ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ರಾಜ್ಯದಲ್ಲಿ ರಚನೆಗೊಂಡಿರುವ ಕಾಂಗ್ರೆಸ್ ಸರ್ಕಾರದ ಮೊದಲ 100 ದಿನಗಳಲ್ಲಿ 10 ಪ್ರಮುಖ ಕಾರ್ಯಕ್ರಮಗಳ ಜಾರಿಗೊಳಿಸುತ್ತಿದ್ದು, ಜತೆಗೆ ಇನ್ನೂ ಹಲವಾರು ಯೋಜನೆಗಳನ್ನು ರೂಪಿಸಿ ಅನುಷ್ಠಾನಕ್ಕೆ ತರಲಾಗುತ್ತಿದೆ. ಅದಕ್ಕಾಗಿ ಮೊದಲ ನೂರು ದಿನಗಳಲ್ಲಿ ಆಡಳಿತ, ಅಭಿವೃದ್ಧಿ ಮತ್ತು ಒಳಗೊಳ್ಳುವಿಕೆಗೆ ವಿಶೇಷ ಕಾರ್ಯಸೂಚಿಗಳನ್ನು ತಯಾರಿಸಲಾಗಿದೆ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ.ಅಜಯ್ ಧರ್ಮಸಿಂಗ್ ತಿಳಿಸಿದರು.
ಕನ್ನಡಪ್ರಭ ವಾರ್ತೆ ರಾಯಚೂರು
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ರಾಜ್ಯದಲ್ಲಿ ರಚನೆಗೊಂಡಿರುವ ಕಾಂಗ್ರೆಸ್ ಸರ್ಕಾರದ ಮೊದಲ 100 ದಿನಗಳಲ್ಲಿ 10 ಪ್ರಮುಖ ಕಾರ್ಯಕ್ರಮಗಳ ಜಾರಿಗೊಳಿಸುತ್ತಿದ್ದು, ಜತೆಗೆ ಇನ್ನೂ ಹಲವಾರು ಯೋಜನೆಗಳನ್ನು ರೂಪಿಸಿ ಅನುಷ್ಠಾನಕ್ಕೆ ತರಲಾಗುತ್ತಿದೆ. ಅದಕ್ಕಾಗಿ ಮೊದಲ ನೂರು ದಿನಗಳಲ್ಲಿ ಆಡಳಿತ, ಅಭಿವೃದ್ಧಿ ಮತ್ತು ಒಳಗೊಳ್ಳುವಿಕೆಗೆ ವಿಶೇಷ ಕಾರ್ಯಸೂಚಿಗಳನ್ನು ತಯಾರಿಸಲಾಗಿದೆ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ.ಅಜಯ್ ಧರ್ಮಸಿಂಗ್ ತಿಳಿಸಿದರು.
