎಂ.ಎನ್.ಶಿವಸ್ವಾಮಿಪ್ರಮೀಳಾ, ನೂರುಲ್ಲಾ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸಿ.ಪಿ.ರಾಜು, ದೊಡ್ಡಯ್ಯ, ಕಸಾಪ ತಾಲೂಕು ಘಟಕದ ಅಧ್ಯಕ್ಷ ಚೇತನ್ ಕುಮಾರ್, ಕರವೇ ತಾಲೂಕು ಘಟಕದ ಅಧ್ಯಕ್ಷ ಅಪ್ಪೇಗೌಡ, ಕ್ಷೇತ್ರ ಸಮನ್ವಯಾಧಿಕಾರಿ ಎಂ.ಕೆ.ಶ್ರೀನಿವಾಸ್, ಮುಖಂಡರಾದ ವೆಂಕಟೇಶ್, ರಮೇಶ್, ಅಪ್ಪಾಜಿಗೌಡ ಇದ್ದರು.