ಬಾಗಲಕೋಟೆ ಹಸಿರು ಕೋಟೆ ಮಾಡುವ ಸಂಕಲ್ಪ: ಎಸ್.ಬಿ. ಗೌಡರ

KannadaprabhaNewsNetwork |  
Published : Jul 10, 2025, 12:46 AM IST
(ಫೋಟೋ 9ಬಿಕೆಟಿ8, ಬಾಗಲಕೋಟ-ಪರಿಸರ ಬಳಗ ಬಾಗಲಕೋಟ ಹಾಗೂ ಸೆಕ್ಟರ್ ನಂ.16ರ ನಾಗರಿಕ ಸೇವಾ ಸಮಿತಿ ಇವರ ಸಂಯುಕ್ತ ಆಶ್ರಯದಲ್ಲಿ ಸೆಕ್ಟರ್ ನಂ.16ರಲ್ಲಿ ಶ್ರಮದಾನ ಹಾಗೂ ಸಸಿ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.) | Kannada Prabha

ಸಾರಾಂಶ

ಬಾಗಲಕೋಟೆಯನ್ನು ಹಸಿರು ಕೋಟೆಯನ್ನಾಗಿ ಮಾಡುವುದು ನಮ್ಮ ಸಂಕಲ್ಪವಾಗಿದ್ದು, ಈ ನಿಟ್ಟಿನಲ್ಲಿ ನಮ್ಮ ಪರಿಸರ ಬಳಗ ಶ್ರಮ ವಹಿಸುತ್ತದೆ. ಅದಕ್ಕಾಗಿ ನಗರದಲ್ಲೆಡೆ ಪರಿಸರದ ಕುರಿತು ಅರಿವು ಮೂಡಿಸುವುದರ ಜೊತೆಗೆ ಮನುಷ್ಯನ ಸುಖ-ಸಂತೋಷ ಪ್ರಕೃತಿಯಲ್ಲಿ ಅಡಗಿದ್ದು, ಪರಿಸರ ರಕ್ಷಣೆಗೆ ನಾವೆಲ್ಲರೂ ಕೈಜೋಡಿಸಬೇಕಾಗಿದೆ ಎಂದು ಪರಿಸರ ಬಳಗದ ಅಧ್ಯಕ್ಷ ಹಾಗೂ ಪ್ರಾರ್ಥನಾ ಪಿ.ಯು. ಕಾಲೇಜಿನ ಅಧ್ಯಕ್ಷ ಎಸ್.ಬಿ. ಗೌಡರ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಬಾಗಲಕೋಟೆಯನ್ನು ಹಸಿರು ಕೋಟೆಯನ್ನಾಗಿ ಮಾಡುವುದು ನಮ್ಮ ಸಂಕಲ್ಪವಾಗಿದ್ದು, ಈ ನಿಟ್ಟಿನಲ್ಲಿ ನಮ್ಮ ಪರಿಸರ ಬಳಗ ಶ್ರಮ ವಹಿಸುತ್ತದೆ. ಅದಕ್ಕಾಗಿ ನಗರದಲ್ಲೆಡೆ ಪರಿಸರದ ಕುರಿತು ಅರಿವು ಮೂಡಿಸುವುದರ ಜೊತೆಗೆ ಮನುಷ್ಯನ ಸುಖ-ಸಂತೋಷ ಪ್ರಕೃತಿಯಲ್ಲಿ ಅಡಗಿದ್ದು, ಪರಿಸರ ರಕ್ಷಣೆಗೆ ನಾವೆಲ್ಲರೂ ಕೈಜೋಡಿಸಬೇಕಾಗಿದೆ ಎಂದು ಪರಿಸರ ಬಳಗದ ಅಧ್ಯಕ್ಷ ಹಾಗೂ ಪ್ರಾರ್ಥನಾ ಪಿ.ಯು. ಕಾಲೇಜಿನ ಅಧ್ಯಕ್ಷ ಎಸ್.ಬಿ. ಗೌಡರ ಹೇಳಿದರು.

ಪರಿಸರ ಬಳಗ ಬಾಗಲಕೋಟೆ ಹಾಗೂ ಸೆಕ್ಟರ್ ನಂ.16ರ ನಾಗರಿಕ ಸೇವಾ ಸಮಿತಿ ಇವರ ಸಂಯುಕ್ತ ಆಶ್ರಯದಲ್ಲಿ ಸೆಕ್ಟರ್ ನಂ.16ರಲ್ಲಿ ಹಮ್ಮಿಕೊಂಡ ಶ್ರಮದಾನ ಹಾಗೂ ಸಸಿ ನೆಡುವ ಕಾರ್ಯಕ್ರಮದಲ್ಲಿ ಮಾತನಾಡಿದರು.