ಸ್ಥಳೀಯ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತದಿಂದ ಶನಿವಾರ ಹಮ್ಮಿಕೊಂಡಿದ್ದ 80ನೇ ಸ್ವಾತಂತ್ರ್ಯೋತ್ಸವದ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಮೊದಲ ಆದ್ಯತೆಯಡಿ 10 ಪ್ರಮುಖ ಅಂಶಗಳನ್ನು 100 ದಿನಗಳಲ್ಲಿ ಕಾರ್ಯಗತಗೊಳಿಸಲಾಗುತ್ತಿದೆ. ರೈತ ಮಿತ್ರ /ಬಡವರ ಬಂಧು ಕಾರ್ಯಕ್ರಮದಡಿ ಒಂದು ಹೆಕ್ಟೇರ್ ತನಕ ಜಮೀನು ಹೊಂದಿರುವ ರೈತರಿಗೆ ಕೃಷಿ ಯಂತ್ರೋಪಕರಣಗಳ ಬಾಡಿಗೆ ಮೊತ್ತದಲ್ಲಿ ಶೇ.50 ರಷ್ಟು ಸಬ್ಸಿಡಿ, ಗ್ರಾಮಾನುಭವ ಕಾರ್ಯಕ್ರಮದಡಿ ವಿದ್ಯಾರ್ಥಿಗಳಿಗೆ ಕೃಷಿ, ತೋಟಗಾರಿಕೆ, ಪಶುಸಂಗೋಪನೆ, ಕಲೆ ಮತ್ತು ಸಂಸ್ಕೃತಿ ಸೇರಿದಂತೆ ಗ್ರಾಮೀಣ ಬದುಕಿನ ಅನುಭವಕ್ಕಾಗಿ ಗ್ರಾಮ ವಾಸ್ತವ್ಯಕ್ಕೆ ಅವಕಾಶ, ಯುವ ಯುಗ – ಯುವ ಕರ್ನಾಟಕ ನಿರ್ಮಾಣದ ಭಾಗವಾಗಿ ಭಾರತ್ ಜೋಡೋ ಯುವಕ ಸಂಘ ಮಿಷನ್, ಯುವ ಉದ್ಯೋಗ ಸೇತು – ಖಾಸಗಿ ಉದ್ಯೋಗ ವಿನಿಮಯ ವ್ಯವಸ್ಥೆ, ಸರ್ಕಾರಿ ಅಸ್ಪತ್ರೆಗಳ ದತ್ತು ಯೋಜನೆ, ನಶೆ ಮುಕ್ತ ಕರ್ನಾಟಕ, ಪ್ರಜಾಸೇವೆ ಇಲಾಖೆ, ಭೂ ಗ್ಯಾರಂಟಿ, ಕರ್ನಾಟಕ ಮೊಬಿಲಿಟಿ ಗ್ರೀಡ್ ಮಿಷನ್ ಹಾಗೂ ತೇಗದ ಸಿರಿ ಯೋಜನೆಗಳನ್ನು ರೂಪಿಸಿ ಅನುಷ್ಠಾನಕ್ಕೆ ತರಲಾಗುತ್ತಿದೆ ಎಂದು ವಿವರಿಸಿದರು.
ಗೌರವ ವಂದನೆ ಸ್ವೀಕಾರ:
ಧ್ವಜಾರೋಹಣ ನಂತರ ತೆರೆದ ವಾಹನದಲ್ಲಿ ತೆರಳಿದ ಉಸ್ತುವಾರಿ ಸಚಿವರು ಕವಾಯತು ತಂಡಗಳಿಂದ ಗೌರವ ವಂದನೆ ಸ್ವೀಕರಿಸಿದರು. ನಂತರ 20 ತಂಡಗಳ ಪಥ ಸಂಚಲನ ಆಕರ್ಷಿಸಿತು. ಇದೇ ವೇಳೆ ವಿವಿಧ ಶಾಲಾ ಮಕ್ಕಳು ನಡೆಸಿಕೊಟ್ಟ ದೇಶ ಭಕ್ತಿಯ ಹಾಡು ಮತ್ತು ನೃತ್ಯರೂಪಕ ಎಲ್ಲರ ಗಮನ ಸೆಳೆಯಿತು.
ಶಾಸಕ ಡಾ.ಶಿವರಾಜ ಎಸ್. ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು. ಗ್ರಾಮೀಣ ಶಾಸಕ ಬಸನಗೌಡ ದದ್ದಲ್, ಎಂಎಲ್ಸಿ ವಸಂತಕುಮಾರ, ಡಿಸಿ ಪೂವಿತಾ ಎಸ್., ಜಿಪಂ ಸಿಇಒ ಅಧಿಕಾರಿ ಈಶ್ವರ್ ಕಾಂದೂ, ಎಸ್ಪಿ ಅರುಣಾಂಗ್ಷು ಗಿರಿ, ರಾಯಚೂರು ಪಾಲಿಕೆ ಆಯುಕ್ತ ಜುಬಿನ್ ಮೊಹಾಪಾತ್ರ, ವಿವಿಧ ನಿಗಮ ಮಂಡಳಿಗಳ ಅಧ್ಯಕ್ಷರು, ವಿವಿಧ ಇಲಾಖೆಯ ಜಿಲ್ಲಾಮಟ್ಟದ ಅಧಿಕಾರಿ, ಸಿಬ್ಬಂದಿ, ರಾಜಕೀಯ ಪಕ್ಷಗಳ ಮುಖಂಡರು, ಹೋರಾಟಗಾರರು, ವಿದ್ಯಾರ್ಥಿಗಳು, ಸಾರ್ವಜನಿಕರು ಇದ್ದರು.