ನಗರದಲ್ಲಿ ಪ್ರತಿ ಭಾನುವಾರ ಶ್ರಮದಾನ ನಡೆಸುವುದರ ಮೂಲಕ ನಮ್ಮ ಗುರಿ ಸಾಧಿಸುವುದಾಗಿ ತಿಳಿಸಿದ ಅವರು, ದಿನನಿತ್ಯ ಪರಿಸರ ನಾಶವಾಗುತ್ತಿದೆ. ಇದಕ್ಕೆ ಮುಖ್ಯ ಕಾರಣ ಮನುಷ್ಯನ ಆಸೆಗಳು ಹೆಚ್ಚಾಗುತ್ತಿರುವುದು. ಇಂದಿನ ಕಾಲದಲ್ಲಿ ಮನುಷ್ಯನ ಆಸೆಗಳಿಗೆ ಕೊನೆಯೇ ಇಲ್ಲದಂತಾಗಿದೆ. ಮನುಷ್ಯ ಸಮಸ್ಯೆಗಳಲ್ಲಿ ಸಿಲುಕಿಕೊಂಡಾಗ ಅದರಿಂದ ಪರಿಹಾರ ಕಂಡುಕೊಳ್ಳಲು ಮತ್ತು ಸಮಾಧಾನ, ನೆಮ್ಮದಿಗಾಗಿ ಪ್ರಕೃತಿಯನ್ನೇ ಹುಡುಕಿಕೊಂಡು ಹೋಗುತ್ತಾನೆ. ಹೀಗಿದ್ದರೂ ಸಹ ನಮ್ಮಲ್ಲಿ ಬದಲಾವಣೆಯಾಗುತ್ತಿಲ್ಲ. ನಾವೆಲ್ಲರೂ ಅಕ್ಷರವಂತರಾಗುತ್ತಿದ್ದೇವೆ. ಆದರೆ, ಬುದ್ಧಿವಂತರಾಗುತ್ತಿಲ್ಲ. ಹಿಂದೆ ನಮ್ಮ ಪೂರ್ವಜರಲ್ಲಿ ಅಕ್ಷರವಂತರ ಸಂಖ್ಯೆ ತೀರಾ ಕಡಿಮೆ ಇದ್ದರೂ ಸಹ ಅವರಲ್ಲಿ ಪರಿಸರ ಕಾಳಜಿ ಹೆಚ್ಚಾಗಿತ್ತು ಎಂದು ಹೇಳಿದರು.

ನಗರಸಭೆ ಸದಸ್ಯ ಹಾಲೇಶ ಬಳ್ಳಾರಿ ಮಾತನಾಡಿ, ಪರಿಸರ ಸಂರಕ್ಷಣೆ ನಿಟ್ಟಿನಲ್ಲಿ ಎಲ್ಲ ರೀತಿಯ ಸಹಾಯ-ಸಹಕಾರ ನೀಡುವುದಾಗಿ ತಿಳಿಸಿ ಎಲ್ಲರೂ ಪರಿಸರ ರಕ್ಷಣೆಗೆ ಸಂಕಲ್ಪ ಮಾಡಿದರು.

ಅರಣ್ಯ ಸಂರಕ್ಷಣಾಧಿಕಾರಿ ಮಹೇಶ ಮನ್ನನ್ನವರ, ಸರಕಾರಿ ಪಿಯು ಕಾಲೇಜಿನ ಉಪನ್ಯಾಸಕರಾದ ವಿ.ಜಿ. ಜಡಿಮಠ, ನ್ಯಾಯಾಂಗ ಇಲಾಖೆಯ ಬಸವರಾಜ ಬಾದೋಡಗಿ, ಪರಿಸರ ಪ್ರೇಮಿಗಳಾದ ಆರತಿ ಮಹಿಷಿ, ಸಂತೋಷ ದಾಸ, ವಿಶ್ವನಾಥ ಹೇಮಾದ್ರಿ, ಮುರಳೀಧರ ಪಮ್ಮಾರ, ಶಿಕ್ಷಕರಾದ ಎಂ.ಎಚ್. ಗಂಗಲ, ಸಿ.ಬಿ. ಬೇನಾಳ, ರಮೇಶ ಲಮಾಣಿ, ನಾಗರಿಕ ಸೇವಾ ಸಮಿತಿ ಸಂಘಟನಾ ಕಾರ್ಯದರ್ಶಿ ವಿನಾಯಕ ಪವಾರ, ನಾಗರಿಕ ಸೇವಾ ಸಮಿತಿ ಪ್ರಧಾನ ಕಾರ್ಯದರ್ಶಿ ಐ.ಡಿ.ಅತ್ತಾರ, ವಿನಾಯಕ ಭಗವತಿ, ಅಬ್ದುಲಹಮೀದ್ ಸಂಗತ್ರಾಸ್ ಇತರರು ಭಾಗವಹಿಸಿದ್ದರು.

PREV