-----ಬಾಕ್ಸ್----------ಜನ ಹಿತಕ್ಕಾಗಿ ಒಟ್ಟಾಗಿ ಕೆಲಸ ಮಾಡೋಣ
ಭಾರತದ ನಾಗರಿಕರಾಗಿ ಭವ್ಯ ಪರಂಪರೆ, ಸಂಸ್ಕೃತಿಗಳನ್ನು ಉಳಿಸಿ ಬೆಳೆಸಿಕೊಂಡು ಹೋಗುವತ್ತ ನಾವೆಲ್ಲರೂ ಸಾಗಬೇಕಾಗಿದೆ. ಜಾತಿ, ಭಾಷೆ, ಪಂಗಡಗಳ ಸಂಕುಚಿತ ಭಾವನೆಯಿಂದ ಹೊರಬಂದು ಸ್ನೇಹ ಹಾಗೂ ಸೌಹಾರ್ದ ವಾತಾವರಣ ನಿರ್ಮಿಸಿ ದೇಶದ ಒಗ್ಗಟ್ಟು ಮತ್ತು ಐಕ್ಯತೆಯನ್ನು ಕಾಪಾಡಿ ಬಲಿಷ್ಠ ರಾಷ್ಟ್ರ ನಿರ್ಮಾಣ ಮಾಡುವ ನಿಟ್ಟಿನಲ್ಲಿ ನಾವು ಒಗ್ಗಟ್ಟಾಗಿ ಶ್ರಮಿಸೋಣ. ಜಿಲ್ಲೆಯ ಜನರ ಹಿತವನ್ನು ಕಾಪಾಡುವುದಕ್ಕಾಗಿ ಪಕ್ಷ ಭೇದ ಮರೆತು ಜನಪ್ರತಿನಿಧಿಗಳು, ಅಧಿಕಾರಿಗಳು, ಎಲ್ಲ ವರ್ಗದವರು ಸೇರಿ ಪ್ರಾಮಾಣಿಕವಾಗಿ ಕೆಲಸ ಮಾಡೋಣ ಎಂದು ಸಚಿವ ಡಾ.ಅಜಯ್ ಧರ್ಮಸಿಂಗ್ ಆಶಯದ ನುಡಿಗಳನ್ನಾಡಿದರು.
------------
15ಕೆಪಿಆರ್‌ಸಿಆರ್ 01:
ರಾಯಚೂರು ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ 80 ನೇ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಉಸ್ತುವಾರಿ ಸಚಿವ ಡಾ.ಅಜಯ್ ಧರ್ಮಸಿಂಗ್ ಅವರು ರಾಷ್ಟ್ರಧ್ವಜಾರೋಹಣ ನೆರವೇರಿಸಿದರು. ಶಾಸಕರಾದ ಡಾ.ಶಿವರಾಜ ಎಸ್.ಪಾಟೀಲ್, ಬಸನಗೌಡ ದದ್ದಲ್, ಎಂಎಲ್ಸಿ ವಸಂತಕುಮಾರ, ಡಿಸಿ ಪೂವಿತಾ ಎಸ್. ಸಹಿತ ಪ್ರಮುಖರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.